ಶರಣರ ವಚನಗಳು ಜ್ಞಾನಕ್ಕೆ ಹೋಗುವ ದಿವ್ಯ ಸೂತ್ರಗಳು

ರಾಯಚೂರು,ಏ.೨೬-
ಮನುಷ್ಯನ ಬದುಕು ಸೂಸುತ್ರವಾಗಿ ನಡೆಸಲು ಬಸವೇಶ್ವರರ ವಚನಗಳು ಸೂತ್ರ ಪ್ರಧಾನವಾಗಿವೆ. ಬುದ್ಧ, ಮಹಾವೀರ, ಬಸವಾದಿ ಶರಣರ ವಚನಗಳು ದಾಸರ ಕೀರ್ತನೆಗಳು ಉಗಾಭೋಗಗಳು ಮುಂಡಿಗೆಗಳು ಮತ್ತು ತತ್ವ ಪದಗಳಲ್ಲಿ ಜ್ಞಾನಕ್ಕೆ ಹೋಗುವ ಸೂತ್ರಗಳು ಬಚ್ಚಿಟ್ಟುಕೊಂಡಿವೆ. ಪ್ರಾಧ್ಯಾಪಕರು ಅವುಗಳನ್ನು ಅವಲೋಕಿಸಿ ಆಯಾ ಸೂತ್ರಗಳ ಮೂಲಕ ಭೋದಿಸಿದರೆ ಮಾನವನ ಅಜ್ಞಾನಕ್ಕೆ ಅವು ದಿವ್ಯ ಔಷಧಿ ಯಾಗುವುದರಲ್ಲಿ ಸಂದೇಹವೆ ಇಲ್ಲ ಎಂದು ಸುದ್ದಿಮೂಲ ದಿನಪತ್ರಿಕೆ ಸಂಪಾದಕ ಬಸವರಾಜ ಸ್ವಾಮಿ ಅವರು ಮಾತನಾಡಿದರು.
ರಾಯಚೂರು ವಿಶ್ವವಿದ್ಯಾಲಯದಲ್ಲಿಂದು ಆಯೋಜಿಸಿದ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿ ಪ್ರಯುಕ್ತ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತ “ಕಣ್ಣು, ಕಿವಿ, ಮೂಗು, ನಾಲಿಗೆ ಚರ್ಮ ಪಂಚೇದ್ರೀಯಗಳ ಕುರಿತು ಆಯಾ ಜಾಗಗಳಲ್ಲಿ ಅರಿವೆಂಬ ಗುರುದೇವ ವಾಸಮಾಡಿದ್ದಾನೆ ಹಾಗೆಯೇ ಮನವೆಂಬ ಅಜ್ಞಾನವು ಅಲ್ಲಿಯೇ ವಾಸಮಾಡಿದೆ. ಕಣ್ಣಿನ ಮೂಲಕ ಅಜ್ಞಾನದಿಂದ ನೋಡಿದಾಗ ಕಣ್ಣಿನಲ್ಲಿಯೇ ಬಚ್ಚಿಟ್ಟುಕೊಂಡ ಅರಿವಿನ ದೃಶ್ಯ ತನ್ನದೇ ಆದ ಅಜ್ಞಾನದ ದೃಶ್ಯಕ್ಕೆ ಗುರುವಾಗಿ ಪಾಠ ಮಾಡುತ್ತದೆ. ನೀನು ಸರಿಯಾಗಿ ನೋಡಲಿಲ್ಲವೆಂದು ಬೋಧೆಮಾಡುತ್ತದೆ ಹೀಗೆಯೆ ಕಿವಿ ಮೂಗು ನಾಲಿಗೆ ಚರ್ಮದಲ್ಲಿ ನನ್ನದೇ ಆದ ಅಜ್ಞಾನವು ಇದೆ ಹಾಗೆಯೇ ಅರಿವು ಎನ್ನುವ ಗುರುದೇವ ಕೂಡ ಅಲ್ಲಿಯೇ ವಾಸಮಾಡಿದ್ದಾನೆ ಎಂದು ಹೇಳುವ ಮೂಲಕ ಕಣ್ಣಲ್ಲಿಯೇ ಕಣ್ಣಿದ್ದು ಕಾಣಲೇಕೆ ಅರಿಯರಯ್ಯ ಎನ್ನುವ ಬಸವಣ್ಣ ನವರ ವಚನವನ್ನು ಉದಾಹರಿಸುವ ಮೂಲಕ ತಿಳಿತಿಳಿಯಾಗಿ ತಿಳಿಯುವಂತೆ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರಾವಿವಿಯ ಕುಲಸಚಿವ ಪ್ರೊ.ವಿಶ್ವನಾಥ.ಎಂ ಮಾತನಾಡಿ, ಬಸವೇಶ್ವರರ ಒಂದೊಂದು ವಚನವು ಜೀವನ ಪಾಠ ಕಲಿಸುವ ಭಂಡಾರವಿದ್ದಂತೆ ವಚನಗಳ ಸಾರವನ್ನು ಅರಿತಾಗ ಜೀವನದ ಸಂಕೀರ್ಣತೆಯಿಂದ ಹೊರಬರಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಯಾಗಿ ತಾನು ವಿದ್ಯೆಯನ್ನು ಅರಸುತ್ತಿದ್ದೇನೆಯೆ ಎಂದು ತಾನೇ ಪ್ರಶ್ನಿಸಿಕೊಂಡು ಅವಲೋಕನ ಮಾಡಿಕೊಂಡು ಜ್ಞಾನಾರ್ಜನೆಗೆ ತನ್ನನ್ನು ಮುಡಿಪಾಗಿಡದಿದ್ದಲ್ಲಿ ಉತ್ತಮ ಬದುಕು ಅಸಾಧ್ಯ. ಬಸವಣ್ಣನವರು ಹೇಳಿದ ಕಳಬೇಡ ಕೊಲಬೇಡ ಎಂಬ ವಚನದ ಏಳು ಶಬ್ದಗಳ ಸಾರವನ್ನು ಕಾನೂನಿನ ಇಡೀ ಭಾರತೀಯ ದಂಡಸಂಹಿತೆಯಲ್ಲಿ ಅಳವಡಿಸಿದಂತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅತಿಥಿ ನುಡಿಗಳನ್ನಾಡಿದ ರಾಯಚೂರು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಯರಿಸ್ವಾಮಿ.ಎಂ ಮಾತನಾಡುತ್ತ ಇಡೀ ವಿಶ್ವಕ್ಕೆ ಸಮಾನತೆಯ ಸಮಾಜ ಸೃಷ್ಠಿಸುವ ಮಹಾನ್ ಕ್ರಾಂತಿಯನ್ನು ೧೨ನೇ ಶತಮಾನದಲ್ಲಿಯೇ ಮಾಡಿದ ಕೀರ್ತಿ ಬಸವೇಶ್ವರರಿಗೆ ಸಲ್ಲುತ್ತದೆ. ಅಂತಹ ಮಹನೀಯರ ವಚನಗಳು, ಆದರ್ಶಗಳು, ವಿಚಾರಗಳನ್ನು ಅರ್ಥಮಾಡಿಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ವಿಜ್ಞಾನ ನಿಕಾಯದ ಡೀನ್ ಪ್ರೊ.ಪಾರ್ವತಿ.ಸಿ.ಎಸ್ ಮಾತನಾಡುತ್ತಾ, ಬಸವಣ್ಣವನರ ಕಾಯಕವೇ ಕೈಲಾಸ ಎಂಬ ಒಂದು ನೀತಿ ಮಂತ್ರದಿಂದ ಇಡೀ ನಮ್ಮ ಬದುಕನ್ನೆ ಉನ್ನತಮಟ್ಟದಲ್ಲಿ ಸಾಗಿಸಬಹುದು. ವಿದ್ಯಾರ್ಥಿಗಳು ಉತ್ತಮ ಅಭ್ಯಾಸ ಮಾಡುವ ಜೊತೆಗೆ ಕಾಯಕಕ್ಕೆ ಮಹತ್ವ ಕೊಡುವ ಮೂಲಕ ಉತ್ತಮ ಸಮಾಜ ಕಟ್ಟುವಲ್ಲಿ ಮುಂದಾಗಬೇಕು ಎಂದು ಹೇಳಿದರು.
ಮೊದಲನೇ ಗೋಷ್ಠಿಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ನಾಗರಾಜ ಮಾತನಾಡಿ, ಸಾಮಾನ್ಯ ವ್ಯಕ್ತಿಗಳಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ತರುವಲ್ಲಿ ಸಾಕಷ್ಟು ಶ್ರಮ ವಹಿಸಿದವರು ಬಸವಣ್ಣ ನವರು ಎಲ್ಲ ಅನುಭಾವಿ ಶರಣರು ತಮ್ಮ ಅನುಭವಗಳನ್ನು ಅನುಭವ ಮಂಟಪದಲ್ಲಿ ತಂದಿಟ್ಟು ಲೋಕೋಪಯೋಗಿ ವಿಚಾರಗಳನ್ನು ಹಂಚಿ ಸಮಾಜಮುಖಿ ಪರಿಸರ ಸೃಷ್ಟಿಸಿದರು ವಿದ್ಯಾರ್ಥಿಗಳು ತಮ್ಮ ಬೌದ್ಧಿಕ ಮಟ್ಟವನ್ನು ಬೆಳೆಸಿಕೊಳ್ಳಲು ಪುಸ್ತಕದ ಜ್ಞಾನ ದಾಹವನ್ನು ಹೆಚ್ಚಿಸಿಕೊಳ್ಳಬೇಕು ಅನುಭಾವಿಗಳಾದ ಅಲ್ಲಮಪ್ರಭು, ಜೇಡರ ದಾಸಿಮಯ್ಯ, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ ಇತರ ಬಸವಾದಿ ಶರಣರ ವಚನಗಳನ್ನು ಓದಿ ಅರ್ಥೈಸಿಕೊಂಡು ವಿದ್ಯೆಯ ಜೊತೆಗೆ ಉತ್ತಮ ಜ್ಞಾನ ನಡತೆ ಸಂಸ್ಕೃತಿಯ ಸದ್ಗುಣಗಳನ್ನು ಹೊಂದಬೇಕು ಎಂದು ಬಸವೇಶ್ವರರ ವಚನ ಸಾಹಿತ್ಯದ ಪ್ರಸ್ತುತತೆ ಕುರಿತು ವಿಚಾರ ಮಂಡಿಸಿದರು.
ಎರಡನೇ ಗೋಷ್ಠಿಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಆಕಾಶವಾಣಿ ಕೇಂದ್ರ ಮುಖ್ಯಸ್ಥ ಡಾ.ಬಿ.ಎಂ.ಶರಭೇಂದ್ರ ಸ್ವಾಮಿ ಮಾತನಾಡುತ್ತಾ, ಭಾರತೀಯ ತತ್ವ ಚಿಂತನೆಗಳ ಮೂಲ ವಿಭಿನ್ನವಾಗಿ ಹರಡಿಕೊಂಡಿವೆ ಉತ್ತಮವಾದ ಸಮಾಜ ನಿರ್ಮಾಣ ಮಾಡುವ ಚಳುವಳಿ ೧೨ ನೇ ಶತಮಾನದಲ್ಲಿ ಅದ್ಭುತವಾಗಿ ಬಸವೇಶ್ವರರ ನಾಯಕತ್ವದಲ್ಲಿ ನಡೆದಿತ್ತು. ಎಲ್ಲರನ್ನು ಒಟ್ಟು ಗೂಡಿಸುವ ಕಾಯಕ ವಚನಗಳ ಸೂತ್ರದಿಂದಲೇ ಸಾಧ್ಯವಾಯಿತು. ಅಸಮತೋಲನ ಸೃಷ್ಟಿಯಾಗಿರುವ ಪ್ರಸ್ತುತ ಕಾಲಮಾನದಲ್ಲಿ ಶರಣರ ವಚನಗಳನ್ನು ಸೂತ್ರದ ಮೂಲಕ ಅರ್ಥೈಸಿಕೊಂಡು ಪ್ರಯೋಗಗಳ ಮೂಲಕ ಪಾಲನೆ ಮಾಡಿದರೆ ಸಮಾನತೆ ಬದುಕು ಸೃಷ್ಟಿಯಾಗಬಹುದು ಎನ್ನುತ್ತಾ ಅರಿವೆಂಬ ಗುರುವಿಗೆ ಶರಣೆಂಬೆ ಎಂಬ ವಿಷಯ ಕುರಿತು ತಮ್ಮ ವಿಚಾರವನ್ನು ಮಂಡಿಸಿದರು.
ಇತಿಹಾಸ ವಿಭಾಗದ ಮಧುಸೂದನ್ ಪ್ರಾರ್ಥಿಸಿದರು, ಉಪನ್ಯಾಸಕರಾದ ಅನಿಲ್ ಅಪ್ರಾಳ, ಡಾ.ರಶ್ಮಿರಾಣಿ ಅಗ್ನಿಹೋತ್ರಿ, ಡಾ.ಗೀತಮ್ಮ, ನಾಗವೇಣಿ ನಾಡಗೀತೆ ಹಾಡಿದರು. ಉಪಕುಲಸಚಿವ ಡಾ.ಜಿ.ಎಸ್.ಬಿರಾದಾರ ಸ್ವಾಗತಿಸಿ ಪ್ರಾಸ್ತಾವಿಕ ನುಡಿದರು. ಅತಿಥಿ ಉಪನ್ಯಾಸಕರಾದ ಕೃಷ್ಣಾ, ವಿಜಯಲಕ್ಷ್ಮಿ ಬಾಬು ಕಮಲ್, ಸರ್ಫರಾಜ ಖಾನ್, ಸೈಯದ್ ಫಜಲುನ್ನೀಸ ಬೇಗಂ ನಿರೂಪಿಸಿದರು. ಬಜಾರಪ್ಪ, ರಾಮಣ್ಣ, ಉತ್ತಮ್ ಚೌವ್ಹಾಣ ಅತಿಥಿಗಳನ್ನು ಪರಿಚಯಿಸಿದರು. ಸಪ್ನಾ, ಡಾ.ನಾಗರಾಜ ವಂದಿಸಿದರು.
ಸಮಾಜ ವಿಜ್ಞಾನದ ಡೀನ್ ಪ್ರೊ.ನುಸ್ರತ್ ಫಾತಿಮಾ, ಕಲಾನಿಕಾಯದ ಡೀನ್ ಪ್ರೊ.ಪಿ.ಭಾಸ್ಕರ್, ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ರಾಘವೇಂದ್ರ ಫತ್ತೇಪೂರ, ಅಭಿಯಂತರ ಪಂಪಾಪತಿ ಎಲ್ಲಾ ವಿಭಾಗಗಳ ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.