ಶವಸಾಗಿಸಲು ದುಪ್ಪಟ್ಟು ದರ; ಕ್ರಮವಹಿಸಲು ಜಿ.ಪಂ ಸದಸ್ಯರ ಒತ್ತಾಯ

ದಾವಣಗೆರೆ.ಏ.೨೪; ಕೋವಿಡ್ ನಿಂದಾಗಿ ಮರಣ ಹೊಂದಿದವರ ಶವ ಸಾಗಿಸಲು ಹಾಗೂ ಹೂಳಲು ದುಬಾರಿ ಹಣ ವಿಧಿಸಲಾಗುತ್ತಿದೆ ಆದ್ದರಿಂದ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಬೇಕೆಂದು ಜಿಲ್ಲಾ ಪಂಚಾಯತ್ ಸದಸ್ಯ ಬಸವಂತಪ್ಪ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಇತ್ತಿಚೆಗಷ್ಟೇ ಕೊರೊನಾದಿಂದಾಗಿ ಆನಗೋಡು ಗ್ರಾಮದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು ಅವರ ಶವ ಸಾಗಿಸಲು ಆಂಬ್ಯುಲೆನ್ಸ್ ನವರು ಸುಮಾರು ೧೩ ಸಾವಿರ ಹಣ ಪಡೆದಿದ್ದಾರೆ. ಬಡವರು,ಕೂಲಿಕಾರ್ಮಿಕರು ಈ ವೆಚ್ಚ ಭರಿಸಲು ಸಾಧ್ಯವಿಲ್ಲ ಶವಸಂಸ್ಕಾರಕ್ಕೂ ದುಬಾರಿ ವೆಚ್ಚ ತಗುಲುತ್ತಿದೆ.ಕೋವಿಡ್ ನಿಂದಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.ಆದ್ದರಿಂದ ಜಿಲ್ಲಾಡಳಿತ ಖಾಸಗಿ ಅಂಬ್ಯುಲೆನ್ಸ್ ಗಳನ್ನು ಬಾಡಿಗೆಗೆ ಪಡೆದು ಬಡವರಿಗೆ ಹಾಗೂ ಕೂಲಿಕಾರ್ಮಿಕರಿಗೆ ಉಚಿತ ಸೇವೆ ಒದಗಿಸಬೇಕು.ಕೊವಿಡ್ ನಿಂದಾಗಿ ದುಡಿಮೆ ಇಲ್ಲವಾಗಿದೆ ಇದರಿಂದ ಜನರು ಆರ್ಥಿಕ ಕಷ್ಟದಲ್ಲಿದ್ದಾರೆ.ಇಂತಹ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿಯೂ ಕೊವಿಡ್ ಚಿಕಿತ್ಸೆ ಪಡೆದವರಿಗೆ ಸರ್ಕಾರ ಶೇ ೫೦ ರಷ್ಟು ವೆಚ್ಚ ಭರಿಸಬೇಕು.ಜನರ ತೆರಿಗೆ ಹಣ ಜನರಿಗೆ ಸಲ್ಲುವಂತೆ ಮಾಡಿದರೆ ಅವರ ಆರ್ಥಿಕ ಹೊರೆ ತಪ್ಪಿಸಿದಂತಾಗುತ್ತದೆ ಅದಕ್ಕಾಗಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಖಸಗಿ ಆಸ್ಪತ್ರೆಗಳಲ್ಲಿ ರಿಯಾಯಿತಿ ನೀಡಬೇಕು.ಕೋವಿಡ್ ನಿಂದ ಮರಣಹೊಂದಿದವರಿಗೆ ರುದ್ರಭೂಮಿಯಲ್ಲಿ ಶವಸಂಸ್ಕಾರಕ್ಕೆ ಕೆಲವೆಡೆ ಅವಕಾಶ ನೀಡುತ್ತಿಲ್ಲ ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾಸ್ಪತ್ರೆಯಲ್ಲಿ ಕೊವಿಡ್ ಲಸಿಕೆ ಹಾಕಿಸಿಕೊಳ್ಳಲು ಸರತಿ ಸಾಲು ನಿರ್ಮಾಣವಾಗಿದೆ ಆದರೆ ಕಳೆದ ಕೆಲದಿನಗಳಿಂದ ಲಸಿಕೆ ಕೊರತೆ ಕಂಡುಬರುತ್ತಿದೆ.ನಿತ್ಯ ನೂರಾರು ಜನರು ಲಸಿಕೆ ಹಾಕಿಸಿಕೊಳ್ಳಲು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಕೇವಲ ೩೦೦ ಲಸಿಕೆಗಳಷ್ಟೇ ಬರುತ್ತಿದೆ ಇದರಿಂದ ಅಭಾವ ಉಂಟಾಗುತ್ತಿದೆ.ಜಿಲ್ಲಾಡಳಿತ ಈ ಕೂಡಲೇ ಅವಶ್ಯಕ ಲಸಿಕೆಗಳನ್ನು ಒದಗಿಸಲು ಕ್ರಮವಹಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಗೋವಿಂದ ಹಾಲೇಕಲ್ಲು ಇದ್ದರು.