ಶರಣರ ತತ್ವ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕುಃ ಎಸ್.ಎ. ಜಿದ್ದಿ

ವಿಜಯಪುರ, ಜು.20-ಬಸವಾದಿ ಶರಣರು ಭೌತಿಕ, ಆಧ್ಯಾತ್ಮಿಕ, ಸತ್ಯ ತತ್ವಗಳನ್ನು ಸಾಮರಸ್ಯಗೊಳಿಸಿ ಸವಿದು ಅನುಭವಿಸಿ ಇಹಪರ ಎಂಬ ಅಖಂಡ ಪರಿಪೂರ್ಣ ನಿತ್ಯ ಸತ್ಯ ಬದುಕಿನ ಶಿವಪಥವನ್ನು ಲೋಕಕ್ಕೆ ನೀಡಿದ ಮಹಾಂತರವರು ಎಂದು ಕಾಳಿದಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಸ್.ಎ. ಜಿದ್ದಿ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದವರು ವೀರಶೈವ ಸಭಾ ಭವನದಲ್ಲಿ ಏರ್ಪಡಿಸಿದ ‘ಮಾಸಿಕ ಶಿವಾನುಭವ’ ಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಅಂತಹ ವಚನಕಾರರಲ್ಲಿ ಶಿವಶರಣ ಕುರುಬಗೊಲ್ಲಾಳ ಒಬ್ಬರು. ಅವರ ವಚನಗಳಲ್ಲಿ ಸಂತ, ಮಹಾಂತರ, ಚಿಂತನೆಗಳನ್ನು ಮೆಲಕು ಹಾಕುವುದು, ಶರಣರನ್ನು ನೆನೆಯುವುದು ಜನಾಂಗದ ಉನ್ನತಿಗಾಗಿ ಶ್ರಮಿಸಿದರು. ಅವರ ತತ್ವ ಆದಾರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಅವರು ನಮಗೆ ಜೀವನ ಅಮೃತ ನೀಡಿದವರು
ಶಿವಶರಣ ಕುರುಬಗೊಲ್ಲಾಳ ಅವರ ಅನುಭಾವ ಕುರಿತು ಆರ್.ಸಿ. ವಾಡೇದ ಮಾತನಾಡುತ್ತಾ, ಶರಣ ಪರಂಪರೆಯಲ್ಲಿಯೇ ಪರಿಪೂರ್ಣ ವಿಕಸನವಾದ ನವ್ಯ, ದಿವ್ಯ, ಭವ್ಯವಾದ ಸಾರ್ಥಕ ಬದುಕನ್ನು ಬಾಳಿ ಬೆಳಗಿದವರು ಬಸವಾದಿ ಶರಣರು. ಸೋಮನಾಥನ ರಾಘವಾಂಕನ ಚರಿತ್ರೆ, ನಂಜುಂಡ ಕವಿಯ ಭೈರವೇಶ್ವರ ಕಾವ್ಯ, ಕಥಾ ರತ್ನಕೋಶ, ವಿರುಪಾಕ್ಷ ಪಂಡೀತನ ಪುರಾಣಗಳಲ್ಲಿ ಶಿವಶರಣ ಕುರುಬ ಗೊಲ್ಲಾಳರ ವಚನಗಳು ಒಟ್ಟು 20 ಎಂದು ನಮಗೆ ತಿಳಿದುಬರುತ್ತವೆ. ಇವರ ಕಾಲ ಕ್ರಿ.ಶ. 1160 ‘ವೀರ ವಿರೇಶ್ವರ ಲಿಂಗ’ ಕಾವ್ಯ ನಾಮದಿಂದ ಕುರಿ, ಆಡು, ಹಿಕ್ಕಿ, ಹೋತ ವಚನ ರಚಿಸಿ ದೇವರನ್ನು ಒಲಿಸಿಕೊಂಡು ಐತಿಹಾಸಿಕ ವ್ಯಕ್ತಿಯಾಗಿ ಶ್ರೇಷ್ಠರೆನಿಸಿದ್ದಾರೆ ಎಂದರು.
ಸಾಹಿತಿ ಸಂಗಮೇಶ ಬದಾಮಿ ಮಾತನಾಡುತ್ತಾ, ನಮ್ಮ ನಡೆ, ನುಡಿ ಇನ್ನೊಬ್ಬರಿಗೆ ಮಾದರಿಯಾದಾಗ ಸಮಾಜದಲ್ಲಿ ನಮ್ಮ ಬದುಕಿಗೆ ಅರ್ಥ ಬರುತ್ತದೆ. ಶರಣರ ಚಿಂತನೆಗಳನ್ನು ಕೇಳಿ ಭಾಗಿಯಾಗುವುದರ ಮೂಲಕ ನಮ್ಮಲ್ಲಿರುವ ನೂನ್ಯತೆಗಳನ್ನು ಹೋಗಲಾಡಿಸಿ ಬದುಕಿಗೆ ಬೇಕಾದ ಆದರ್ಶಗಳನ್ನು ಅಳವಡಿಸಿಕೊಳ್ಳಬಹುದು. ಶರಣ, ಕುರುಬ, ಗೊಲ್ಲಾಳರ ತತ್ವಗಳ ಪ್ರಚಾರದ ಅಗತ್ಯ ತುಂಬಾ ಇದೆ ಎಂದರು.
ಬಸವಾದಿ ಶರಣರು ಸಮಸ್ತ ಮನುಕುಲದ ಪರಿಪೂರ್ಣವಾದ ಸಾರ್ಥಕ ಬದುಕಿನ ಅರಿವು, ಆಚಾರ, ವಿಚಾರ ಇತಿಹಾಸ ಪರಂಪರೆಯಲ್ಲಿಯೇ ಪರಿಪೂರ್ಣತೆ ಸಾಧಿಸಿ ಭವ್ಯವಾದ ಬದುಕನ್ನು ಬಾಳಿದವರು. ಇಂದು ಶರಣರ ತತ್ವ, ಸಿದ್ಧಾಂತ ನಾವೆಲ್ಲಾ ಒಂದಾಗಿ ಅನುಸರಿಸಿ ಬಾಳಬೇಕು ಮುನ್ನಡೆಯಬೇಕು ಎಂದು ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ವಿ.ಸಿ. ನಾಗಠಾಣ ಹೇಳಿದರು.
ಡಾ. ಸೋಮಶೇಖರ ವಾಲಿ, ರವೀಂದ್ರನಾಥ ಮಹಾರಾಜರು, ಡಾ. ವಿ.ಡಿ. ಐಹೊಳ್ಳಿ, ಶಾರದಾ ಕೊಪ್ಪ, ಭಾರತಿ ಬುಯ್ಯಾರ, ಸುವರ್ಣಾ ಕುರ್ಲೆ, ಅಂಕಲಗಿ ದಂಪತಿಗಳು, ಎಮ್.ವಾಯ್. ಜಾವಡಗಿ, ಸಿವಪುತ್ರ ಪೋಳ, ಪ್ರೊ. ಚಾಂದಕವಟೆ, ಪ್ರೊ. ದೊಡ್ಡಮನಿ, ಪ್ರೊ. ದೊಡ್ಡಣ್ಣ ಭಜಂತ್ರಿ, ತೋಟದ, ಎಮ್.ಎಮ್. ಅವರಾದಿ, ಸುಭಾಸ ಯಾದವಾಡ, ನಾಡಗೌಡ, ಕುಮಟಗಿ, ಕಾಶಿನಾಥ, ಎಮ್.ಜಿ. ಯಾದವಾಡ, ಅಮರೇಶ ಸಾಲಕ್ಕಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಶರಣ ಶರಣೇಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು