’ಶರಾವತಿ ಮುಳುಗಡೆ ಸಂತ್ರಸ್ತರಿಗೆ ಜಮೀನು ಹಂಚಿಕೆಗೆ ಕ್ರಮ’ : ಶಾಸಕ ಕೆ.ಬಿ.ಅಶೋಕನಾಯ್ಕ್


ಶಿವಮೊಗ್ಗ, ನ. ೧೦: ಶಿವಮೊಗ್ಗ ತಾಲೂಕಿನಲ್ಲಿರುವ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಮೊದಲ ಹಂತದಲ್ಲಿ ಸರ್ಕಾರದಿಂದ ಮಂಜೂರಾಗಿರುವ ಜಮೀನನನ್ನು ಪಾರದರ್ಶಕವಾಗಿ ಹಂಚಿಕೆ ಮಾಡಲಾಗುವುದು ಎಂದು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಬಿ.ಅಶೋಕನಾಯ್ಕ್ ತಿಳಿಸಿದ್ದಾರೆ.
ಶಿವಮೊಗ್ಗ ನಗರದ ತಮ್ಮ ಕಚೇರಿ ಸಭಾಂಗಣದಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಸಂಬಂಧಿಸಿದ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಸದ್ಯ ಸರ್ಕಾರದಿಂದ ಮಂಜೂರಾಗಿರುವ ೧೩೧ ಎಕರೆ ಜಮೀನು ಹಂಚಿಕೆ ಬಗ್ಗೆ, ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ತಂಡ ಜಂಟಿಯಾಗಿ ಸರ್ವೇ ನಡೆಸಲಿದೆ. ತದನಂತರ ಸಂತ್ರಸ್ತರಿಗೆ ಜಮೀನು ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.
ಇನ್ನೂ ಹಲವು ಸಂತ್ರಸ್ತ ರೈತರ ಹೆಸರು ಆಯ್ಕೆ ಪಟ್ಟಿಯಲ್ಲಿ ಬಿಟ್ಟು ಹೋಗಿರುವ ಕುರಿತಂತೆ ಸಭೆಯಲ್ಲಿ ಚರ್ಚೆ ಆಯಿತು. ಕೆಲ ರೈತರು ತಮ್ಮ ಹೆಸರು ಕೈಬಿಟ್ಟು ಹೋಗಿರುವ ಬಗ್ಗೆ ಶಾಸಕರ ಗಮನಕ್ಕೆ ತಂದರು.
ಸಂತ್ರಸ್ತರ ಅಹವಾಲು ಆಲಿಸಿದ ನಂತರ ಶಾಸಕರು ಮಾತನಾಡಿ, ’ಸಂತ್ರಸ್ತರು ಸಾಗುವಳಿ ಮಾಡುತ್ತಿರುವ ಜಮೀನಿನ ಪಹಣಿ ಹೊಂದಿದ್ದಾರೆ. ಆದರೆ ಆಯ್ಕೆ ಪಟ್ಟಿಯಲ್ಲಿ ಅವರ ಹೆಸರುಗಳು ಬಿಟ್ಟು ಹೋಗಿದೆ. ಎಲ್ಲ ಅರ್ಹ ಸಂತ್ರಸ್ತರಿಗೆ ನ್ಯಾಯ ದೊರಕಬೇಕು. ಆ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ’ ತಹಶೀಲ್ದಾರ್‌ರವರಿಗೆ ಸೂಚಿಸಿದರು.
ತಹಶೀಲ್ದಾರ್ ಮಾಹಿತಿ: ಶರಾವತಿ ಮುಳುಗಡೆ ಸಂತ್ರಸ್ತರಿಗೆ ಮಂಜೂರಾಗಿರುವ ಭೂಮಿ ಹಾಗೂ ಸಂತ್ರಸ್ತರಿಗೆ ಸಂಬಂಧಿಸಿದಂತೆ ಪ್ರಸ್ತುತವಿರುವ ಇತರೆ ವಿಷಯಗಳ ಕುರಿತಂತೆ ಶಿವಮೊಗ್ಗ ತಹಶೀಲ್ದಾರ್ ಎನ್.ಜೆ.ನಾಗರಾಜ್‌ರವರು ಸಭೆಯ ಮುಂದೆ ಸಮಗ್ರ ವಿವರ ಮುಂದಿಟ್ಟರು. ನ್ಯಾಯಾಲಯ, ಸರ್ಕಾರ, ಅರಣ್ಯ ಇಲಾಖೆ ಆದೇಶ ಮತ್ತೀತರ ಆಡಳಿತಾತ್ಮಕ ಅಂಶಗಳ ಸವಿವರ ಮಾಹಿತಿಯನ್ನು ಸಂತ್ರಸ್ತರ ಗಮನಕ್ಕೆ ತರುವ ಮೂಲಕ ಎಲ್ಲರ ಗಮನ ಸೆಳೆದರು.
ಸಭೆಯಲ್ಲಿ ತಹಶೀಲ್ದಾರ್ ಎನ್.ಜೆ.ನಾಗರಾಜ್, ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಹಿರಿಯ ಅಧಿಕಾರಿ ಐ.ಎಂ.ನಾಗರಾಜ್ ಸೇರಿದಂತೆ ಮೊದಲಾದವರಿದ್ದರು.

ಭದ್ರಾವತಿ ತಹಶೀಲ್ದಾರ್ ಆಗಿ ಸಂತೋಷ್ ಕುಮಾರ್ ನೇಮಕ
ಭದ್ರಾವತಿ ತಹಶೀಲ್ದಾರ್ ಆಗಿ ಸಂತೋಷ್ ಕುಮಾರ್‌ರವರು ಅಧಿಕಾರ ಸ್ವೀಕರಿಸಿದ್ದಾರೆ. ಪ್ರಭಾರ ತಹಶೀಲ್ದಾರ್ ಆಗಿದ್ದ ಶಿವಮೊಗ್ಗದ ತಹಶೀಲ್ದಾರ್ ಎನ್.ಜೆ.ನಾಗರಾಜ್‌ರವರು, ನೂತನ ತಹಶೀಲ್ದಾರ್‌ಗೆ ಅಧಿಕಾರ ಹಸ್ತಾಂತರಿಸಿದರು.
ಸಂತೋಷ್ ಕುಮಾರ್‌ರವರು ಬೆಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ವಿಭಾಗದ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇದಕ್ಕೂ ಮೊದಲು ಅವರು ದಾವಣಗೆರೆ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿದ್ದರು.
’ಜನಸಾಮಾನ್ಯರ ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಸ್ಪಂದಿಸಲಾಗುವುದು. ಕಡತಗಳ ವಿಲೇವಾರಿ ಚುರುಕುಗೊಳಿಸಲಾಗುವುದು. ತಹಶೀಲ್ದಾರ್ ಕಚೇರಿ ಆಡಳಿತದಲ್ಲಿ ಆಮೂಲಾಗ್ರ ಬದಲಾವಣೆ ತರಲಾಗುವುದು’ ಎಂದು ನೂತನ ತಹಶೀಲ್ದಾರ್ ಸಂತೋಷ್ ಕುಮಾರ್‌ರವರು ತಿಳಿಸಿದ್ದಾರೆ.