ಶರಣರು ಮನುಕುಲದ ಮಾರ್ಗದರ್ಶಕರು

ಬೀದರ:ಮಾ.21:ಬಸವಾದಿ ಶಿವಶರಣರ ಜೀವನ ಸಿದ್ಧಾಂತವನ್ನು, ವಚನಗಳಲ್ಲಿ ವ್ಯಕ್ತವಾದ ಸಾರ್ವತ್ರಿಕ ಜೀವನ ಮೌಲ್ಯಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದ ಶುದ್ಧೀಕರಣವಾಗುತ್ತದೆ. ಎಲ್ಲ ಕಡೆಗಳಲ್ಲಿ ಶಾಂತಿ ಸಮೃದ್ಧಿ ನೆಲೆಸುತ್ತದೆ ಎಂದು ಪಶುಸಂಗೋಪನೆ ಮತ್ತು ಬೀದರ ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಪ್ರೊ. ಶಿವಕುಮಾರ ಕಟ್ಟೆ ಅಭಿಪ್ರಾಯಪಟ್ಟರು.

ಅವರು ಬೀದರ ನಗರದ ಪ್ರತಾಪನಗರ ಬಡಾವಣೆಯ ಜನಸೇವಾ ಪ್ರೌಢ ಶಾಲೆ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘ (ರಿ.) ಕಲಬುರಗಿ ಇವರ ಸಹಯೋಗದೊಂದಿಗೆ ವಿಕಾಸ ಅಕಾಡೆಮಿ ಕಲಬುರಗಿ ಹಾಗೂ ವಚನ ಚೇತನ ಟ್ರಸ್ಟ್ (ರಿ.) ಬೀದರ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ‘ಶರಣರ ವಚನ ಸಾಹಿತ್ಯ ವಿಚಾರ ಸಂಕಿರಣ’ವನ್ನು ಉದ್ಘಾಟಿಸಿ ಮಾತನಾಡಿದರು.

ಇಪ್ಪತ್ತೊಂದನೆಯ ಶತಮಾನದಲ್ಲಿ ಜೀವಿಸುತ್ತಿರುವ ನಾವು ಸಮಾಜ ಮೆಚ್ಚುವಂತೆ ಜೀವಿಸಬೇಕು. ಗುರು ಹಿರಿಯರ ಜೊತೆಗೆ ಒಳ್ಳೆಯ ಸಂಬಂಧ ಹೊಂದಿರಬೇಕು. ನಮ್ಮ ಜೀವನ ವಿಧಾನವು ನಾಲ್ಕು ಜನರಿಗೆ ಮಾದರಿಯಾಗಿರಬೇಕೆಂದು ಕಲಬುರಗಿಯ ಸ್ವಾಯತ್ತ ಸರಕಾರಿ ಮಹಾವಿದ್ಯಾಲಯದ ಸಹಪ್ರಾಧ್ಯಾಪಕ ಡಾ. ಕಲ್ಯಾಣರಾವ ಜಿ. ಪಾಟೀಲರು ತಿಳಿಸಿದರು. ಮುಂದುವರೆದು ನಮ್ಮ ಸುತ್ತಲಿನ ಭೂಮಿಯ ಮೇಲೆ ಎಲ್ಲಿ ನೋಡಿದಲ್ಲಿ ಹಿಂಸೆ, ಕ್ರೌರ್ಯ, ದೌರ್ಜನ್ಯ, ದಬ್ಬಾಳಿಕೆಗಳ ಅಟ್ಟಹಾಸ ವ್ಯಾಪಕವಾಗುತ್ತ ಸಾಗುತ್ತಿದೆ. ಇದೆ ರೀತಿ ಮುಂದುವರೆದರೆ ಇಡೀ ಮನುಕುಲವೇ ನಾಶವಾಗುತ್ತದೆ. ಇದನ್ನು ತಪ್ಪಿಸಬೇಕಾದರೆ ಶರಣರು ತಿಳಿಸಿದ ಪರಸ್ಪರ ಪ್ರೀತಿ-ಪ್ರೇಮ, ಸ್ನೇಹ-ಸಹಕಾರ, ದಯೆ-ಅನುಕಂಪ-ಕಾರುಣ್ಯ, ಸಾಮರಸ್ಯ-ಸೌಹಾರ್ದತೆ, ಸರಳತೆ-ಸಮಾನತೆ, ಸೌಜನ್ಯತೆ ಮತ್ತು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದದ್ದು ಅಗತ್ಯವಾಗಿದೆಂದು ತಿಳಿಸಿದರು.

ಕಾಯಕದ ಪರಿಕಲ್ಪನೆಯನ್ನು ವಚನಕಾರರು ಜಗತ್ತಿಗೆ ಕೊಟ್ಟಿರುವ ಅಮೂಲ್ಯವಾದ ಸಿದ್ಧಾಂತವಾಗಿದೆ. ತಾನು ಮಾಡುವ ಕಾಯಕದಲ್ಲಿ ತನು ಮನ ಪ್ರಾಣವನ್ನು ಸವೆಸಬೇಕು. ಕಾಯಕಲದಲ್ಲಿ ಎಳ್ಳಷ್ಟು ಆಲಸ್ಯವಿರಬಾರದು. ಗುರು ಲಿಂಗ ಜಂಗಮ ಮುಂದಿದ್ದರೂ ಅದರ ಹಂಗುಹರಿದು ಬದ್ಧತೆಯಿಂದ ನಾವು ಕೈಗೊಂಡ ಕಾಯಕವನ್ನು ನಿಭಾಯಿಸಿದರೆ ಅದಕ್ಕಿಂತ ಮಿಗಿಲಾದ ಸುಖ ಬೇರೊಂದಿಲ್ಲ. ನಮ್ಮ ಕೆಲಸವು ಇನ್ನೊಬ್ಬರ ಕೆಲಸಕ್ಕಿಂತ ಕೀಳು ಎಂದು ಯಾವಾಗಲೂ ಭಾವಿಸಬಾರದು. ಮಾಡುವ ಮಾಟದಲ್ಲಿ ತೃಪ್ತಿ ಹೊಂದಿರಬೇಕು. ಆತ್ಮತೃಪ್ತಿಯಿಂದ ಮಾಡುವ ಕಾಯಕದಲ್ಲಿ ಸಿಗುವ ಆನಂದವು ಮತ್ತೆಲ್ಲಿಯೂ ಲಭಿಸಲಾರದೆಂದು ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಕೇಂದ್ರದ ನಿರ್ದೇಶಕರಾದ ಡಾ. ಬಿ.ಬಿ. ಪೂಜಾರಿ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ರಾಜ ಆಚಾರ್ಯ, ಜಯರಾಮ ಮಣಿಯಾಡಿ, ಸೌಭಾಗ್ಯವತಿ ಆರ್.ಜೆ, ಡಾ. ಬಸವರಾಜ ಬಲ್ಲೂರು, ರಮೇಶ ಬಿರಾದಾರ, ಡಾ. ಶ್ರೀಕಾಂತ ಪಾಟೀಲ, ಪ್ರೊ. ಅಶೋಕ ಕೋರೆ, ಅಪ್ಪಾರಾವ ಬಿರಾದಾರ, ಬಸವರಾಜ ಮುಗಟಾಪೂರೆ, ಸುನೀತಾ ದಾಡಗೆ, ಶಾಂತಾ ಎಚ್, ಗೀತಾ ನಾರಾ, ವಾಮನ ಮಾನೆ, ಇಂದುಬಾಯಿ ಬಿರಾದಾರ, ಲಕ್ಷ್ಮಣರಾವ ಎರನ್ನಳ್ಳಿ, ರಾಹುಲ ಮೇತ್ರಸ್ಕರ, ನೀಲಮ್ಮ ಚಾಮರೆಡ್ಡಿ, ರಾಜಶ್ರೀ ಮೊದಲಾದವರು ಭಾಗವಹಿಸಿದ್ದರು.

ಒಂದು ದಿನದ ವಿಚಾರ ಸಂಕಿರಣ ಗೋಷ್ಠಿಯ ಸಮಾರೋಪ ಭಾಷಣ ಮಾಡುತ್ತ, ವಚನಕಾರರ ವಿಚಾರ ಸರಣಿಯನ್ನು ಸಮಕಾಲೀನ ಸಾಂಸ್ಕøತಿಕ, ಸಂದರ್ಭಗಳಿಗೆ ಅನ್ವಯಿಸಿಕೊಂಡರೆ ಕಲುಷಿತಗೊಂಡಿರುವ ಪರಿಸರವನ್ನು ಹಸನು ಮಾಡಿಕೊಳ್ಳಲು ಸಾಧ್ಯವಿದೆಂದು ನಿವೃತ್ತ ಕನ್ನಡ ಪ್ರಾಧ್ಯಪಕ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ತಿಳಿಸಿದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘದ ನಿರ್ದೇಶಕರಾದ ರೇವಣಸಿದ್ಧಪ್ಪ ಜಲಾದೆ ಅವರು ಅಧ್ಯಕ್ಷೀಯ ಮಾತನಾಡುತ್ತ, ನಡೆ ನುಡಿಗಳನ್ನು ಒಂದಾಗಿಸಿಕೊಂಡು ಬಾಳಿ ಬದುಕಿದ ಶರಣರು ನಮಗೆಲ್ಲ ಮಾರ್ಗದರ್ಶಕರು. ಅವರ ಜೀವನ ಸಾಧನೆಯನ್ನು ಮನನ ಮಾಡಿಕೊಂಡರೆ ಸಮಾಜಕ್ಕೆ ಒಳಿತಾಗುತ್ತದೆ. ಪ್ರಗತಿಪರ ಚಿಂತನೆಗಳನ್ನು ರೂಢಿಸಿಕೊಂಡು ಸಮಾಜ ಸಂಘಟನೆಯನ್ನು ತೊಡಗಿಸಿಕೊಂಡು ಅರ್ಥಪೂರ್ಣವಾಗಿ ಜೀವಿಸಬೇಕಾದದ್ದು ಅಗತ್ಯವಾಗಿದೆಂದರು.

ವಚನ ಕಂಠಪಾಠ, ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ ಜಿಲ್ಲೆಯ ವಿವಿಧ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಸತ್ಕರಿಸಲಾಯಿತು.

ಡಾ. ರಘುಶಂಖ ಭಾತಂಬ್ರಾ ಪ್ರಸ್ತಾವಿಕವಾಗಿ ಮಾತನಾಡಿದರು. ರೂಪಾ ಚಿಟ್ಟಾ ನಿರೂಪಿಸಿದರು. ಶಿವಾನಂದ ಮಲ್ಲ ವಂದಿಸಿದರು.