ಶರಣೆ ಅಕ್ಕಮಹಾದೇವಿ, ಶರಣ ಹರಳಯ್ಯನವರ ಜಯಂತಿ ಆಚರಣೆ

oplus_0

ಕಲಬುರಗಿ,ಏ.24-ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ, ರಾಷ್ಟ್ರೀಯ ಬಸವ ದಳ, ಬಸವಪರ ಸಂಘಟನೆಗಳು ಹಾಗೂ ಕಾಯಕ ಶರಣರ ಒಕ್ಕೂಟಗಳ ಸಹಯೋಗದಲ್ಲಿ ಆನಂದ ನಗರದ ಬಸವ ಮಂಟಪದಲ್ಲಿ ಮೊದಲ ಮಹಿಳಾ ಕವಿಯಿತ್ರಿ ಶರಣೆ ಅಕ್ಕಮಹಾದೇವಿ ಹಾಗೂ ಶರಣ ಹರಳಯ್ಯನವರ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ನಿಲಮ್ಮತಾಯಿ ನೆಲೋಗಿಯವರು ಮಾತನಾಡಿ “ಅಕ್ಕಮಹಾದೇವಿಯವರು ಮಹಾನ್ ವೈರಾಗ್ಯನಿಧಿಯಾಗಿದ್ದರು. ಅವರು ತಮ್ಮ ಆಧ್ಯಾತ್ಮಿಕ ಸಾಧನೆಗಾಗಿ ಅರಮನೆಯನ್ನು ತ್ಯಜಿಸಿ ಕಲ್ಯಾಣಕ್ಕೆ ಬಂದರು. ಕಲ್ಯಾಣದ ಶರಣ ಚಳುವಳಿಯಲ್ಲಿ ಭಾಗವಹಿಸಿ ವಚನಗಳನ್ನು ಬರೆಯುವ ಮೂಲಕ 12ನೇ ಶತಮಾನದ ಸಾಮಾಜಿಕ ಕ್ರಾಂತಿಗೆ ಅಮೂಲ್ಯ ಕೊಡುಗೆಯನ್ನು ನೀಡಿದ್ದಾರೆ. ಅವರು ಎಲ್ಲಾ ಮಹಿಳೆಯರಿಗೆ
ಆದರ್ಶಪ್ರೀಯರಾಗಿದ್ದಾರೆ” ಎಂದು ಹೇಳಿದರು.
ಶರಣೆ ಶೀಲಾ ಹತ್ತಿ ಕೂಡ ಮಾತನಾಡಿ “ಶರಣ ಹರಳಯ್ಯ ದಂಪತಿಗಳು ಕಾಯಕ ಜೀವಿಗಳಾಗಿದ್ದು. ಬಸವಣ್ಣನವರ ಅಪ್ಪಟ ಪ್ರೇಮಿಗಳಾಗಿದ್ದರು. ಗುರು ಬಸವಣ್ಣನವರಿಗೆ ತಮ್ಮ ತೊಡೆಯ ಚರ್ಮದಿಂದ ಪಾದರಕ್ಷೆ ಮಾಡಿ ತಮ್ಮ ಪ್ರೀತಿ ಮೆರೆದಿದ್ದನ್ನು ನಾವು ನೋಡಬಹುದು. ಅವರ ಆ ಪಾದರಕ್ಷೆಗಳು ಇಂದಿಗೂ ಸೆಡಂ ತಾಲೂಕಿನ ಬಿಜನಳ್ಳಿಯಲ್ಲಿರುವುದನ್ನು ನಾವು ಕಾಣಬಹುದಾಗಿದೆ. ಶರಣ ಹರಳಯ್ಯ ಮತ್ತು ಶರಣ ಮದುವಯ್ಯಗಳ ಶರಣ ಕುಟುಂಬಗಳ ನಡುವಿನ ಮದುವೆ ಕಲ್ಯಾಣ ಕ್ರಾಂತಿಗೆ ಕಾರಣವಾಗಿರುವುದನ್ನು ನಾವು ತಿಳಿದಿದ್ದೇವೆ” ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಶರಣೆ ಶಾರದ ಓಗಿ ಮತ್ತು ಶರಣೆ ಸಾವಿತ್ರಿ ಪಾಲ್ಕೆ ವಚನಗಾಯನ ಮಾಡಿದರು. ಶರಣ ಆರ್ ಜಿ ಶಟಗಾರ ಕಾರ್ಯಕ್ರಮ ನಿರೂಪಿಸಿದರು. ಜಾಗತಿಕ ಲಿಂಗಾಯತ ಮಹಾಸಭಾ ಕಲಬುರಗಿಯ ಅಧ್ಯಕ್ಷರಾದ ಪ್ರಭುಲಿಂಗ ಮಹಾಗಾಂವಕರ್, ಸಂಗಮೇಶ ಗುಬ್ಬೆವಾಡ, ಶಿವಕುಮಾರ ಬಿದರಿ, ಮಹಾಂತೇಶ ಕಲಬುರಗಿ, ಶಶಿಕಾಂತ ಪಸಾರ, ಶಿದ್ರಾಮಪ್ಪ ಲದ್ದೆ, ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಹಾಗು
ರಾಷ್ಟ್ರೀಯ ಬಸವ ದಳದ ಪದಾದಿಕಾರಿಗಳು ಹಾಗು ಸದಸ್ಯರು ಉಪಸ್ಥಿತರಿದ್ದರು.