ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿ

ಬೀದರ್: ಎ.28:ಜೀವನ ಪಾವನ ಮಾಡಿಕೊಳ್ಳಲು ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು ಎಂದು ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ಸಲಹೆ ಮಾಡಿದರು.

ಬೀದರ್ ತಾಲ್ಲೂಕಿನ ಚಾಂಬೋಳ್ ಗ್ರಾಮದಲ್ಲಿ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಬಸವಾದಿ ಶರಣರು, ಸಂತರು, ಸೂಫಿಗಳು ನಡೆದಾಡಿದ ಪುಣ್ಯ ಭೂಮಿ ಇದಾಗಿದೆ. ಈ ನೆಲದಲ್ಲಿ ಜನಿಸಿದ ಎಲ್ಲರೂ ಧನ್ಯರು ಎಂದು ನುಡಿದರು.

ನಾಮಗಳು ಬೇರೆ ಬೇರೆ ಇದ್ದರೂ, ದೇವರು ಒಬ್ಬನೇ ಇದ್ದಾನೆ. ದೇವರ ಕೃಪೆಗೆ ಪಾತ್ರರಾಗಲು ಪೂಜೆ, ಧ್ಯಾನ ಮಾಡಬೇಕು. ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಮನುಷ್ಯರೆಲ್ಲರೂ ಒಂದೇ. ಕುಲ ಕುಲ ಎಂದು ಬಡಿದಾಡದಿರಿ. ಪರಸ್ಪರ ಪ್ರೀತಿ, ವಿಶ್ವಾಸದಿಂದ ಇರಬೇಕು. ಸೌಹಾರ್ದದ ಬದುಕು ನಡೆಸಬೇಕು. ಗುರು, ಹಿರಿಯರನ್ನು ಗೌರವಿಸಬೇಕು. ಆದರ್ಶ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಭವ್ಯ ಮೆರವಣಿಗೆ: ಗ್ರಾಮಕ್ಕೆ ಬಂದ ಡಾ. ಬಸವಲಿಂಗ ಅವಧೂತರನ್ನು ಭವ್ಯವಾಗಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು. ಜೆಸಿಬಿ ಮೂಲಕ ಪುಷ್ಪವೃಷ್ಟಿ ಮಾಡಲಾಯಿತು. ಮುತ್ತೈದೆಯರು ಆರತಿ ಬೆಳಗಿದರು. ಅಲಂಕೃತ ರಥದಲ್ಲಿ ಗ್ರಾಮದಲ್ಲಿ ಶ್ರೀಗಳ ಭವ್ಯ ಮೆರವಣಿಗೆ ಜರುಗಿತು. ಡೊಳ್ಳು ಕುಣಿತ ಮೆರವಣಿಗೆಯ ಆಕರ್ಷಣೆ ಆಗಿತ್ತು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ರುದ್ರಮನಿ ಪಟ್ಟದ್ದೇವರು ವಹಿಸುದರು. ಗ್ರಾಮದ ಪ್ರಮುಖರಾದ ಮಂಜುನಾಥ ಬೆಂಬಳಗೆ, ಮಹಾಂತೇಶ ಬ್ಯಾಂಬ್ರೆ, ಕೃಷ್ಣ ಕುಂಬಾರ, ಚನ್ನಬಸವ ಪಾಟೀಲ, ಸಂತೋಷ ಸ್ವಾಮಿ, ಚಂದ್ರು ಹಡಪದ, ಸಂಜೀವಕುಮಾರ ಬೆಂಬಳಗೆ, ಮಲ್ಲಪ್ಪ ಬ್ಯಾಂಬ್ರೆ ಮೊದಲಾದವರು ಪಾಲ್ಗೊಂಡಿದ್ದರು.