
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೧೩;ದೀನದಲಿತರ ಬಗ್ಗೆ ಅನುಕಂಪ ಹೊಂದಿ, ಸರ್ವರಿಗೂ ಸಮಬಾಳು- ಸಮಪಾಲು ತತ್ವದ ಚಿಂತಕರಾಗಿ,ಸ್ವಾತಂತ್ಯ್ರ ಪೂರ್ವದಲ್ಲೇ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಸರಿಯಾದ ವಿದ್ಯುತ್ ,ರಸ್ತೆ ಸಂಪರ್ಕವಿಲ್ಲದ ನಾಡಿನ ನೂರಾರು ಕುಗ್ರಾಮಗಳಲ್ಲಿ ಶಾಲಾ ಕಾಲೇಜುಗಳನ್ನು ತೆರೆದು ಹಳ್ಳಿ ಮಕ್ಕಳ ಬಾಳನ್ನು ಹಸನುಗೊಳಿಸುವುದರ ಜೊತೆಗೆ ನಾಟಕ ಕಲೆ-ಸಾಹಿತ್ಯ-ಸಂಸ್ಕೃತಿ ಪ್ರಸರಣೆಗಳಿಗೆ ಪ್ರಾಮುಖ್ಯತೆ ನೀಡಿದ್ದ ಸಿರಿಗೆರೆಯ ಲಿಂಗೈಕ್ಯ ಶಿವಕುಮಾರ ಶ್ರೀಗಳು ಶರಣ ಸಂಸ್ಕೃತಿಯ ಸಾಕಾರ ರೂಪವಾಗಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಲ್.ಜಿ.ಮಧುಕುಮಾರ್ ಬಣ್ಣಿಸಿದರು.ಅವರು ಚನ್ನಗಿರಿ ಸಮೀಪದ ಅಜ್ಜಿಹಳ್ಳಿಯ ಅನುಭವ ಮಂಟಪದ ಶಾಲಾ ಸಂಕೀರ್ಣದಲ್ಲಿ ಲಿಂಗೈಕ್ಯ ಶಿವಕುಮಾರ ಗುರುಗಳ 31 ನೇ ಶ್ರದ್ಧಾಂಜಲಿ ಕಾರ್ಯಕ್ರಮದ ಪ್ರಯುಕ್ತ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮದಲ್ಲಿ ಮಾತನಾಡಿ ಲಿಂಗೈಕ್ಯ ಶಿವಕುಮಾರ ಗುರುಗಳು ಆಗಿನ ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಜನಸಾಮಾನ್ಯರ ಅರಿವಿನ ಒಳಗಣ್ಣುಗಳನ್ನು ತೆರೆಸಲು ವಿವಾಹ , ಶಿವಗಣಾರಾಧನೆ, ಗೃಹ ಪ್ರವೇಶದಂತಹ ಕಾರ್ಯಕ್ರಮಗಳಲ್ಲಿ ಸರ್ವ ಶರಣ ಸಮ್ಮೇಳನವನ್ನು ಹಾಗೂ ನಾಡಿನಾದ್ಯಂತ ತರಳಬಾಳು ಹುಣ್ಣಿಮೆಯಂತಹ ವೈಚಾರಿಕ ನೆಲೆಗಟ್ಟಿನ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಜನಮಾನಸದಲ್ಲಿ ಐಕ್ಯತೆಯ ಬೀಜವನ್ನು ಬಿತ್ತುವುದರ ಜೊತೆಗೆ ವಿಶ್ವಬಂಧು ಮರುಳಸಿದ್ದರ ಚಿಂತನೆ, ಬಸವಣ್ಣನವರ ತತ್ವ ಸಿದ್ದಾಂತಗಳ ತಳಹದಿಯಲ್ಲಿ ಅವರ ಆಶಯಗಳನ್ನು ಈಡೇರಿಸುವ ಮಹತ್ಕಾರ್ಯಗಳನ್ನು ಮಾಡಿ ಶರಣ ದೀವಿಗೆಯನ್ನು ಬೆಳಗಿಸಿದ್ದರು ಎಂದರು.ದುಗ್ಗಾಣಿ ಮಠವಾಗಿದ್ದ ಸಿರಿಗೆರೆಯ ಮಠದ ಅಭ್ಯುದಯಕ್ಕಾಗಿ ತಮ್ಮ ಕಾಯಕ ನಿಷ್ಠೆ, ದೂರ ದರ್ಶಿತ್ವ, ಸಂಘಟನಾ ಶಕ್ತಿ, ನೇರ ನಿಷ್ಠುರ ನುಡಿ ಹಾಗೂ ದಿಟ್ಟ ಹೆಜ್ಜೆಗಳಿಂದ ದುಡಿಯುವ ಮಠವನ್ನಾಗಿ ಮಾಡಿ ,ಶಿಷ್ಯರು- ಮಠದ ನಡುವೆ ಮಧುರ ಬಾಂಧವ್ಯ ಕಲ್ಪಿಸಿ ಮಠಕ್ಕೆ ನಾನೇನು ಮಾಡಿದೆ ಎಂದು ಯೋಚಿಸುವ ಸಮರ್ಪಣಾ ಭಾವದ ಭಕ್ತರನ್ನು ರೂಪಿಸಿದ ಕೀರ್ತಿ ಲಿಂಗೈಕ್ಯ ಶಿವಕುಮಾರ ಗುರುಗಳಿಗೆ ಸಲ್ಲುತ್ತದೆ ಎಂದು ಅಭಿಪ್ರಾಯ ಪಟ್ಟರು.ತರಳಬಾಳು ವಿದ್ಯಾಸಂಸ್ಥೆಯ ಶಿವಮೊಗ್ಗ ಪ್ರಾದೇಶಿಕ ವಲಯದ ಪ್ರೌಢಶಾಲೆಗಳ ವಿದ್ಯಾರ್ಥಿಗಳು ವಚನನೃತ್ಯ, ಜಾನಪದ ನೃತ್ಯ ,ಚಿತ್ರಕಲೆ, ಏಕಪಾತ್ರಾಭಿನಯ ನಾಟಕ ,ಆಶುಭಾಷಣ ಮುಂತಾದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.