
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಆ.೬ : ಆಷಾಢಮಾಸದಲ್ಲಿ ಯಾವುದೇ ಕಾರ್ಯ ಮಾಡಿದರೆ ಒಳ್ಳೆಯದಾಗುವುದಿಲ್ಲ ಎಂಬ ಮೂಢನಂಬಿಕೆ ನೆಲೆಯೂರಿದೆ. ಮಾನವ ಒಳ್ಳೆಯ ಕಾರ್ಯ ಮಾಡಲು ಯಾವುದೇ ದಿನ ಮಾಸ ಕನಿಷ್ಟವಲ್ಲ. ಎಲ್ಲಾ ದಿನಗಳು ಶ್ರೇಷ್ಠ ದಿನಗಳಾಗಿವೆ ಎಂದು ಶ್ರೀ ಬಸವಪ್ರಭು ಸ್ವಾಮಿಗಳು ನುಡಿದರು.ಶ್ರೀ ಮುರುಘರಾಜೇಂದ್ರ ಮಠದಲ್ಲಿ ನಡೆದ ಮೂವತ್ಮೂರನೆ ವರ್ಷದ ಎಂಟನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಶ್ರೀಗಳು ಮಾತನಾಡಿದರು.ಮದುವೆಯಲ್ಲಿ ವರ ವಧುವಿಗೆ ತಾಳಿ ಕಟ್ಟುತ್ತಾನೆ. ಕಾರಣ ಏನೇ ಕಷ್ಟ ಬಂದರೂ ತಾಳಿಕೊಳ್ಳಬೇಕು. ಶಾಂತ ಸ್ವಭಾವ ಇರಬೇಕು. ಕೋಪಕ್ಕೆ ಬುದ್ಧಿಯನ್ನು ಕೊಡಬಾರದು. ಗಂಡು ಹೆಣ್ಣು ಕುಟುಂಬದ ಸದಸ್ಯರು ಅನ್ಯೋನ್ಯತೆಯನ್ನು ಮರೆತು ಬಾಳುವುದರಲ್ಲಿ ಅರ್ಥವಿಲ್ಲ. ಪರಸ್ಪರರಲ್ಲಿ ಉತ್ತಮ ಬಾಂಧವ್ಯ ಏರ್ಪಡಬೇಕು. ಕೋಪ ಬದುಕನ್ನು ಕೆಡಿಸುತ್ತದೆ. ದೇವರು ಜೀವನವನ್ನು ಕೊಟ್ಟಿದ್ದಾನೆ ಅದನ್ನು ಸತ್ಕಾರ್ಯ ಮಾಡಲು ಬಳಸಿಕೊಳ್ಳಬೇಕು. ಸತಿ-ಪತಿಗಳು ಹಾಲುಜೇನಿನಂತೆ ಇರಬೇಕು. ಹಣ ಆಸ್ತಿಗಿಂತಲೂ ವಧುವರರು ಒಬ್ಬರನ್ನೊಬ್ಬರು ಅರಿತು ಜೀವನ ಪರ್ಯಂತ ನೆಮ್ಮದಿಯ ಬದುಕು ಕಟ್ಟಿಕೊಳ್ಳುವುದು ಮುಖ್ಯ ಎಂದು ಹೇಳಿದರು.ಹಿರೇಮಾಗಡಿ ಮುರುಘಾಮಠದ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮಿಗಳು ಮಾತನಾಡಿ, ಜಾತಿ ಮತ ಪಂಥ ಭೇದವಿಲ್ಲದ ಏಕೈಕ ಮಠ ಶ್ರೀಮುರುಘಾಮಠ. ಬುದ್ಧ ಸಂಸಾರವನ್ನು ಒದ್ದು ಗೆದ್ದ. ಬಸವಣ್ಣ ಸಂಸಾರದಲ್ಲಿದ್ದು ಗೆದ್ದರು. ಶ್ರೀಮಠವು ಎಲ್ಲರೂ ನಮ್ಮವರೇ ಎನ್ನುವ ಮಠವಾಗಿದೆ. ಆಷಾಢಮಾಸ ಜನರಿಗೆ ಹೇಗೆ ಕೆಟ್ಟದ್ದು ಎನ್ನುವುದೇ ಅರ್ಥವಾಗುತ್ತಿಲ್ಲ. ಬಸವಾದಿ ಶರಣರಿಗೆ ಇಂತಹ ಆಲೋಚನೆ ಇರಲಿಲ್ಲ. ಅವರಿಗೆ ಎಲ್ಲ ದಿನ ತಿಂಗಳುಗಳು ಶ್ರೇಷ್ಠ ದಿನಗಳಾಗಿದ್ದವು ಎಂದು ನುಡಿದರು.ಮುಖ್ಯಅತಿಥಿ ಬಾಡದ ಆನಂದರಾಜ್ ಮಾತನಾಡಿ, ಗಂಡುಹೆಣ್ಣು ಸಮಾನರೆಂಬ ಭಾವ ವಚನಗಳಲ್ಲಿದೆ. ಶರಣತತ್ವದ ಮದುವೆ ಅದು ಪರಿಪೂರ್ಣ ವಿವಾಹ. ಶರಣರ ಆದರ್ಶ ಜೀವನವನ್ನು ನಾವೆಲ್ಲರು ಸಾಗಿಸಬೇಕೆಂದರು.ಅರೆನಹಳ್ಳಿ ತಿಪ್ಪೇಸ್ವಾಮಿ ಮಾತನಾಡಿದರು. ಶ್ರೀ ಶಿವಯೋಗಿ ದೇವರು ಶಿಕಾರಿಪುರ, ಶ್ರೀ ಮುರುಘೇಂದ್ರ ಸ್ವಾಮಿಗಳು, ಶ್ರೀ ಗೋವಿಂದಪ್ಪ ಸ್ವಾಮಿಗಳು ಈಚಲನಾಗೇನಹಳ್ಳಿ, ಶ್ರೀ ತಿಪ್ಪೇರುದ್ರ ಸ್ವಾಮಿಗಳು ಹೊಳವನಹಳ್ಳಿ ಇದ್ದರು.ಕಾರ್ಯಕ್ರಮದಲ್ಲಿ ರೆಡ್ಡಿ (ವರ) – ನಾಯಕ (ವಧು) ಮತ್ತು ಆದಿಕರ್ನಾಟಕ (ವರ) – ಒಕ್ಕಲಿಗ (ವಧು) ಅಂತರ್ಜಾತಿ ಸೇರಿದಂತೆ ಜ ಜೋಡಿಗಳ ವಿವಾಹ ನೆರವೇರಿಸಲಾಯಿತು.ತೋಟಪ್ಪ ಉತ್ತಂಗಿ ಸಂಗಡಿಗರು ವಚನ ಪ್ರಾರ್ಥನೆ ಮಾಡಿದರು. ಜ್ಞಾನಮೂರ್ತಿ ಸ್ವಾಗತಿಸಿದರು. ಪ್ರಕಾಶ ದೇವರು ನಿರೂಪಿಸಿದರು.