
ಭಾಲ್ಕಿ:ಆ.30: ಬಸವಾದಿ ಶರಣರ ಕಾಯಕ ತತ್ವಗಳು ನಮ್ಮೆಲ್ಲರ ಧ್ಯೇಯವಾಗಬೇಕು, ಅಂದಾಗ ಮಾತ್ರ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದು ನಿವೃತ್ತ ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿ ಅಭಿಪ್ರಾಯಪಟ್ಟರು.
ಪಟ್ಟಣದ ಭಾಲ್ಕೇಶ್ವರ ಪ್ರೌಢಶಾಲೆಯಲ್ಲಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಮತ್ತು ತಾಲೂಕು ಚುಟುಕು ಸಾಹಿತ್ಯ ಪರಿಷತ್‍ಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ನಡೆದ ವಚನ ಶ್ರಾವಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹನ್ನೆರಡನೇ ಶತಮಾನದ ಶರಣರು, ಕಾಯಕವೇ ತಮ್ಮ ಜೀವನ ಎಂದು ತಿಳಿದುಕೊಂಡಿದ್ದರು, ಪ್ರತಿಯೊಬ್ಬರೂ ತಮ್ಮ ಕಾಯಕವನ್ನು ಗೌರವಿಸುತ್ತಿದ್ದರು. ಬಸವಣ್ಣನವರು ಕೈಲಾಸವೆನ್ನುವುದು ನಮ್ಮ ಕಾಯಕದಲ್ಲಿದೆ ಎಂದು ಸಾರಿ ಹೇಳಿದರು. ಹೀಗಾಗಿ ಅಂದಿನ ಶರಣರ ಕಾಲದಲ್ಲಿ ಯಾವುದರ ಕೊರತೆ ಇರಲಿಲ್ಲ. ಕಾರಣ ನಾವೆಲ್ಲರೂ ಶರಣರ ಕಾಯಕ ತತ್ವವನ್ನು ಮೈಗೂಡಿಸಿಕೊಂಡು, ಕಾಯಕ ಯೋಗಿಗಳಾಗಿ ಜೀವಿಸಬೇಕು ಎಂದು ಹೇಳಿದರು.
ಪ್ರಾಸ್ತಾವಿಕನುಡಿ ನುಡಿದ ಚು.ಸಾ.ಪ ತಾಲೂಕು ಅಧ್ಯಕ್ಷ ಕಾಶಿನಾಥ ಭೂರೆ, ಶಿಕ್ಷಣ ನಮ್ಮ ರೂಪರೇಶ ಬದಲಾಯಿಸುತ್ತದೆ. ನಾವೆಲ್ಲರೂ ಶಿಕ್ಷಣವಂತರಾಗಬೇಕು ಎಂದು ಹೇಳಿದರು. ಸದಾಶಯನುಡಿ ನುಡಿದ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರೊ| ಶಂಭುಲಿಂಗ ಕಾಮಣ್ಣ, ನಾವಾಡುವ ಮಾತುಗಳು ಮುತ್ತಿನಂತಿರಬೇಕು. ನಮ್ಮಲ್ಲಿ ಹೊಟ್ಟೆಕಿಚ್ಚು ಇರಬಾರದು, ಸಾಹಿತ್ಯ ಇಂತಹ ಮೌಲ್ಯಗಳನ್ನು ನಮಗೆ ತಿಳಿಸಿಕೊಡುತ್ತದೆ. ಸಾಹಿತ್ಯ ಎನ್ನುವುದು ಸಂಪತ್ತು. ನಾವೆಲ್ಲರೂ ಸಾಹಿತ್ತಿಕವಾಗಿ ಮುನ್ನಡೆದರೆ ವಿದ್ಯಾಸಂಪತ್ತು ಕೊನೆಯವರೆಗೆ ನಮ್ಮಜೊತೆಗಿರುತ್ತದೆ. ಇವುಗಳಲ್ಲಿ ವಚನ ಸಾಹಿತ್ಯ ಅಂತರಂಗದ ಆಭರಣವಾಗಿದೆ. ವಚನ ಸಾಹಿತ್ಯ ನಮ್ಮ ಜೀವನ ರಕ್ಷಿಸುತ್ತದೆ. ನಮಗೆ ನಿಶ್ಚಿಂತೆಯಿಂದಿರಲು ಕಲಿಸುತ್ತದೆ. ನಮ್ಮಲ್ಲಿ ಧೈರ್ಯ ತುಂಬುತ್ತದೆ, ನಮ್ಮ ಆತ್ಮವಿಸ್ವಾಸ ಹೆಚ್ಚಿಸುತ್ತದೆ ಎಂದು ಹೇಳಿದರು.
ವಿಶೇಷ ಉಪನ್ಯಾಸ ಮಂಡಿಸಿದ ಸಾಹಿತಿ ವೀರಣ್ಣಾ ಕುಂಬಾರ, ವಚನ ಸಾಹಿತ್ಯ ವಿಶ್ವಮಾನ್ಯ ಸಾಹಿತ್ಯವಾಗಿದೆ. ವಿಶ್ವದ ಜನರ ಹಿತವನ್ನೇ ಬಯಸುವ ಸಾಹಿತ್ಯ ವಚನ ಸಾಹಿತ್ಯವಾಗಿದೆ. ಹೀಗಾಗಿ ವಚನ ಸಂದೇಶವನ್ನು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಮೂಡಿಸುವ ನಿಟ್ಟಿನಲ್ಲಿ ಶರಣ ಸಾಹಿತ್ಯ ಪರಿಷತ್ತು ಕಾರ್ಯನಿರ್ವಹಿಸುತ್ತಲಿದೆ ಎಂದು ಹೇಳಿದರು.
ಶಿಕ್ಷಣ ಸಂಸ್ಥೆಯ ಕೋಶಾಧ್ಯಕ್ಷ ಶಿವಶರಣಯ್ಯಾ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಮ್.ಪಿ.ರಾಠೋಡ, ಮಹಾದೇವ, ಬಾಲಾಜಿ ಬಿರಾದಾರ, ಸೋಪಾನ ಬಿರಾದಾರ, ಸುನಿತಾ ಸಂಗೋಳಗಿ, ಚೈತನ್ಯಾ, ಶಿವಕಾಂತಾ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಬಾಲಾಜಿ ಸ್ವಾಗತಿಸಿದರು. ಶಿಕ್ಷಕಿ ಶಿವಕಾಂತಾ ನಿರೂಪಿಸಿದರು. ಸುನಿತಾ ವಂದಿಸದಿರು.