ಶರಣ ಸಂಕುಲ ಸಾರ್ವಕಾಲಿಕ ಶ್ರೇಷ್ಠರಂಗಾಯಣದ ಕರಿಕಾಳ ಚೋಳ ವಿಶೇಷ ಪ್ರದರ್ಶನ

ಕಲಬುರಗಿ :ಮಾ:12: ಜಾತಿ ಮತಗಳನ್ನು ಮೀರಿದ ಅಂತಃಕರಣವುಳ್ಳ ಶರಣ ಸಂಕುಲವು ಸಾರ್ವಕಾಲಿಕ ಶ್ರೇಷ್ಠವಾಗಿದೆ ಎಂದು ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಹೇಳಿದರು.
ಡಾ.ಎಸ್.ಎಂ.ಪಂಡಿತ ರಂಗ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಕರಿಕಾಳ ಚೋಳ ನಾಟಕದ ವಿಶೇಷ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಭಿನ್ನ ನಾಟಕಗಳನ್ನು ಆಡುವ ಮೂಲಕ ಕಲಬುರಗಿ ರಂಗಾಯಣ ತಂಡವು ಸಮಾಜದ ಎಲ್ಲ ವರ್ಗಗಳನ್ನು ತಲುಪುವ, ಆ ಮೂಲಕ ಸಾಂಸ್ಕೃತಿಕ ಅರಿವನ್ನು ಮೂಡಿಸುವ ದಿಸೆಯಲ್ಲಿ ಶ್ರಮಿಸುತ್ತಿದೆ ಎಂದರು.
ಕರಿಕಾಳ ಚೋಳ ನಾಟಕದ ರಚನೆಕಾರರಾದ ಮಹಾಂತೇಶ ನವಲಕಲ್ ಮಾತನಾಡಿ, ಜಾತಿ ನಿರ್ಮೂಲನೆಯೇ ಶರಣರ ನಿಜವಾದ ಆಶಯಗಳಾಗಿದ್ದವು. ಇಂತಹ ಸೂಕ್ಷ್ಮ ವೈಚಾರಿಕ ವಸ್ತುವುಳ್ಳ ನಾಟಕವನ್ನು ಕಲಬುರಗಿ ರಂಗಾಯಣ ಕೈಗೆತ್ತಿಕೊಂಡು ಪ್ರದರ್ಶನ ಮಾಡಿದ್ದು ಅಭಿನಂದನೀಯ ಎಂದರು. ಎಲ್ಲ ಕಲಾವಿದರು ಅತ್ಯುತ್ತಮವಾಗಿ ಅಭಿನಯಿಸಿದ್ದು ಮೆಚ್ಚುವಂತದ್ದಾಗಿದೆ ಎಂದರು.
ಸಮುದಾಯ ಜನರಿಗಾಗಿ ವಿಶೇಷ ನಾಟಕ ಪ್ರದರ್ಶನ ನೀಡಿದ ರಂಗಾಯಣಕ್ಕೆ ಧನ್ಯವಾದಗಳು ಸಲ್ಲುತ್ತವೆ ಎಂದು ದಲಿತ ಮಾದಿಗ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ತಾರಫೈಲ್, ಪ್ರಧಾನ ಕಾರ್ಯದರ್ಶಿ ಬಸವರಾಜ ಜವಳಿ ಹೇಳಿದರು. ಪ್ರದರ್ಶನದಲ್ಲಿ ಸಮಾಜ ಸೇವಕರಾದ ಸೇಡಂನ ಗಣಪತರಾವ ಚಿಮ್ಙನಚೋಡ್ಕರ್, ರಾಜಕುಮಾರ ಹೊಸಮನಿ, ದಿಗಂಬರ ತ್ರಿಮೂರ್ತಿ, ಅರುಂಧತಿ ನಾಗಮೂರ್ತಿ, ಶ್ರೀಮಂತ ಬಂಡಾರಿ, ಮಲ್ಲಿಕಾರ್ಜುನ ದಿನ್ನಿ, ಸುಭಾಷ ಕಾಂಬಳೆ, ಅಮೃತ ಕೊರಳ್ಳಿ ಇತರರು ಇದ್ದರು.