ಶರಣ ಸಂಸ್ಕೃತಿ ಅಧ್ಯಯನ ಮಾದರಿ

ಭಾಲ್ಕಿ:ಮಾ.11: ವಿಶ್ವ ಬಸವಧರ್ಮ ಟ್ರಸ್ಟ್ ಅನುಭವ ಮಂಟಪ ಬಸವಕಲ್ಯಾಣ ಪ್ರಕಾಶನದಲ್ಲಿ ಹೊರ ತಂದಿರುವ
ಅನುಭವ ಮಂಟಪ ಸಂಸ್ಕೃತಿ ಪುಸ್ತಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಬಿಡುಗಡೆ ಮಾಡಿದರು.
ಬೆಂಗಳೂರಿನ ವಿಧಾನ ಸೌಧದ ಸಭಾಪತಿ ಕೊಠಡಿಯಲ್ಲಿ ಬುಧವಾರ ಅನುಭವ ಮಂಟಪ ಸಂಸ್ಕೃತಿ ಪುಸ್ತಕ ಬಿಡುಗಡೆ ಮಾಡಿದ ಹೊರಟ್ಟಿ ಅವರು, ಮಕ್ಕಳಿಗೆ ಶರಣ ಸಂಸ್ಕೃತಿ ಪರಿಚಯಿಸುವ ನಿಟ್ಟಿನಲ್ಲಿ ಡಾ.ಬಸವಲಿಂಗ ಪಟ್ಟದ್ದೇವರು ಅವರು ಬೀದರ್‍ನಲ್ಲಿ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯ ಪ್ರಾರಂಭಿಸಿದ್ದು ಶ್ಲಾಘನೀಯ.
6ನೆಯ ತರಗತಿಯಿಂದ 10ನೆಯ ತರಗತಿ ವರೆಗೆ ಹೆಣ್ಣುಮಕ್ಕಳಿಗೆ ಶಿಕ್ಷಣ, ಅನ್ನ, ವಸತಿ ಸಂಪೂರ್ಣವಾಗಿ ಉಚಿತ ಕಲ್ಪಿಸುವುದರ ಜತೆಗೆ ಪಠ್ಯದಲ್ಲಿ ಅನುಭವ ಮಂಟಪ ಸಂಸ್ಕೃತಿ ಭಾಗ 1 ಪುಸ್ತಕ ಅಧ್ಯಯನಕ್ಕೆ ಅಳವಡಿಸಿರುವುದು ಹರ್ಷದ ಸಂಗತಿ.
ಇದರಿಂದ ಶರಣರ ಚರಿತ್ರೆ, ಕವನಗಳು, ವಚನಗಳು, ಶರಣರ ಸ್ಮಾರಕ ಸೇರಿ ಮುಂತಾದ ವಿಷಯಗಳ ಬಗ್ಗೆ ತಿಳಿದು ಕೊಳ್ಳಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‍ನ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು, ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ನ ನಿರ್ದೇಶಕ ಶಶಿಧರ ಕೋಸಂಬೆ ಜತೆಗಿದ್ದರು. ಡಾ.ವೀರಣ್ಣ ದಂಡೆ, ಡಾ.ಜಯಶ್ರೀ ದಂಡೆ ಅವರು ಅನುಭವ ಮಂಟಪ ಸಂಸ್ಕೃತಿ ಪುಸ್ತಕದ ಸಂಪಾದಕರಾಗಿದ್ದಾರೆ.