ಶರಣ ಸಾಹಿತ್ಯಕ್ಕೆ ಜಯದೇವಿ ತಾಯಿ ಲಿಗಾಡೆ ಕೊಡುಗೆ ಅನನ್ಯ

ಕಲಬುರಗಿ: ಜೂ.23: ಕರ್ನಾಟಕದ ಗಡಿಭಾಗದಲ್ಲಿನ ಮರಾಠಿ ಪ್ರಾಬಲ್ಯದಿಂದ ಕನ್ನಡವನ್ನು ಉಳಿಸಿ, ಬೆಳೆಸುವಲ್ಲಿ ಮತ್ತು ಶರಣ ಸಾಹಿತ್ಯದ ರಕ್ಷಕರಾಗಿ ತಮ್ಮದೇ ಆದ ಅಮೂಲ್ಯವಾದ ಕೊಡುಗೆಯನ್ನು ಶರಣೆ ಜಯದೇವಿ ತಾಯಿ ಲಿಗಾಡೆಯವರು ನೀಡಿದ್ದಾರೆಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಎಸ್.ಬಿ.ಕಾಲೇಜು ಎದುರುಗಡೆಯಿರುವ ‘ಕೊಹಿನೂರ ಕಂಪ್ಯೂಟರ ತರಬೇತಿ ಸಂಸ್ಥೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಸಂಜೆ ಜರುಗಿದ ‘ಶರಣೆ ಜಯದೇವಿ ತಾಯಿ ಲಿಗಾಡೆಯವರ 111ನೇ ಜಯಂತಿ’ಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಸಂಸ್ಥೆಯ ಕಾರ್ಯದರ್ಶಿ ಪ್ರೊ.ಭೀಮಾಶಂಕರ ಎಸ್.ಘತ್ತರಗಿ ಮಾತನಾಡಿ, ಆಧ್ಯಾತ್ಮ ಚಿಂತಕಿ, ಸಮಾಜ ಸೇವಕಿ, ಸಾಹಿತ್ಯ ಸಾಧಕಿಯಾಗಿ ‘ಗಡಿನಾಡು ದುರ್ಗಾ’ ಎಂಬ ಬಿರುದಾಂಕಿತ ಲಿಗಾಡೆಯವರು ಬಹುಮುಖ ವ್ಯಕ್ತಿತ್ವದ ಮೇರು ಸಾಧಕಿಯಾಗಿದ್ದಾರೆ. ಕರ್ನಾಟಕ ಏಕೀಕರಣದಲ್ಲಿ ಮುಂಚೂಣಿ ಹೋರಾಟಗಾರರಾಗಿ ಮಾಡಿದ ಸೇವೆ ಅವಿಸ್ಮರಣೀಯ. ನಾಡು, ನುಡಿ, ಸಾಹಿತ್ಯ, ಶರಣ ಸಾಹಿತ್ಯ ಚಿಂತನೆಯ ಮೂಲಕ ಲಿಗಾಡೆಯವರು ನೀಡಿದ ಕೊಡುಗೆ ಅವಿಸ್ಮರಣೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ಶಿವಯೋಗಪ್ಪ ಬಿರಾದಾರ, ಪರಮೇಶ್ವರ ಬಿ.ದೇಸಾಯಿ, ದೇವೇಂದ್ರಪ್ಪ ಗಣಮುಖಿ, ಸಿದ್ದರಾಮ ಎಸ್., ಶಿವಶರಣಪ್ಪ ಕಲಶೆಟ್ಟಿ, ಭರತ ಆರ್.ವಡಗೇರಿ, ಪ್ರಿಯಾಂಕಾ ಜಾಧವ, ಲಕ್ಷ್ಮಣ ಭೋವಿ ಸೇರಿದಂತೆ ಮತ್ತಿತರರಿದ್ದರು.