ಶರಣರ ಚಿಂತನೆಗಳು ಸಾರ್ವಕಾಲಿಕ ಮೌಲ್ಯ

ರಾಯಚೂರು,ಆ.೧೯-
ಶರಣರ ಚಿಂತನೆಗಳು ಸಾರ್ವಕಾಲಿಕ ಮೌಲ್ಯಗಳಾಗಿವೆ. ಸಮಾನತೆ, ನ್ಶೆತಿಕತೆ, ಕಾಯಕ ಪ್ರಜ್ಞೆಯನ್ನು ಜನರಲ್ಲಿ ಬಿತ್ತಿದವರು ಶಿವಶರಣರು. ಅವರ ತತ್ವಗಳು ವಿಶ್ವಮಾನವಾಗಿವೆ ಎಂದು ಅಂಬಾಪತಿ ಪಾಟೀಲ್ ವಕೀಲರು ಹೇಳಿದರು.
ಅವರು ಬಿ.ಆರ್.ಬಿ. ವಾಣಿಜ್ಯ ಮಹಾವಿದ್ಯಾಲಯದ ಸಂಯುಕ್ತಾ ಭಾಷಾವೇದಿಕೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ರಾಯಚೂರು ಜಿಲ್ಲೆ ಕದಳಿವೇದಿಕೆ ಜಿಲ್ಲಾ ಘಟಕ ಇವುಗಳ ಸಂಯುಕ್ತಾಶ್ರಯದಲ್ಲಿ ಖೇಣೇದ ಶರಣಪ್ಪ ಮುರಿಗೆಪ್ಪ ದತ್ತಿ ಉಪನ್ಯಾಸದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಡಾ. ಕೆ ಶಶಿಕಾಂತ ಉಪನ್ಯಾಸಕರು ಸಂಗಮೇಶ್ವರ ಪದವಿ ಮಹಾವಿದ್ಯಾಲಯ ಲಿಂಗಸೂಗೂರು ಅವರು “ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಹಡಪದ ಅಪ್ಪಣ್ಣ” ಎಂಬ ವಿಷಯದ ಕುರಿತು ವಿದ್ವತ್ಪೂರ್ಣವಾಗಿ ಉಪನ್ಯಾಸ ನೀಡಿದರು. ಹಡಪದ ಅಪಣ್ಣ ಬರಿ ತಮ್ಮ ಕುಲಕಸುಬು ಮಾಡದೆ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಅಂಗರಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ನಿರಂತರ ಶರಣರ ತತ್ವಗಳನ್ನು ಅನುಷ್ಠಾನಗೊಳಿಸಿದ ಅಪ್ಪಣ್ಣ ಬಸನಾದಿ ಶರಣರಿಗೆ ಆಪ್ತರಾಗಿದ್ದರು ಎಂದು ವಚನಗಳ ಮೂಲಕ ಪ್ರಸ್ತುತಪಡಿಸಿದರು. ಮುಖ್ಯ ಅತಿಥಿಯಾಗಿ ಡಾ. ಶೀಲಾಕುಮಾರಿ ದಾಸ ಅವರು ಭಾಗವಹಿಸಿದ್ದರು.
ಈ ಕಾರ್ಯಕ್ರಮವು ಕೃತಿ ತುಪ್ಪಸಕ್ಕರಿಯವರ ವಚನಗಾಯನದಿಂದ ಆರಂಭಗೊಂಡಿತು. ಸಂದೀಪ ಕಾರಭಾರಿ ಅತಿಥಿಗಳನ್ನು ಸ್ವಾಗತಿಸಿದರು. ದಾನಮ್ಮ ಸುಭಾಶ್ಚಂದ್ರ ಪ್ರಾಸ್ತವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ದತ್ತಿ ದಾನಿಗಳಾದ ಕೆ.ಚನ್ನಪ್ಪ, ಮುರಿಗೆಪ್ಪ, ಖೇಣೆದ ಭೀಮನಗೌಡ ಇಟಗಿ ಉಪಸ್ಥಿತರಿದ್ದರು.
ಲಲಿತಾ ಎಂ. ಅಧ್ಯಕ್ಷರು ಕದಳಿ ವೇದಿಕೆ ಅಧ್ಯಕ್ಷತೆ ವಹಿಸಿ ಶರಣ ಸಾಹಿತ್ಯ ಪರಿಷತ್ತಿನ ಅಂಗ ಸಂಸ್ಥೆಯಾದ ಕದಳಿ ವೇದಿಕೆಯು ರಸಪ್ರಶ್ನೆ ವಚನಗಾಯನ, ದತ್ತಿ ಉಪನ್ಯಾಸದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ‘ಮಹಾವಿದ್ಯಾಲಯಗಳ ಅಂಗಳಕ್ಕೆ ಅರಿವಿನ ಜ್ಯೋತಿ’ ಎಂಬ ಕಾರ್ಯಕ್ರಮದ ಅಡಿಯಲ್ಲಿ ಇಂದು ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವು ಯಶಸ್ವಿಯಾಯಿತು ಎಂದು ಹರ್ಷವ್ಯಕ್ತ ಪಡಿಸಿದರು.
ಕೆ.ಪೂಜಿತ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು. ಕಾರ್ಯಕ್ರಮದಲ್ಲಿ ಬೋಧಕ-ಬೋಧಕೇತರ ಸಿಬ್ಬಂದಿಯವರು ವಿದ್ಯಾರ್ಥಿಗಳು ಭಾಗವಹಿಸಿದ್ದರು.