ಶಸ್ತ್ರಚಿಕಿತ್ಸೆ ನಡೆಸಲು ೩ ಕಿ.ಮೀ. ಓಡಿಬಂದ ವೈದ್ಯ!

ಬೆಂಗಳೂರು, ಸೆ.೧೨- ಬೆಂಗಳೂರಿನಲ್ಲಿ ಟ್ರಾಫಿಕ್ ನಲ್ಲಿ ಸಿಲುಕಿದ್ದ ವೈದ್ಯರೊಬ್ಬರು ಮೂರು ಕಿ.ಮೀ ಓಡಿ ರೋಗಿಯ ಶಸ್ತ್ರಚಿಕಿತ್ಸೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಗರದ ಖಾಸಗಿ ಆಸ್ಪತ್ರೆಯೊಂದರ ವೈದ್ಯರಾಗಿರುವ ಡಾ.ಗೋವಿಂದ್ ನಂದಕುಮಾರ್ ಅವರು ನಗರದ ಟ್ರಾಫಿಕ್ ನಲ್ಲಿ ಸಿಲುಕಿದ್ದು, ರೋಗಿಯೊಬ್ಬರ ಶಸ್ತ್ರಚಿಕಿತ್ಸೆಗಾಗಿ ತಮ್ಮ ಕಾರು ಬಿಟ್ಟು ೩ ಕಿ.ಮೀ ಓಡಿಕೊಂಡು ಆಸ್ಪತ್ರೆಗೆ ತಲುಪಿದ್ದಾರೆ.
ಈ ಘಟನೆ ಆ.೩೦ ರಂದು ಬೆಳಗ್ಗೆ ೧೦ ಗಂಟೆಗೆ ನಡೆದಿದ್ದು, ಅಂದು ಒಂದು ಮಹಿಳೆಗೆ ತುರ್ತು ಲ್ಯಾಪರೊಸ್ಕೋಪಿಕ್ ಪಿತ್ತಕೋಶದ ಶಸ್ತ್ರಚಿಕಿತ್ಸೆಯನ್ನು ಮಾಡಲು ಹೊರಟಿದ್ದರು. ಆದರೆ, ವೈದ್ಯ ಗೋವಿಂದ್ ಅವರು ಸರ್ಜಾಪುರ-ಮಾರತಹಳ್ಳಿ ರಸ್ತೆಯ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದರು. ಶಸ್ತ್ರ ಚಿಕಿತ್ಸೆಗೆ ತಡವಾಗುತ್ತದೆ ಎಂದು ಅರಿತ ಡಾ. ಗೋವಿಂದ್ ಅವರು ತಮ್ಮ ಕಾರನ್ನು ಬಿಟ್ಟು ೩ ಕಿಮೀ ದೂರದವರೆಗೂ ಆಸ್ಪತ್ರೆಗೆ ಓಡಿಹೋಗಿ ತಲುಪಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಅವರು, ಬೆಂಗಳೂರಿನ ಆಗ್ನೇಯ ಭಾಗದಲ್ಲಿರುವ ಸರ್ಜಾಪುರದಿಂದ ಮಣಿಪಾಲ್ ಆಸ್ಪತ್ರೆಗಳಿಗೆ ಪ್ರತಿದಿನ ಪ್ರಯಾಣಿಸುತ್ತೇನೆ. ಶಸ್ತ್ರಚಿಕಿತ್ಸೆಗೆ ಸಮಯಕ್ಕೆ ಸರಿಯಾಗಿ ಮನೆಯಿಂದ ಹೊರಟಿದ್ದೆ, ನನ್ನ ತಂಡವು ಎಲ್ಲಾ ಸಿದ್ಧತೆಯನ್ನು ಮಾಡಿತ್ತು. ನಾನು ಆಸ್ಪತ್ರೆಗೆ ತಲುಪಿದ ತಕ್ಷಣ ಶಸ್ತ್ರಚಿಕಿತ್ಸೆ ಮಾಡಲು ಎಲ್ಲವನ್ನೂ ಸಿದ್ಧಗೊಳಿಲಾಗಿತ್ತು.ಆದರೆ ವಿಪರೀತ ಟ್ರಾಫಿಕ್ ನೋಡಿ ಕಾರನ್ನು ಬಿಟ್ಟು, ಆಸ್ಪತ್ರೆಗೆ ಓಡಿದೆ ಎಂದರು. ಕರ್ತವ್ಯ ನಿಷ್ಠೆ ಮೆರೆದ ವೈದ್ಯ ಗೋವಿಂದ್ ನಂದಕುಮಾರ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.