ಶರಣರ ವಿಚಾರಗಳನ್ನು ಆಲಿಸಲು ಮೇಳದಲ್ಲಿ ಪಾಲ್ಗೊಳ್ಳಿ

ಬೀದರ:ಡಿ.27: ಬಸವಾದಿ ಶರಣರ ವಿಚಾರಗಳನ್ನು ಅರಿಯಲು ಪ್ರತಿಯೊಬ್ಬ ಬಸವ ಭಕ್ತರು ಕೂಡಲಸಂಗಮದಲ್ಲಿ ಜನವರಿ 12, 13 ಹಾಗೂ 14 ರಂದು ನಡೆಯಲಿರುವ 34ನೇ ಶರಣ ಮೇಳದಲ್ಲಿ ಪಾಲ್ಗೊಳ್ಳಬೇಕು ಎಂದು ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಜಗದ್ಗುರು ಮಾತೆ ಗಂಗಾದೇವಿ ಹೇಳಿದರು.

ಶರಣ ಮೇಳದ ಪ್ರಚಾರಾರ್ಥ ನಗರದ ಬಸವ ಮಂಟಪದಲ್ಲಿ ನಡೆದ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಶರಣರ ಒಂದೊಂದು ವಚನದಲ್ಲೂ ಅದ್ಭುತ ಜ್ಞಾನ ಅಡಗಿದೆ. ಆ ಜ್ಞಾನವನ್ನು ಪಡೆದುಕೊಂಡಾಗಲೇ ಶರಣನಾಗಲು ಸಾಧ್ಯವಿದೆ ಎಂದು ನುಡಿದರು.

33 ವರ್ಷಗಳಿಂದ ಶರಣ ಮೇಳಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗಿದೆ. ಈ ಬಾರಿಯ ಮೇಳಕ್ಕೆ ಕೊರೊನಾ ತೊಡಕಾಗಿದೆ. ಆದರೆ, ಬಸವಕಲ್ಯಾಣದಲ್ಲಿ ಈಗಾಗಲೇ ಕಲ್ಯಾಣ ಪರ್ವ ಕಾರ್ಯಕ್ರಮವನ್ನು ಕೋವಿಡ್‌ ನಿಯಮಗಳ ಪಾಲನೆಯೊಂದಿಗೆ ಯಶಸ್ವಿಯಾಗಿ ನೆರವೇರಿಸಲಾಗಿದೆ.
ಸರ್ಕಾರದ ನಿಯಮಗಳನ್ನು ಪಾಲಿಸುವ ಜತೆಗೆ ಶರಣ ಮೇಳವನ್ನು ವ್ಯವಸ್ಥಿತವಾಗಿ ನಡೆಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಷಟ್‍ಸ್ಥಲ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಅವರು, ಜಗದ್ಗುರು ದಿ. ಮಾತೆ ಮಹಾದೇವಿ ಅವರ ನೇತೃತ್ವದಲ್ಲಿ 32 ಶರಣ ಮೇಳಗಳು ಅರ್ಥಪೂರ್ಣವಾಗಿ ನಡೆದಿವೆ. ಈ ಬಾರಿಯ ಮೇಳ ಮಾತೆ ಡಾ. ಗಂಗಾದೇವಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಎರಡನೇ ಮೇಳವಾಗಿದೆ. ಪ್ರತಿ ಬಸವ ಭಕ್ತರು ಒಬ್ಬರು ಹೊಸಬರನ್ನು ಮೇಳಕ್ಕೆ ಕರೆದುಕೊಂಡು ಬರಬೇಕು ಎಂದು ಹೇಳಿದರು.

12ನೇ ಶತಮಾನದ ಶರಣ ಪರಂಪರೆಯನ್ನು 21ನೇ ಶತಮಾನದ ಜನಾಂಗಕ್ಕೆ ತಲುಪಿಸುವಲ್ಲಿ ಮಾತೆ ಮಹಾದೇವಿ ಅವರ ಕೊಡುಗೆ ಅನನ್ಯವಾಗಿದೆ. ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಬಸವ ತತ್ವ ಪ್ರಚಾರ ಮಾಡಿದ ಹಿರಿಮೆ ಅವರದ್ದಾಗಿದೆ. ಮಾತೆ ಡಾ.ಗಂಗಾದೇವಿ ಅವರು ಕೂಡ ಅವರದೇ ಮಾರ್ಗದಲ್ಲಿ ಸಾಗುತ್ತಿದ್ದಾರೆ. ಬಸವ ತತ್ವ ಪ್ರಚಾರಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಶರಣ ಮೇಳವು ಪ್ರತಿ ವರ್ಷ ಶರಣ ಸಂಸ್ಕೃತಿ ಕುರಿತ ಚಿಂತನ ಮಂಥನಕ್ಕೆ ವೇದಿಕೆ ಒದಗಿಸುತ್ತಿದೆ. ವರ್ಷದಿಂದ ವರ್ಷಕ್ಕೆ ತನ್ನ ಖ್ಯಾತಿಯನ್ನು ಹೆಚ್ಚಿಸಿಕೊಳ್ಳುತ್ತಲೇ ನಡೆದಿದೆ. ಈ ಬಾರಿಯ ಮೇಳ ಕೂಡ ಸರ್ವ ರೀತಿಯಿಂದಲೂ ಯಶಸ್ವಿಯಾಗುವ ಸಂಪೂರ್ಣ ವಿಶ್ವಾಸ ಇದೆ ಎಂದು ಹೇಳಿದರು.

ಡಾ.ಮಹೇಶ ಬಿರಾದಾರ ಸಭೆಗೆ ಚಾಲನೆ ನೀಡಿದರು. ಬಸವ ಮಂಟಪದ ಮಾತೆ ಸತ್ಯದೇವಿ, ಜಿಲ್ಲಾ ಲಿಂಗಾಯತ ಸಮಾಜದ ಅಧ್ಯಕ್ಷ ಕುಶಾಲರಾವ್ ಪಾಟೀಲ ಖಾಜಾಪುರ, ಶೀಲಾ ಸೋಮಶೇಖರ ಪಾಟೀಲ, ಶಿವರಾಜ ಪಾಟೀಲ ಅತಿವಾಳ, ಡಾ. ಶರಣಪ್ಪ ಜಹೀರಾಬಾದ್, ಶಂಕರೆಪ್ಪ ಪಾಟೀಲ ಜಹೀರಾಬಾದ್, ರಾಜೇಂದ್ರ ಜೊನ್ನಿಕೇರಿ, ವಕೀಲ ಗಂಗಶೆಟ್ಟಿ ಪಾಟೀಲ ಉಪಸ್ಥಿತರಿದ್ದರು.

ಅಕ್ಕ ಮಹಾದೇವಿ ಸ್ವಾಮಿ ವಚನ ಗಾಯನ ಮಾಡಿದರು. ಕಲ್ಪನಾ ಸಾವಳೆ ಸ್ವಾಗತಿಸಿದರು. ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುರೇಶಕುಮಾರ ಸ್ವಾಮಿ ನಿರೂಪಿಸಿದರು. ಮಹಾಲಿಂಗ ಸ್ವಾಮಿ ಚಟ್ನಳ್ಳಿ ವಂದಿಸಿದರು.