
ಕಲಬುರಗಿ,ಆ.16-ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಲ್ಲಿ ಅಧೀಕ್ಷಕ ಅಭಿಯಂತರರಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ಸುರೇಶ್ ಎಲ್. ಶರ್ಮಾ ಅವರನ್ನು ವರ್ಗಾವಣೆಗೊಳಿಸಿದ ರಾಜ್ಯ ಸರ್ಕಾರದ ಕ್ರಮಕ್ಕೆ ದಲಿತ ಯುವ ಮುಖಂಡ ಪ್ರಕಾಶ ವಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕುವ ರಾಜ್ಯ ಸರ್ಕಾರದ ಉದ್ದೇಶವೇನೊ ಸರಿಯಿದೆ. ಆದರೆ ಸರ್ಕಾರಿ ಇಲಾಖೆಯಲ್ಲಿ ಯಾವುದೇ ಆಪಾಧನೆ, ಭ್ರಷ್ಟಾಚಾರದ ಆರೋಪ ಇಲ್ಲದ ದಕ್ಷ ಅಧಿಕಾರಿ ಡಾ.ಸುರೇಶ್ ಎಲ್. ಶರ್ಮಾ ಅವರನ್ನು ವರ್ಗಾವಣೆ ಮಾಡಿರುವುದು ಮತ್ತು ವರ್ಗಾವಣೆಗೊಳಿಸುವ ಮುನ್ನ ಬೇರೆ ಇಲಾಖೆಯಲ್ಲಿ ಸೇವೆಗೆ ನಿಯೋಜನೆ ಗೋಳಿಸದೆ ವರ್ಗಾವಣೆಗೊಳಿಸಿದ್ದು ಸರಿಯಾದ ಕ್ರವಮಲ್ಲ. ಡಾ.ಶರ್ಮಾ ಅವರಿಗೆ ಅಧೀಕ್ಷಕ ಅಭಿಯಂತರ ಹುದ್ದೆ ಮಾತ್ರವಲ್ಲ ಅದಕ್ಕಿಂತಲೂ ಉನ್ನತ ಹುದ್ದೆ ಅಲಂಕರಿಸುವ ಎಲ್ಲಾ ಅರ್ಹತೆಗಳು ಅವರಲ್ಲಿದೆ. ಜಿಲ್ಲೆಯಲ್ಲಿ ಹತ್ತು ವರ್ಷಕ್ಕಿಂತ ಹೆಚ್ಚಿಗೆ ಒಂದೇ ಕಛೇರಿಯಲ್ಲಿ ಲೆಕ್ಕವಿಲ್ಲದಷ್ಟು ಅಧಿಕಾರಿಗಳು ಸೇವೆಯಲ್ಲಿದ್ದಾರೆ. ಆದರೆ ಈ ವಿಷಯ ರಾಜ್ಯ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಬಾರದಿರುವುದು ದುರಾದೃಷ್ಟಕರ. ಡಾ.ಶರ್ಮಾ ಅವರು ಸುಮಾರು 30 ವರ್ಷಗಳ ಕಾಲ ಸರ್ಕಾರಿ ಸೇವೆಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಅತ್ಯಂತ ದಕ್ಷತೆ ಹಾಗೂ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ. ಸರ್ಕಾರದ ಯೋಜನೆಗಳು, ಕಾಮಗಾರಿಗಳು ಅನುಷ್ಠಾನಗೊಳಿಸಿದ್ದಾರೆ. ಮಲ್ಲಾಬಾದ್ ಏತ ನೀರಾವರಿ, ಜೇವರ್ಗಿ ಬ್ರಾಂಚ್ ಕ್ಯಾನಲ್, ಗ್ರಾಮೀಣ ರಸ್ತೆಗಳು, ಸಮುದಾಯ ಭವನಗಳು, ಶಾಲಾ ಹಾಗೂ ಆಸ್ಪತ್ರೆಗಳ ಕಟ್ಟಡಗಳ ನಿರ್ಮಾಣ ಜೊತೆಗೆ ಬೃಹತ್ ಕಾಲುವೆ ಮತ್ತು ಉಪ ಕಾಲುವೆಗಳು ನಿರ್ಮಿಸಿ ಲಕ್ಷಾಂತರ ಹೆಕ್ಟೇರ್ ಜಮೀನಿಗೆ ನೀರು ಹರಿಸಿ ರೈತರ ಬದುಕು ಹಸಿರಾಗಿಸಿದ್ದಾರೆ. ಇವರು ಕರ್ನಾಟಕ ನೀರಾವರಿ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಲೋಕೋಪಯೋಗಿ, ಪಂಚಾಯತ್ ರಾಜ್ ಇಲಾಖೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಹಾಗೂ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ ಅಪಾರ ಅನುಭವ ಹೊಂದಿದ್ದಾರೆ. ಡಾ.ಶರ್ಮಾ ಅವರ ಸರ್ಕಾರಿ ಸೇವೆ ಹಾಗೂ ಸಮಾಜ ಸೇವೆಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ. ಅಲ್ಲದೆ ಇವರಿಗೆ ಸರ್.ಎಂ.ವಿಶ್ವೇಶ್ವರಯ್ಯ ಪ್ರಶಸ್ತಿ, ಭಾರತ ವಿಕಾಸ ರತ್ನ ರಾಷ್ಟ್ರೀಯ ಪ್ರಶಸ್ತಿ ಜೊತೆಗೆ ಇನ್ನೂ ಹಲವು ಪ್ರಶಸ್ತಿಗಳು ಲಭಿಸಿವೆ. ಸ್ವಚ್ಛ ಭಾರತ ಮಿಷನ್ ಗುರಿ ಸಾಧಿಸಿದ್ದಕ್ಕಾಗಿ ಕಲಬುರಗಿ ಜಿಲ್ಲೆಗೆ ಗೌರವ ಪ್ರಮಾಣ ಪತ್ರ ದೊರಕಿದೆ. ಇದು ಡಾ. ಶರ್ಮಾ ಅವರ ಸೇವಾ ದಕ್ಷತೆಗೆ ಹಿಡಿದ ಕನ್ನಡಿ. ರಾಜ್ಯ ಸರ್ಕಾರ ಡಾ. ಸುರೇಶ್ ಎಲ್. ಶರ್ಮಾ ಅವರ ವರ್ಗಾವಣೆಯನ್ನು ಮರು ಪರಿಶೀಲಿಸಿ, ಅವರಿಗೆ ಸೂಕ್ತ ಇಲಾಖೆಗೆ ಉನ್ನತ್ತಾಧಿಕಾರಿಯಾಗಿ ನೇಮಿಸಿ ನ್ಯಾಯ ದೊರಕಿಸುವಂತೆ ರಾಜ್ಯ ಸರ್ಕಾರಕ್ಕೆ ವಗ್ಗೆ ಒತ್ತಾಯಿಸಿದ್ದಾರೆ.