ಶವ ಗುರುತು ಪತ್ತೆಗೆ ನೇಪಾಳಕ್ಕೆ ತೆರಳಿದ ಕುಟುಂಬ

ಲಕ್ನೋ, ಜ.೧೭-ನೇಪಾಳದಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಉತ್ತರ ಪ್ರದೇಶದ ಗಾಜಿಪುರದ ನಾಲ್ವರ ಕುಟುಂಬ ಸದಸ್ಯರು ಮೃತರ ಪಾರ್ಥಿವ ಶರೀರವನ್ನು ಗುರುತಿಸಲು ನೆರೆಯ ನೇಪಾಳ ದೇಶಕ್ಕೆ ತೆರಳಿದ್ದಾರೆ.

ಸ್ಥಳೀಯ ಜಿಲ್ಲಾಡಳಿತ ಸಹಾಯದಿಂದ ನಮ್ಮನ್ನು ನೇಪಾಳಕ್ಕೆ ಕರೆದೊಯ್ಯುಲಾಗಿದೆ. ಮೃತದೇಹವನ್ನು ಗುರುತಿಸಲು ಡಿಎನ್‌ಎ ಪರೀಕ್ಷೆಯನ್ನು ಮಾಡಲಾಗುತ್ತದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಐವರು ಭಾರತೀಯರು ಸೇರಿದಂತೆ ೭೨ ಜನರಿದ್ದ ಯೇತಿ ಏರ್‌ಲೈನ್ಸ್ ಪ್ರಯಾಣಿಕ ವಿಮಾನವು ಭಾನುವಾರ ನೇಪಾಳದ ರೆಸಾರ್ಟ್ ನಗರವಾದ ಪೊಖರಾದಲ್ಲಿ ಪತನಗೊಂಡು ಕನಿಷ್ಠ ೭೦ ಜನರು ಸಾವನ್ನಪ್ಪಿದ್ದಾರೆ.

ಸದ್ಯ ಈವರೆಗೆ ೬೯ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಮೂವರ ಶವ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

೬೯ ಮೃತದೇಹಗಳಲ್ಲಿ ೪೧ ಮೃತದೇಹಗಳ ಗುರುತು ಪತ್ತೆ ಮಾಡಲಾಗಿದೆ. ಶೋಧ ಕಾರ್ಯಾಚರಣೆ ಪ್ರಕ್ರಿಯೆ ಸಂಪೂರ್ಣವಾದ ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಕಸ್ಕಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ತಿಳಿದ್ದಾರೆ.

ಶೋಧ ಮತ್ತು ರಕ್ಷಣಾ ಕಾರ್ಯಕರ್ತರು ೩೦೦ ಮೀಟರ್ ಆಳದ ಕಂದಕಕ್ಕೆ ಇಳಿದು ವಿಮಾನದ ಕಾಕ್‌ಪಿಟ್ ಧ್ವನಿಮುದ್ರಕ(ಸಿವಿಆರ್) ಮತ್ತು ವಿಮಾನದ ಡೇಟಾ ರೆಕಾರ್ಡರ್ ಅನ್ನು(ಎಫ್‌ಡಿಆರ್) ಹುಡುಕಿ ತಂದಿದ್ದಾರೆ. ರೇಡಿಯೊ ಪ್ರಸರಣ ಮತ್ತು ಕಾಕ್‌ಪಿಟ್‌ನ ಇತರ ಶಬ್ದಗಳನ್ನು ಸಿವಿಆರ್‌ನಲ್ಲಿ ಧ್ವನಿಮುದ್ರಣವಾಗಿರುತ್ತದೆ. ವಿಮಾನದ ವೇಗ, ವಿಮಾನ ಹಾರಾಟದ ಎತ್ತರ, ದಿಕ್ಕು, ಪೈಲಟ್‌ನ ತೆಗೆದುಕೊಂಡ ಕ್ರಮಗಳು ಸೇರಿ ಇತರ ೮೦ ವಿವಿಧ ಬಗೆಯ ಮಾಹಿತಿಗಳು ಎಫ್‌ಡಿಆರ್‌ನಲ್ಲಿ ದಾಖಲಾಗಿರುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬ್ಲಾಕ್ ಬಾಕ್ಸ್‌ಗಳನ್ನು ನೇಪಾಳ ನಾಗರಿಕ ವಿಮಾನಯಾನ ಪ್ರಾಧಿಕಾರಕ್ಕೆ (ಸಿಎಎಎನ್) ಒಪ್ಪಿಸಲಾಗಿದೆ ಎಂದು ಯೇತಿ ಏರ್‌ಲೈನ್ಸ್ ವಕ್ತಾರರು ತಿಳಿಸಿದ್ದಾರೆ.