ಶರಣ ತತ್ವ ಪ್ರಸಾರಕ್ಕೆ ಮಾತೆ ಮಹಾದೇವಿಯವರ ಕೊಡುಗೆ ಅನನ್ಯ

ಕಲಬುರಗಿ,ಮಾ,13: ಸಾಮಾಜಿಕ ನ್ಯಾಯದ ಹರಿಕಾರರಾದ ಬಸವಣ್ಣನವರು ಮತ್ತು ಎಲ್ಲಾ ಶರಣರ ತತ್ವ ಹಾಗೂ ಕೊಡುಗೆಯನ್ನು ದೇಶದುದ್ದಕ್ಕೂ ಪ್ರಚಾರ ಮಾಡಿ, ಎಲ್ಲರಿಗೂ ವಚನಗಳ ಸಾರವನ್ನು ಉಣಬಡಿಸುವ ಮೂಲಕ ಮಾತೆ ಮಹಾದೇವಿಯವರು ಶರಣ ತತ್ವದ ಪ್ರಸಾರಕ್ಕೆ ಅನನ್ಯವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಜೆ.ಆರ್ ನಗರದಲ್ಲಿರುವ ‘ಕೊಹಿನೂರ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ಮಾತೆ ಮಹಾದೇವಿ ಅವರ 77ನೇ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡುತ್ತಿದ್ದರು.
ದೇಶದ ಮೊದಲ ಮಹಿಳಾ ಜಗದ್ಗುರುಗಳಾಗಿ ಮಹಿಳೆಯರಲ್ಲಿವ ಮೌಢ್ಯತೆ, ಕಂದಾಚಾರವನ್ನು ಹೋಗಲಾಡಿಸುವಲ್ಲಿ ಶ್ರಮಿಸಿದ್ದಾರೆ. ಎಲ್ಲೆಡೆ ಸಂಚರಿಸಿ ತಮ್ಮ ಪ್ರವಚನದ ಮೂಲಕ ಜನಜಾಗೃತಿಯನ್ನು ಮೂಡಿಸಿದ್ದಾರೆ. ಬಸವ ತತ್ವವನ್ನು ಗ್ರಾಮೀಣ ಪ್ರದೇಶ ಒಳಗೊಂಡಂತೆ ಪ್ರತಿಯೊಬ್ಬರ ಮನೆ-ಮನಗಳನ್ನು ಮುಟ್ಟಿಸುವಲ್ಲಿ ಮಾತಾಜೀಯವರು ಇಡೀ ತಮ್ಮ ಜೀವನವನ್ನು ಮುಡಪಾಗಿಟ್ಟವರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ದೇವೇಂದ್ರಪ್ಪ ಗಣಮುಖಿ, ಬಸಯ್ಯಸ್ವಾಮಿ ಹೊದಲೂರ, ದತ್ತು ಹಡಪದ, ರಾಹುಲ್, ಆದರ್ಶ, ಸಿದ್ದರಾಮ, ಪ್ರದೀಪ, ಪರಮಾನಂದ, ಶ್ರೀಶೈಲ್, ಅನಿತ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.