ಶರಣ ಸಂಸ್ಕೃತಿ ಉತ್ಸವದಲ್ಲಿ ಮಹಿಳಾ ಕ್ರೀಡಾಕೂಟ


ಚಿತ್ರದುರ್ಗ. ಅ.೧೨; ಮಹಿಳೆಯರಿಗೆ ಹೆಚ್ಚಿನ ಹೊಣೆಗಾರಿಕೆಗಳಿವೆ ಎಂದು ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರು ನುಡಿದರು. ಶ್ರೀಗಳು ಶರಣ ಸಂಸ್ಕೃತಿ ಉತ್ಸವ-2021ರ ಅಂಗವಾಗಿ  ಶ್ರೀಮಠದ ಮುರುಗಿಯ ಶಾಂತವೀರಸ್ವಾಮಿ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಚಿತ್ರದುರ್ಗ ಸ್ಥಳೀಯ ಮಹಿಳೆಯರ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಮಹಿಳೆಯರಿಗೆ ಅತಿ ಹೆಚ್ಚು ಹೊಣೆಗಾರಿಕೆಗಳಿದ್ದು, ಅವುಗಳನ್ನು ಜಾಗರೂಕತೆಯಿಂದ ನಿಭಾಯಿಸುವುದು ಮಹಿಳೆಯರ ಕರ್ತವ್ಯ. ಮಹಿಳೆಯರಲ್ಲಿ ಪ್ರತಿಭೆಯಿದೆ ಆದರೆ ಪ್ರೋತ್ಸಾಹವಿಲ್ಲ. ಇಂತಹ ಪ್ರೋತ್ಸಾಹವನ್ನು ಶ್ರೀ ಮುರುಘಾ ಮಠ ನೀಡುತ್ತಾ ಬಂದಿದೆ. ಹೆಣ್ಣುಮಕ್ಕಳಿಗೆ ತಮ್ಮ ಶಕ್ತಿ ಮತ್ತು ಯುಕ್ತಿಯನ್ನು ತೋರಿಸುವ ದಿಸೆಯಲ್ಲಿ ಈ ಕ್ರೀಡಾಕೂಟವನ್ನು ಆಯೋಜಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವುದು ಸಂತೋಷದ ವಿಚಾರ. ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಕ್ರೀಡಾಕೂಟವನ್ನು ಸಂಘಟಿಸುವ ಆಲೋಚನೆಯಿದೆ. ಅದಕ್ಕಾಗಿ ತಾವುಗಳು ಈಗಿನಿಂದಲೇ ಹೆಚ್ಚಿನ ತಯಾರಿ ಮಾಡಿಕೊಂಡಲ್ಲಿ ಯಶಸ್ಸುಗಳಿಸಲು ಸಾಧ್ಯ. 13ನೇ ತಾರೀಖಿನಿಂದ ಸಹಜ ಶಿವಯೋಗ ಕಾರ್ಯಕ್ರಮ ಆರಂಭವಾಗಲಿದ್ದು, ಶಿವಯೋಗ ಶರೀರಧಾರಿಯಾದ ಎಲ್ಲಾ ಮಾನವರಿಗೂ ಶಿವಯೋಗ ಅವಶ್ಯಕ. ಅಂತರಂಗದ ಶುದ್ಧಿಗೆ ಶಿವಯೋಗ ಅತ್ಯವಶ್ಯ. ತಾವೆಲ್ಲರೂ ಕುಟುಂಬ ಸಮೇತ ಸಹಜ ಶಿವಯೋಗದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಿ ಎಂದು ನುಡಿದರು.ಧಾರವಾಡದ ಬಸವತತ್ವದ ಪ್ರಚಾರಕರಾದ ಅಕ್ಕ ನಾಗಲಾಂಭಿಕೆ ಮಾತನಾಡಿ, ಸ್ತ್ರೀಯರಿಗೆ ಸಮಾನತೆ ಕಲ್ಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಹಿಂದೆ ಹೆಣ್ಣು ಮಕ್ಕಳಿಗೆ ಅವಕಾಶಗಳಿರಲಿಲ್ಲ. ಅಕ್ಕ ನಾಗಲಾಂಭಿಕೆ ಮೂಲಕ ಸಾಧನೆಯನ್ನು ಮಾಡಲು ಬಸವಣ್ಣನವರು ಅವಕಾಶ ಮಾಡಿಕೊಟ್ಟಿದ್ದರು. ಅಕ್ಕ ನಾಗಲಾಂಭಿಕೆ, ಅಕ್ಕ ಮಹಾದೇವಿಯವರ ನೆನಪಿಗಾಗಿ ಅವರ ಹೆಸರಿನಲ್ಲಿ ಕ್ರೀಡಾಕೂಟದಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಎಲ್ಲರಿಗೂ ಶುಭವಾಗಲಿ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಶರಣ ಸಂಸ್ಕೃತಿ ಉತ್ಸವ-2021ರ ಗೌರವಾಧ್ಯಕ್ಷರಾದ ಶ್ರೀ ಮಾದಾರಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು, ಹರಿಹರದ ಕವಲೆತ್ತುವಿನ ಶರಣೆ ಮುಕ್ತಾಯಕ್ಕ, ಹರಗುರು ಚರಮೂರ್ತಿಗಳು, ನಗರಸಭೆ ಅಧ್ಯಕ್ಷೆ ಶ್ರೀಮತಿ ತಿಪ್ಪಮ್ಮ ವೆಂಕಟೇಶ್, ಎಸ್.ಜೆ.ಎಂ.ವಿದ್ಯಾಪೀಠದ ಕಾರ್ಯದರ್ಶಿಗಳಾದ ಶ್ರೀ ಎ.ಜೆ.ಪರಮಶಿವಯ್ಯ ಮುಂತಾದವರು ಉಪಸ್ಥಿತರಿದ್ದರು. .