ಶರಣರ ವಚನ, ಚಿಂತನೆಗಳು ಎಲ್ಲರಿಗೂ ತಲುಪುವಂತಾಗಲಿ

ತುಮಕೂರು, ಡಿ. ೪- ಕನ್ನಡ ಸಾಹಿತ್ಯದಲ್ಲಿ ಹನ್ನೆರಡನೇ ಶತಮಾನದಲ್ಲಿ ಬಂದ ನೂರಾರು ಶರಣ-ಶರಣೆಯರ ಅನುಭವದ ಅಣಿಮುತ್ತುಗಳೇ ವಚನಗಳು. ಒಂಭೈನೂರು ವರ್ಷಗಳಾದರೂ ಅವುಗಳ ಮೌಲ್ಯ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿದ್ದು, ಎಲ್ಲ ಧರ್ಮದವರಿಗೂ, ಸಮಾಜದ ಎಲ್ಲ ವರ್ಗದವರಿಗೂ ತಲುಪುವಂತಾಗಬೇಕು ಎಂದು ತಿಪಟೂರಿನ ಕಲ್ಪತರು ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಟಿ.ಜಿ. ಚಂದ್ರಶೇಖರ್ ಹೇಳಿದರು.
ಇಲ್ಲಿನ ಶಾಂತಿ ನಗರದ ಪರಂಜ್ಯೋತಿ ಸಂಯೋಗ ಸೇವಾ ಮಂಟಪದಲ್ಲಿ ಅವರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ ಚಟುವಟಿಕೆಗಳನ್ನು ವಚನ ಗಾಯನದೊಂದಿಗೆ ಆರಂಭಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಲವು ಸಾಹಿತ್ಯಿಕ, ಸಾಂಸ್ಕೃತಿಕ, ಧಾರ್ಮಿಕ ಚಟುವಟಿಕೆಗಳು ನಗರ ಕೇಂದ್ರಿತವಾಗಿದ್ದು, ಬಹುಜನರನ್ನು ಇಂದು ತಲುಪುತ್ತಿಲ್ಲ. ಗ್ರಾಮೀಣ ಪ್ರದೇಶದತ್ತ ಅದರಲ್ಲೂ ಯುವ ಜನತೆಯತ್ತ ವಚನಗಳ ಅನುಭವ ಹಂತ ಹಂತವಾಗಿ ತಲುಪುವಂತಾಗಲಿ ಎಂದು ಆಶಿಸಿದರು.
ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾದ ರಾಜಶೇಖರಯ್ಯ ಈಚನೂರು ಮಾತನಾಡಿ, ಕೊರೊನಾ ಹಂತ ಹಂತವಾಗಿ ಕಡಿಮೆಯಾದರೂ ಪೂರ್ಣ ಮರೆಯಾಗಿಲ್ಲ. ಆದರೂ ಸರಳವಾಗಿ ವಚನ ಗಾಯನ, ವಚನ ಪಠಣ ಸ್ಪರ್ಧೆಗಳು, ಪ್ರಬಂಧ ಸ್ಪರ್ಧೆ, ಕಿರುಭಾಷಣ ಸ್ಪರ್ಧೆಗಳನ್ನು ಮಕ್ಕಳಿಗೆ ಏರ್ಪಡಿಸುವ ಮೂಲಕ ಬಾಲಕರಿಗೆ ವಚನ ಸಾಹಿತ್ಯ ಪರಿಚಯಿಸಲಾಗುವುದು. ಇಲ್ಲಿ ಜಾತಿ, ಮತ, ಲಿಂಗ ಭೇದವಿಲ್ಲ. ಎಲ್ಲರಿಗೂ ಮುಕ್ತ ಅವಕಾಶ ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿದ್ವಾನ್ ಎಂ.ಜಿ. ಸಿದ್ಧರಾಮಯ್ಯ ಮಾತನಾಡಿ, ವಚನಗಳೆಂದರೆ ಅನುಭಾವದ ರತ್ನಗಳು. ಎಂದಿಗಿಂತ ಇಂದು ಹೆಚ್ಚು ಹೆಚ್ಚು ಪ್ರಚಾರ ಮಾಡುವುದು ಎಲ್ಲರ ಕರ್ತವ್ಯ. ಶರಣ ಸಾಹಿತ್ಯ ಪರಿಷತ್ತು ಈ ದಿಸೆಯಲ್ಲಿ ಸತತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ತುಮಕೂರು ಜಿಲ್ಲೆಯ ಹತ್ತೂ ತಾಲ್ಲೂಕುಗಳಲ್ಲಿಯೂ ಶರಣ ಚಟುವಟಿಕೆಗಳು ನಡೆಯುತ್ತಿವೆ ಎಂದರು.
ನಿಜ ಶರಣ ಶಿವಲಿಂಗಯ್ಯ, ಮಿಮಿಕ್ರಿ ಈಶ್ವರಯ್ಯ ವಚನ ಗಾಯನ ಮಾಡಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.