ಶರಣ ಹರಳಯ್ಯನವರ ಸಾಮಾಜಿಕ ಕೊಡುಗೆ ಅನನ್ಯ

ಕಲಬುರಗಿ: ಏ.23: ಹನ್ನೆರಡನೆ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ಸಾಮಾಜಿಕ ನ್ಯಾಯ, ಸರ್ವರ ಏಳಿಗೆ, ಕಲ್ಯಾಣ ರಾಜ್ಯ ನಿರ್ಮಾಣಕ್ಕಾಗಿ ಕ್ರಾಂತಿಯಾಯಿತು. ಶರಣ ಹರಳಯ್ಯನವರು ಬಸವಣ್ಣನವರ ಜೊತೆಗೂಡಿ ಸಮ-ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಮಂಗಳವಾರ ಸಂಜೆ ಜರುಗಿದ ‘ಶರಣ ಹರಳಯ್ಯನವರ ಜಯಂತಿ’ಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಹರಳಯ್ಯನವರು ಬಾಲ್ಯದಿಂದಲೇ ಭಕ್ತಿ, ಗುರು-ಹಿರಿಯರಲ್ಲಿ ಶೃದ್ಧೆ, ಸಾಮಾಜಿಕ ಕಳಕಳಿ ಹೊಂದಿದ್ದರು. ತಮ್ಮ ಮಗ ಶೀಲವಂತ ಮತ್ತು ಮಧುವರಸರ ಮಗಳು ಕಲಾವತಿ ಅವರ ವಿವಾಹದಿಂದ ಪಟ್ಟಭದ್ರಹಿತಾಸಕ್ತಿಗಳಿಂದ ಅಂತರ್ಜಾತಿ ನೆಪವೊಡ್ಡಿ ಕಲ್ಯಾಣ ಕ್ರಾಂತಿಗೆ ಕಾರಣವಾಯಿತು. ತಮ್ಮದೇ ಆದ ವಚನಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಬಸವಾದಿ ಶರಣರ ಕೊಡುಗೆ ನಾವೆಂದಿಗೂ ಮರೆಯುವಂತಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ, ಕಸಾಪ ಉತ್ತರ ವಲಯ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಮುಖರಾದ ನಿಲೋಫರ್ ಶೇಖ್, ಇರ್ಫಾನ್ ಶೇಖ್, ಮಂಜುನಾಥ, ಭುವನೇಶ್ವರಿ ಪೊಲೀಸ್ ಪಾಟೀಲ, ರಮೇಶ್, ಅರುಣಕುಮಾರ ಸೇರಿದಂತೆ ಇನ್ನಿತರರಿದ್ದರು.