ಶರಣರ ಪುಣ್ಯಸ್ಮರಣೆಗಳು ಮರಣೋತ್ಸವಃ ಸುಭಾಸ ಯಾದವಾಡ

ವಿಜಯಪುರ, ಡಿ.7- ಬಹಳ ಮುಕ್ತವಾಗಿ ಎಲ್ಲವನ್ನು ತಳಮಟ್ಟದಿಂದ ತಾನು ಚಿಂತನೆ ಮಾಡಿ ಇತರರನ್ನು ಚಿಂತನೆಗೆ ಹಚ್ಚಿದ ಶರಣ ಮಾದಾರ ಚನ್ನಯ್ಯ. ಶರಣರು ಮರಣವನ್ನು ಮಹಾನವಮಿ ಎಂದು ಕರೆದಿರುವಾಗ ನಾವುಗಳು ಅವರ ಪುಣ್ಯಸ್ಮರಣೆಯ ದಿನಗಳನ್ನು ಮರಣೋತ್ಸವ ಎಂದೇ ಕರೆಯುವುದು ಸೂಕ್ತ ಎಂದು ಹಿರಿಯ ಸಾಹಿತಿ ಸುಭಾಸ ಯಾದವಾಡ ಅಭಿಪ್ರಾಯಪಟ್ಟರು.
ಅವರು ರವಿವಾರ ಸಂಜೆ ಬಂಜಾರ ಕ್ರಾಸ್ ಬಳಿಯ ಅಖಿಲ ಭಾರತ ವೀರಶೈವ ಮಹಾಸಭಾ ಆಶ್ರಯದಲ್ಲಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ 6ನೇ ಮಾಸಿಕ ಶಿವಾನುಭವದಲ್ಲಿ ಭಾಗವಹಿಸಿ ಶರಣ ಮಾದಾರ ಚನ್ನಯ್ಯನ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಅವರು ಮುಂದುವರೆದು ಮಾತನಾಡಿ, ಯಾವುದೇ ಒಂದು ಧರ್ಮವನ್ನು ಪ್ರತಿಬಿಂಬಿಸುವ ವೇಷಭೂಷಣಗಳನ್ನು ಧರಿಸಿದ ಮನುಷ್ಯ ಆ ಧರ್ಮದ ವ್ಯಕ್ತಿಯೆಂದು ಕರೆಯಲ್ಪಡುವನು. ಆದರೆ ಮನುಷ್ಯನೋರ್ವನ ಆಚರಣಾ ಪದ್ದತಿ ಬೇರೆ. ಧರ್ಮದ ತಿರುಳನ್ನು ವಾಸ್ತವದಲ್ಲಿ ಆಚರಣೆಗೆ ತಂದಾಗ ಮಾತ್ರ ಅವನು ನಿಜವಾದ ಮನುಷ್ಯ. ನೆರೆಹೊರೆಯವರನ್ನು ಪ್ರೀತಿಸು, ಕಳಬೇಡ, ಕೊಲಬೇಡ ಎಂಬ ಇತ್ಯಾದಿ ಸಂದೇಶಗಳನ್ನು ಯಾವ ಧರ್ಮಗಳು ವಿರೋಧಿಸವು. ಸರ್ವಧರ್ಮಗಳ ಆಶಯವು ಆದೇ ಆಗಿದೆ ಎಂದು ನುಡಿದರು.
ಇತಿಹಾಸ ಸಂಶೋಧಕರಾದ ಕೃಷ್ಣಕೊಲ್ಹಾರ ಕುಲಕರ್ಣಿ ಮಾತನಾಡಿ, ಹೊಸ ತಲೆಮಾರಿಗೆ ನಾವು ಭಕ್ತಿಪಂಥದ ವಿಚಾರಗಳನ್ನು ತಲುಪಿಸಬೇಕಿದೆ. ಹಿರಿಯರಿಗೆ ಬೋಧಿಸಿದ್ದು ಸಾಕು. ಮುಖ್ಯವಾಗಿ ಮಕ್ಕಳಿಗೆ ಹಾಗೂ ಯುವಕರಿಗೆ ಜಾಗೃತಗೊಳಿಸಬೇಕಾದ ಅವಶ್ಯಕತೆ ಇದೆ ಎಂದರು.
ನೇತ್ರತಜ್ಞರಾದ ಡಾ. ಪ್ರಭುಗೌಡ ಪಾಟೀಲ ಮಾತನಾಡಿ, ದಾನ-ಧರ್ಮಗಳು ಸಮಾಜವನ್ನು , ದೇಶವನ್ನು ಮತ್ತಷ್ಟು ಸದೃಢಗೊಳಿಸುತ್ತವೆ. ಶಿವಾನುಭವ, ಸತ್ಸಂಗದ ಲಾಭ ಬಹಳಷ್ಟಿದೆ. ಯುವಕರನ್ನು ಪ್ರೋತ್ಸಾಹಿಸುವುದು ಜೊತೆಗೆ ಅವರನ್ನು ಮುನ್ನೆಲೆಗೆ ತಂದು ನಿಲ್ಲಿಸಿದರೆ ಮತ್ತಷ್ಟು ಸ್ಪೂರ್ತಿಗೊಂಡು ಕೈಂಕರ್ಯಕ್ಕೆ ಮುಂದಾಗುವರು ಎಂದು ಹೇಳುತ್ತ ಸಭೆಯಲ್ಲಿ ನೆರೆದಿದ್ದ ಎಲ್ಲರಿಗೂ ಮರಣೋತ್ತರವಾಗಿ ನೇತ್ರದಾನ ಹಾಗೂ ದೇಹದಾನ ಮಾಡಿ ಎಂದು ಕರೆಕೊಟ್ಟರು.
ಅಧ್ಯಕ್ಷತೆ ವಹಿಸಿದ್ದ ಅ.ಭಾ.ವೀ.ಮ.ದ ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ, ಪತ್ರಕರ್ತ ಸಂಗಮೇಶ ಚೂರಿ ಮಾತನಾಡಿದರು. ವೇದಿಕೆಯ ಮೇಲೆ ಗಣಿತ ಉಪನ್ಯಾಸಕ ಬಸವರಾಜ ಕುಂಬಾರ, ಹಿರಿಯ ಸಾಹಿತಿ ವಿದ್ಯಾವತಿ ಅಂಕಲಗಿ, ಉದ್ಯಮಿ ಪುಂಡಲೀಕ ಬಿರಾದಾರ ಇದ್ದರು.
ಕಾರ್ಯಕ್ರಮಕ್ಕೂ ಮುನ್ನ ಅಗಲಿದ ವೀರಶೈವ ಮಹಾಸಭಾ ಪರಿವಾರದ ಸಾವಿತ್ರಿಬಾಯಿ ಉಪ್ಪಿನ ಹಾಗೂ ಹಿರಿಯ ಚಿತ್ರನಟ ಶಿವರಾಮರವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ದಾಂಜಲಿ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಕಳೆದ ನವೆಂಬರ್‍ನಲ್ಲಿ ರಾಜ್ಯ ರಾಜ್ಯೋತ್ಸವ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ವಿಜಯಪುರ ಜಿಲ್ಲೆಯ ಸಾಧಕರನ್ನು ಸನ್ಮಾನಿಸಲಾಯಿತು.
ಈ ಶಿವಾನುಭವದಲ್ಲಿ ಮಹಾಸಭಾದ ಸಮಸ್ತ ಪದಾಧಿಕಾರಿಗಳು, ಅನೇಕ ಸದಸ್ಯರು, ವಸತಿ ನಿಲಯದ ವಿದ್ಯಾರ್ಥಿಗಳು ಹಾಗೂ ಅಪಾರ ಸಂಖ್ಯೆಯಲ್ಲಿ ಶಿವಾನುಭವ ಆಸಕ್ತರು ಹಾಜರಿದ್ದರು. ರಾಜೇಂದ್ರಕುಮಾರ್ ಬಿರಾದಾರ್ ನಿರೂಪಿಸಿದರು. ಜಂಬುನಾಥ ಕಂಚ್ಯಾಣಿ ಸ್ವಾಗತಿಸಿದರು. ಬಿ.ಆರ್. ಬನಸೋಡೆ ಪ್ರಾರ್ಥಿಸಿದರು. ಎಂ.ಎಂ. ಅವರಾದಿ ವಂದಿಸಿದರು.