ಶರಣ ಮೇದಾರ ಕೇತಯ್ಯನವರ ಕಾಯಕ-ದಾಸೋಹ ಪ್ರಜ್ಞೆ ಮಾದರಿ

ಕಲಬುರಗಿ,ಜ 8: ಬಸವಾದಿ ಶರಣರಾದ ಮೇದಾರ ಕೇತಯ್ಯನವರು ಎಂತಹ ಕಷ್ಟದ ಸ್ಥಿತಿಯಲ್ಲಿಯೂ ಕೂಡಾ ತಮ್ಮ ಕಾಯಕದಿಂದ ವಿಚಲಿತರಾದವರಲ್ಲ. ಸತ್ಯ ಶುದ್ಧವಾದ ಕಾಯಕದಲ್ಲಿಯೇ ಶಿವನನ್ನು ಕಂಡವರು. ಬಸವಣ್ಣನವರ ಜೊತೆಗೂಡಿ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ. ಅವರಲ್ಲಿರುವ ಕಾಯಕ-ದಾಸೋಹ ಪ್ರಜ್ಞೆ ಪ್ರಸ್ತುತ ಸಮಾಜಕ್ಕೆ ಮಾದರಿಯಾಗಿದೆ ಎಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಹೊರವಲಯದ ಉಪಳಾಂವ ಗ್ರಾಮದ ‘ಶ್ರೀರಾಮ ಕನ್ನಡ ಕಾನ್ವೆಂಟ್ ಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಜರುಗಿದ ‘ಶರಣ ಮೇದಾರ ಕೇತಯ್ಯನವರ ಜಯಂತಿ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕೇತಯ್ಯನವರು ‘ಗೌರೇಶ್ವರ’ ಎಂಬ ಅಂಕಿತನಾಮದಿಂದ ರಚಿಸಿರುವ 12 ವಚನಗಳು ಲಭ್ಯವಾಗಿವೆ. ಅದರಲ್ಲಿ ಕಾಯಕ, ದಾಸೋಹ, ಸಮಾಜ ಸೇವೆ ಸೇರಿದಂತೆ ಅನೇಕ ಮೌಲಿಕ ವಿಚಾರಗಳನ್ನು ತಿಳಿಸಿದ್ದಾರೆ. ಅವರು ಜಂಗಮ ಪ್ರೇಮಿಯಾಗಿದ್ದು ಕಂಡುಬರುತ್ತದೆ. ಮೇದಾರ ಕೇತ್ಯಯ್ಯನವರ ಕಾಲವನ್ನು 1160 ಎಂದು ಗುರ್ತಿಸಲಾಗಿದೆ. ಇವರನ್ನು ಕೇತ್ರ, ಕೇತ್ರದೇವ, ಕೇತಯ್ಯ, ಕೇತತಂದೆ, ಕೇತಿದೇವಯ್ಯ ಎಂಬ ವಿವಿಧ ಹೆಸರುಗಳಿಂದ ಕರೆಯಲಾಗಿದೆ. ಬಸವಣ್ಣನವರ ಪ್ರಭಾವಕ್ಕೆ ಒಳಗಾಗಿ ದಯೆ,ಕರುಣೆ, ಕಾಯಕ, ದಾಸೋಹ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕಿದವರಾಗಿದ್ದಾರೆ ಎಂದರು.
ಸಂಸ್ಥೆಯ ಅಧ್ಯಕ್ಷ ಗೌಡೇಶ ಬಿರಾದಾರ ಮಾತನಾಡಿ, ಬಸವಾದಿ ಶರಣರು ನೀಡಿರುವ ವಚನಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸಾರ್ಥಕತೆ ಪಡೆಯಲು ಸಾಧ್ಯವಿದೆ. ವಿದ್ಯಾರ್ಥಿ ದೆಸೆಯಿಂದಲೇ ವಚನಗಳನ್ನು ಅರ್ಥ ಸಹಿತ ಅಧ್ಯಯನ ಮಾಡಬೇಕು. ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸುವ ಮೂಲಕ ಎಲ್ಲರನ್ನು ಸಮಾನರೆಂದು ಸಾರಿದ್ದು ವಿಶ್ವದ ಇತಿಹಾಸದಲ್ಲಿ ಒಂದು ಮೈಲುಗಲ್ಲಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿವಯೋಗಪ್ಪ ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಲಕ್ಷ್ಮೀಕಾಂತ ಬಿರಾದಾರ, ಭರತ ಕೊಡಲಹಂಗರಗಾ, ಶಾಲೆಯ ಮುಖ್ಯ ಶಿಕ್ಷಕಿ ಜ್ಯೋತಿ ಪಾಟೀಲ, ಶಿಕ್ಷಕರಾದ ದೇವರಾಜ ಮಳ್ಳಿ, ಶ್ವೇತಾರಡ್ಡಿ, ಸಂಗೀತಾ ಪಾಟೀಲ, ಶಿವಲೀಲಾ ಇಟಗಿ, ಸುನಿತಾ ಕನ್ನಡಗಿ, ನಾಗವೇಣಿ ಹಿರೇಮಠ, ರಾಧಾ ತಾವರಗೇರಾ, ಸುಶ್ಮಿತಾ ಕುಂಬಾರ, ಓಂದೇವಿ ಬಿರಾದಾರ, ಸ್ನೇಹಾ ಮಂಕೋಜಿ, ಅಬ್ದುಲ್ ಖಾದಿರ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.