ಶರಣು ಸಲಗರಗೆ ಟಿಕೆಟ್: ಸ್ಥಳೀಯ ಬಿಜೆಪಿಗರ ವಿರೋಧ

ಬಸವಕಲ್ಯಾಣ:ಮಾ.27: ವಿಧಾನಸಭಾ ಉಪ ಚುನಾವಣೆಯ ಬಿಜೆಪಿ ಟಿಕೆಟ್ ಶರಣು ಸಲಗರ ಅವರಿಗೆ ಘೋಷಿಸಿದ ನಂತರ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಕೆಲ ಕಾರ್ಯಕರ್ತರು ಟೈರ್‍ಗೆ ಬೆಂಕಿ ಹಚ್ಚಿದರೆ, ಇನ್ನು ಕೆಲವರು ಸಂಸದ ಭಗವಂತ ಖೂಬಾ ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಸವಕಲ್ಯಾಣದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ‘ನಾನು ದೇಶದ ಅಭಿಮಾನಿ, ನಾನು ಸ್ವಾಭಿಮಾನಿ, ಮೋದಿ ಅಭಿಮಾನಿ. ಆದರೆ, ಈ ಸಲ ನಾನು ಬಿಜೆಪಿಗೆ ಮತ ನೀಡುವುದಿಲ್ಲ. ನನಗೆ ಬೇಕಾದ ವ್ಯಕ್ತಿ ಅಥವಾ ಬೇರೆ ಪಕ್ಷಕ್ಕೆ ನೀಡುತ್ತೇನೆ ಎಂದು ತಂದೆ, ತಾಯಿ, ಬಸವಣ್ಣ ಹಾಗೂ ಮನೆ ದೇವರ ಮೇಲೆ ಪ್ರಮಾಣ ಮಾಡುತ್ತೇನೆ’ ಎಂದು ನೂರಾರು ಕಾರ್ಯಕರ್ತರು ಬಹಿರಂಗವಾಗಿ ಪ್ರತಿಜ್ಞೆ ಮಾಡಿದರು.
ಪಕ್ಷದಲ್ಲಿ’16 ಜನ ಆಕಾಂಕ್ಷಿಗಳಿದ್ದರೂ ಸ್ಥಳೀಯರಿಗೆ ಟಿಕೆಟ್ ಸಿಗದಿರಲು ಸಂಸದ ಭಗವಂತ ಖೂಬಾ ಅವರೇ ಕಾರಣ. ಬಿಜೆಪಿ ಟಿಕೆಟ್ ಮಾರಿಕೊಂಡ ಸಂಸದ ಭಗವಂತ ಖೂಬಾಗೆ ಧಿಕ್ಕಾರ’, ‘ಚೋರ್ ಹೈ, ಎಂ.ಪಿ. ಚೋರ್ ಹೈ’ ಎಂದು ಘೋಷಣೆ ಕೂಗಿದರು. ನಂತರ ಭಗವಂತ ಖೂಬಾ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಬೆಂಕಿ ಹೆಚ್ಚಿ ಬೊಬ್ಬೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಕ್ರಿಯೆ ನೀಡುವ ಸ್ಥಿತಿಯಲ್ಲಿಲ್ಲ: ಕೊನೆ ಕ್ಷಣದವರೆಗೂ ಟಿಕೆಟ್ ನನಗೇ ದೊರೆಯಲಿದೆ ಎನ್ನುವ ವಿಶ್ವಾಸ ಇತ್ತು. ಪಕ್ಷ ಬೇರೊಬ್ಬರಿಗೆ ಕೊಟ್ಟಿದೆ. ಸದ್ಯ ನಾನು ಪ್ರತಿಕ್ರಿಯೆ ನೀಡುವ ಸ್ಥಿತಿಯಲ್ಲಿ ಇಲ್ಲ’ ಎಂದು ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು. ‘ಬಸವಕಲ್ಯಾಣದ ಅನೇಕ ಸಂಘಟನೆಗಳು ಹಾಗೂ ಜನರು ನನ್ನ ಮೇಲೆ ವಿಶ್ವಾಸವಿಟ್ಟು ಪಕ್ಷಕ್ಕೆ ಮನವಿಪತ್ರಗಳನ್ನು ಕೊಟ್ಟಿದ್ದರು. ಅವರಿಗೆಲ್ಲ ನಾನು ಕೃತಜ್ಞನಾಗಿದ್ದೇನೆ. ಟಿಕೆಟ್ ಸಿಗದಿದ್ದರೂ ಜನ ಸೇವೆ ಮುಂದುವರಿಸಲಿದ್ದೇನೆ’ ಎಂದರು. ಸ್ವಾಗತ: ‘ಬಿಜೆಪಿ ವರಿಷ್ಠರು ತೆಗೆದುಕೊಂಡಿರುವ ನಿರ್ಧಾರವನ್ನು ಸ್ವಾಗತಿಸುತ್ತೇವೆ. 18 ಆಕಾಂಕ್ಷಿಗಳಲ್ಲಿ ಜಿಲ್ಲೆಯ ಸಮರ್ಥರೂ ಇದ್ದರು. ಪಕ್ಷದ ತತ್ವ, ಸಿದ್ಧಾಂತದ ಮೇಲೆ ನಂಬಿಕೆ ಇದ್ದವರು ಪಕ್ಷದ ನಿರ್ಧಾರವನ್ನು ಸ್ವಾಗತಿಸಬೇಕು’ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ವಾಕರೆ ಪ್ರತಿಕ್ರಿಯಿಸಿದರು.