ಶರಣ ತತ್ವ ಅಳವಡಿಕೆಯಿಂದ ಬದುಕು ಸುಂದರ

ಕಲಬುರಗಿ:ನ.17: ಬಸವಾದಿ ಶರಣರು ನೀಡಿರುವ ಅನುಭವದ ಅಮೃತವನ್ನು ಹೊಂದಿರುವ ವಚನಗಳನ್ನು ಬಾಲ್ಯದಲ್ಲಿಯೇ ಮಕ್ಕಳಿಗೆ ಅರ್ಥಸಹಿತ ಮನನ ಮಾಡಿಸಬೇಕು. ಅವುಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸುಂದರವಾಗಿ ನಿರ್ಮಾಣವಾಗುತ್ತದೆ. ಪ್ರತಿಯೊಂದು ಸಮಸ್ಯೆಗೆ ಬಸವಾದಿ ಶರಣರ ವಚನ ಸಾಹಿತ್ಯದಲ್ಲಿ ಪರಿಹಾರವಿದ್ದು, ಈ ತತ್ವ ಸಾರ್ವಕಾಲಿಕ ಪ್ರಸ್ತುತವಾಗಿದೆ ಎಂದು ಹಿರಿಯ ಶರಣ ಚಿಂತಕ ಕರಬಸಪ್ಪ ಕಟಕೆ ಹೇಳಿದರು.

    ಚಿಟಗುಪ್ಪ ತಾಲೂಕಿನ ಕೂಡಂಬಲ್ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಮನೆಯ ಗುರು ಪ್ರವೇಶದಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ 'ಶರಣ ಸಂಗಮ' ಕಾರ್ಯಕ್ರಮದಲ್ಲಿ ಗೌರವ ಸತ್ಕಾರ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

    ಬಳಗದ ಅಧ್ಯಕ್ಷ, ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಮಾತನಾಡಿ, ಸಮಾಜದಲ್ಲಿ ಜರುಗುತ್ತಿರುವ ಕೊಲೆ, ಸುಲಿಗೆ, ದರೋಡೆ, ಭ್ರಷ್ಟಾಚಾರ, ಅನೈತಿಕ ಚಟುವಟಿಕೆಗಳಿಗೆ ಸಂಸ್ಕಾರದ ಕೊರತೆಯಿದೆ. ಆದ್ದರಿಂದ ನಾವು ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಅವರಿಗೆ ಬಾಲ್ಯದಿಂದಲೇ ನೈತಿಕ ಮೌಲ್ಯಗಳು, ಶರಣ ಸಂಸ್ಕಾರ ನೀಡಬೇಕು. ಇದರಿಂದ ಮುಂದೆ ಅವರು ದೇಶಕ್ಕೆ ಆಸ್ತಿಯಾಗುವದರ ಜೊತೆಗೆ, ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದರು.

   ಶರಣ ತತ್ವವು ಸರ್ವರನ್ನು ಒಪ್ಪಿಕೊಂಡ, ಅಪ್ಪಿಕೊಂಡ ಸಮಾನತೆಯ ತತ್ವವಾಗಿದೆ. ಮೌಢ್ಯತೆ, ಕಂದಾಚಾರ, ಭ್ರಷ್ಟಾಚಾರ, ಜಾತೀಯತೆ, ಅಂಧಶೃದ್ಧೆಯಂತಹ ಮುಂತಾದ ಅನಿಷ್ಠಗಳ ನಿರ್ಮೂಲನೆ ಸಹಾಯಕವಾಗಿವೆ. ಮಾನವೀಯ ಮೌಲ್ಯಗಳ ಕುಸಿತದಿಂದ ಅಧೋಗತಿಗೆ ಸಾಗುತ್ತಿರುವ ಪ್ರಸ್ತುತ ಸಮಾಜಕ್ಕೆ ಶರಣ ತತ್ವ ಹಿಂದೆಂದಿಗಿಂತಲೂ ಪ್ರಸ್ತುತವಾಗಿದೆ. ಶರಣ ತತ್ವದ ಪ್ರಸಾರಕ್ಕೆ ಶರಣ ದಂಪತಿಗಳು ಅನೇಕ ವರ್ಷಗಳಿಂದ ಶ್ರಮಿಸುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಸಂಗಪ್ಪ ಭೋಸಗಿ, ಕಾಶಮ್ಮ ಎಸ್.ಭೋಸಗಿ, ಕಸ್ತೂರಬಾಯಿ ಕೆ.ಕಟಕೆ, ರಮೇಶ ಎಸ್.ಭೋಸಗಿ, ಉಮೇಶ ಎಸ್.ಭೋಸಗಿ, ಮಹೇಶ ಎಸ್.ಭೋಸಗಿ, ಸತೀಶ ಎಸ್.ಭೋಸಗಿ, ರೇಣುಕಾ ಆರ್.ಭೋಸಗಿ, ಕಾವೇರಿ ಎಸ್.ಹಸರಗುಂಡಗಿ, ಶೇಖರ ಹಸರಗುಂಡಗಿ, ರಾಜಪ್ಪ ಕಟಕೆ, ಪ್ರಭು ಕಟಕೆ, ವನುಜಾ, ತನುಜಾ, ಶೃತಿ(ಲಿಂಗಾರ್ಚನಾ), ಗುಹೇಶ್ವರ, ಧೃವ, ಪೂಜಾ, ಪಲ್ಲವಿ, ಸಾಯಿ, ಬಸವಶ್ರೀ, ಬಸವಭುವನ, ಕಲ್ಯಾಣಿ, ಸಾಯಿನಾಥ, ಹರ್ಷಿತಾ, ಬಸವರಾಜ ಕಂಟೆಪ್ಪಗೋಳ್, ಮಲ್ಲಣ್ಣ ದೇಸಾಯಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.