
ಕಲಬುರಗಿ:ಸೆ.12:ಶರಣರ ವಚನಗಳು ಇಂದಿಗೂ ಜಗತ್ತಿಗೆ ಸ್ಪೂರ್ತಿ ನೀಡುವುದರೊಂದಿಗೆ ಜ್ಞಾನದ ಭಂಡಾರವಾಗಿ ಜಗತ್ತಿಗೆ ಜ್ಯೋತಿಯಾಗಿ ಬೆಳಗುತ್ತಿವೆ ಎಂದು ಶರಣ ಚಿಂತಕ ಬಾಬುರಾವ ಪಾಟೀಲ ಚಿತ್ತಕೋಟಾ ಹೇಳಿದರು. ಕಲಬುರಗಿ ತಾಲೂಕಿನ ಉಪಳಾಂವ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ 10ನೇ ಜಾತ್ರಾ ಮಹೋತ್ಸವದ ನಿಮಿತ್ಯ “ಶರಣ ಅಲ್ಲಮಪ್ರಭುಗಳ ವಚನಗಳೇ ನಮಗೆ ದಾರಿದೀಪ” ಎಂಬ ವಿಷಯದ ಮೇಲೆ ಐದು ದಿನದ ಪ್ರವಚನ ಸಮಾರಂಭದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಾ ಶರಣರ ವಚನಗಳು ಕೇವಲ ಪ್ರದರ್ಶನಕ್ಕೆ ಸೀಮಿತವಾಗದೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ವಚನಗಳಲ್ಲಿ ಜೀವನದ ನಿಗೂಢವಾದ ಶಕ್ತಿ ಅಡಗಿದೆ ಅಂತಹ ಮಹಾತ್ಮರು ನುಡಿದಂತೆ ನಡೆದು ಅಮರರಾಗಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು. ಖ್ಯಾತ ಪ್ರವಚನ ಪಟುಗಳಾದ ಶಿವಸ್ವಾಮಿ ಚಿನಕೇರಾ ಮಾತನಾಡುತ್ತಾ ಶರಣರಾದ ಅಲ್ಲಮಪ್ರಭುಗಳ ಮಾತುಗಳು ಅಂದರೆ ವಚನ (ಪ್ರಮಾಣ) ನೀಡುವುದರೊಂದಿಗೆ ನುಡಿದಂತೆ ನಡೆದು ಬೇರೆಯವರಿಗೆ ಆದರ್ಶವಾಗಿದ್ದಾರೆ. ಸಮಾನತೆಯ ಹರಿಕಾರರಾಗಿ ಪ್ರಜಾಪ್ರಭುತ್ವದ ಅಡಿಪಾಯ ಆಗಲೇ ಹಾಕಿದ್ದರು. ವಚನಗಳು ನಾವು ಕೂಡ ಪಚನ ಮಾಡಿಕೊಂಡು ಸುಂದರ ಸಮಾಜ ನಿರ್ಮಿಸಬೇಕೆಂದು ಹೇಳಿದರು. ಮುಖ್ಯ ಅತಿಥಿಗಳಾದ ಅವರಾದ(ಬಿ) ಗ್ರಾಮ ಪಂಚಾಯತ ನೂತನ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಿವಡೆ ಮಾತನಾಡುತ್ತಾ ಶರಣರು ಜಾತಿ ಧರ್ಮವನ್ನು ಮೀರಿ ಸಮ ಸಮಾಜ ಕಟ್ಟಿದ್ದಾರೆ ಅದೇ ರೀತಿ ಈ ಗ್ರಾಮದಲ್ಲಿಯೂ ಶರಣರ ಪ್ರವಚನದೊಂದಿಗೆ ಶರಣರ ಕನಸಿನ ಸಮಾಜ ಕಟ್ಟುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು. ವೇದಿಕೆಯ ಮೇಲೆ ತಾ ಪಂ ಮಾಜಿ ಅಧ್ಯಕ್ಷರಾದ ವಿಜಯಕುಮಾರ ಬಿರಾದಾರ, ನ್ಯಾಯವಾದಿ ಹಣಮಂತರಾಯ ಅಟ್ಟೂರ, ಸಂತೋಷ ಹಿರೇಮನಿ, ಸುರೇಶ ಪೂಜಾರಿ, ದೇವಸ್ಥಾನದ ಅರ್ಚಕರಾದ ಸಿದ್ದಯ್ಯ ಸ್ವಾಮಿ, ಗೌಡೇಶ ಬಿರಾದಾರ, ಭಂಡಪ್ಪಾ ಟೆಂಗಳಿ, ನೀಲಕಂಠ ಬಿರಾದಾರ, ಉಮೇಶ ದೇಗಾಂವ, ಲಕ್ಷ್ಮಿಪುತ್ರ ಬಿರಾದಾರ ಇದ್ದರು. ಇದೇ ಸಂದರ್ಭದಲ್ಲಿ ಹಾಸ್ಯ ಕಲಾವಿದ ರಾಚಯ್ಯ ಸ್ವಾಮಿ ಹಾಗೂ ಜನಪದ ಕಲಾವಿದ ರಾಜು ಹೆಬ್ಬಾಳ ಅವರಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ನಡೆಯಿತು.
ಸಂಗಮನಾಥ ಕಣಸೂರ ಸ್ವಾಗತಿಸಿದರು. ಶಿವಲಿಂಗಪ್ಪ ಟೆಂಗಳಿ ನಿರೂಪಿಸಿದರು. ಗಂಗಾಧರ ಹತಗುಂದಿ ವಂದಿಸಿದರು. ಮಧ್ಯಾಹ್ನ ಮಲ್ಲಿಕಾರ್ಜುನ ದೇವರ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯಗಳೊಂದಿಗೆ ಭವ್ಯವಾದ ಮೆರವಣಿಗೆ ಜರಗಿತು. ಕಾರ್ಯಕ್ರಮದಲ್ಲಿ ಉಪಳಾಂವ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮದ ಹಲವಾರು ಜನ ಭಾಗವಹಿಸಿದ್ದರು.