ಶವ ಸಾಗಿಸಲು 60 ಸಾವಿರಕ್ಕೆ ಬೇಡಿಕೆ ಇಬ್ಬರು ಆ್ಯಂಬುಲೆನ್ಸ್ ಮಾಲೀಕರ ಸೆರೆ

ಬೆಂಗಳೂರು, ಏ.22- ವಿದ್ಯುತ್ ಚಿತಾಗಾರಕ್ಕೆ ಶವ ಸಾಗಿಸಲು 60 ಸಾವಿರ ರೂಗಳಿಗೆ ಬೇಡಿಕೆಯಿಟ್ಟು ಮೃತರ ಕುಟುಂಬಸ್ಥರಿಂದ 16 ಸಾವಿರ ರೂ. ವಸೂಲಿ ಮಾಡಿದ್ದ ಇಬ್ಬರು ಆ್ಯಂಬುಲೆನ್ಸ್ ಮಾಲೀಕರನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಅಮೃತಹಳ್ಳಿಯ ಹನುಮಂತಪ್ಪ ಸಿಂಗ್ರಿ ಹಾಗೂ ಹರೀಶ್ ಬಂಧಿತ ಆರೋಪಿಗಳಾಗಿದ್ದಾರೆ.
ಕಳೆದ ಏ.20ರಂದು ಪ್ರಸಾದ್ ಎಂಬುವರು ಕೊರೊನಾದಿಂದ ಮೃತಪಟ್ಟಿದ್ದು ಆ್ಯಂಬುಲೆನ್ಸ್ ಮೂಲಕ ಚಿತಾಗಾರಕ್ಕೆ ಶವ ಸಾಗಿಸಲು ಈ ವಾಹನದ ಮೊರೆ ಹೋಗಿದ್ದರು‌. ಜೈ ಹನುಮಾನ್ ಆ್ಯಂಬುಲೆನ್ಸ್ ಮಾಲೀಕ ಹಾಗೂ ಚಾಲಕ ಹನುಮಂತಪ್ಪ ಮತ್ತು ನಂದನ ಇಂಟರ್​ ನ್ಯಾಷನಲ್ ಆ್ಯಂಬುಲೆನ್ಸ್ ಮಾಲೀಕ ಹರೀಶ್ ಎಂಬುವರನ್ನು ಮೃತರ ಮಗಳಾದ ಭವ್ಯ ಸಂಪರ್ಕಿಸಿದ್ದರು.
ಚಿತಾಗಾರಕ್ಕೆ ಶವ ಸಾಗಿಸಲು ಆ್ಯಂಬುಲೆನ್ಸ್ ಮಾಲೀಕರು 60 ಸಾವಿರಕ್ಕೆ ಡಿಮ್ಯಾಂಡ್ ಮಾಡಿದ್ದರು. ಈ ವೇಳೆ‌ ಕುಟುಂಬಸ್ಥರು 16 ಸಾವಿರ ರೂಪಾಯಿ ನೀಡಿದ್ದಾರೆ.‌ ಉಳಿದ ಹಣ ನೀಡದಿದ್ದರೆ ಶವವನ್ನು ರಸ್ತೆಯಲ್ಲೇ ಬಿಸಾಡುವುದಾಗಿ ಧಮ್ಕಿ ಹಾಕಿದ್ದರು.
ಈ ವೇಳೆ ಭವ್ಯ ಮಾಂಗಲ್ಯ ಸರ ಮಾರಿ ಹಣ ನೀಡಲು ಮುಂದಾಗಿದ್ದರು. ಈ ಕುರಿತು ಮಾಧ್ಯಮಗಳಲ್ಲಿ‌ ಸುದ್ದಿ ಪ್ರಸಾರವಾಗುತ್ತಿದ್ದಂತೆ ಅಮೃತಹಳ್ಳಿ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 384, 269, 270 ಹಾಗೂ ರಾಷ್ಟ್ರೀಯ ವಿಕೋಪ ನಿರ್ವಹಣಾ ಕಾಯ್ದೆ (ಎನ್​ಡಿಎಂಎ) ಸೆಕ್ಷನ್ 54 ಅಡಿ ಎಫ್​ಐಆರ್ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿ ಆ್ಯಂಬುಲೆನ್ಸ್ ಸಹ ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಇದೇ ರೀತಿ ಹಲವರಿಂದ ಹಣಕ್ಕೆ ಬೇಡಿಕೆ ಮಾಡಿರುವ ಶಂಕೆಯಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ನಗರ ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.
ಶವ ಸಾಗಿಸಲು ಹಣ‌ ಕೇಳಿದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಡಿಸಿಪಿ ಭರವಸೆ ನೀಡಿದ್ದಾರೆ.