ಶರಣಬಸವ ವಿಶ್ವವಿದ್ಯಾಲಯ ಹಾಗೂ ಮೇದಿನಿ ಟೆಕ್ನಾಲಜೀಸ್ ನಡುವೆ ತಿಳುವಳಿಕೆಯ ಒಪ್ಪಂದ

ಕಲಬುರಗಿ;ಜು.15: ಶರಣಬಸವ ವಿಶ್ವವಿದ್ಯಾಲಯವು ತನ್ನ ಚಟುವಟಿಕೆಗಳ ಉತ್ತುಂಗವನ್ನು ವಿಸ್ತರಿಸುತ್ತಾ, ತನ್ನ ಉದ್ಯಮ ಆಧಾರಿತ ಕಾರ್ಯಕ್ರಮಗಳನ್ನು ಅಪ್‍ಗ್ರೇಡ್ ಮಾಡಲು ಮತ್ತು ವಿಶ್ವವಿದ್ಯಾಲಯದಲ್ಲಿ ನೀಡಲಾಗುವ ಇಂಜಿನಿಯರಿಂಗ್ ಹಾಗೂ ಆರ್ಕಿಟೆಕ್ಚರ್ ಕೋರ್ಸ್‍ಗಳಲ್ಲಿ ಡಿಜಿಟಲೀಕರಣಕ್ಕೆ ಸಂಬಂಧಿಸಿದ ಎಲ್ಲಾ ಕಾರ್ಯಕ್ರಮಗಳಿಗೆ ಮಾರ್ಗದರ್ಶನ ನೀಡಲು ಸಾಫ್ಟ್‍ವೇರ್ ದಿಗ್ಗಜ, ಮೇದಿನಿ ಟೆಕ್ನಾಲಜೀಸ್‍ನೊಂದಿಗೆ ತಿಳುವಳಿಕೆಯ ಒಪ್ಪಂದವನ್ನು ಮಾಡಿಕೊಂಡಿದೆ.

ಮೇದಿನಿ ಟೆಕ್ನಾಲಜೀಸ್‍ನ ಸಹ ಸಂಸ್ಥಾಪಕ, ವ್ಯವಸ್ಥಾಪಕ ನಿರ್ದೇಶಕ ಮತ್ತು ಕಾರ್ಯಕ್ರಮ ಸಂಯೋಜಕರಾದ ನಿಜಗುಣಸ್ವಾಮಿ ನೆಗಲುರಮಠ ಅವರು ಮೇದಿನಿ ಟೆಕ್ನಾಲಜೀಸ್ ಪರವಾಗಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಪರವಾಗಿ, ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿಗಳು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್‍ರಾದ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಅವರ ಸಮ್ಮುಖದಲ್ಲಿ, ವಿಶ್ವವಿದ್ಯಾಲಯದ ಕುಲಸಚಿವ ಡಾ. ಅನಿಲಕುಮಾರ ಬಿಡವೆ ಅವರು ಶುಕ್ರವಾರ ಕಲಬುರಗಿ ನಗರದಲ್ಲಿ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿದರು. ಈ ಸಂಧರ್ಭದಲ್ಲಿ ಸಿವಿಲ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಾಗೂ ಆರ್ಕಿಟೆಕ್ಚ್‍ರ್ ಇಂಜಿನಿಯರಿಂಗ್ ವಿಭಾಗಗಳ ಮುಖ್ಯಸ್ಥರು ಹಾಜರಿದ್ದರು.

ಮೇದಿನಿ ಟೆಕ್ನಾಲಜೀಸ್‍ನೊಂದಿಗಿನ ಐದು ವರ್ಷಗಳ ಈ ಎಂ.ಒ.ಯು., ಉದ್ಯಮದ ಅವಶ್ಯಕತೆಗೆ ಅನುಗುಣವಾಗಿ ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚ್‍ರ್ ವಿಭಾಗಗಳಲ್ಲಿ ಡಿಜಿಟಲ್ ರೂಪಾಂತರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಸಮೃದ್ಧಗೊಳಿಸುವಲ್ಲಿ ಬಹಳ ಉಪಯುಕ್ತವಾಗುತ್ತದೆ ಎಂದು ಡಾ ಬಿಡವೆ ಹೇಳಿದರು. ಮೇದಿನಿ ಟೆಕ್ನಾಲಜೀಸ್‍ನ ತಜ್ಞರು ತರಬೇತಿ ಮತ್ತು ಪ್ರಮಾಣೀಕರಣ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ, ಇದು ವಿದ್ಯಾರ್ಥಿಗಳಿಗೆ ಇತ್ತೀಚಿನ ತಂತ್ರಜ್ಞಾನವನ್ನು ಸುಲಭವಾಗಿ ತಿಳಿದುಕೊಳ್ಳಲು ಮತ್ತು ಉದ್ಯಮಕ್ಕೆ ಸಿದ್ಧರಾಗಲು ಸಹಾಯ ಮಾಡುತ್ತದೆ ಎಂದರು.

ವಿದ್ಯಾರ್ಥಿಗಳ ಕೌಶಲ್ಯವನ್ನು ಉನ್ನತೀಕರಿಸಲು ಆಟೋಡೆಸ್ಕ್, ಬೆಂಟ್ಲಿ, ಟ್ರಿಂಬಲ್, ಪಿಟಿಸಿ ಮತ್ತು ಡಸಾಲ್ಟ್‍ನಂತಹ ಅಗತ್ಯ ಸಾಫ್ಟ್‍ವೇರ್‍ಗಳನ್ನು ಒದಗಿಸುವ ಮೂಲಕ ಮೇದಿನಿ ಟೆಕ್ನಾಲಜೀಸ್ ವಿಶ್ವವಿದ್ಯಾಲಯವನ್ನು ಬೆಂಬಲಿಸುತ್ತದೆ ಮತ್ತು ಇದರ ಹೊರತಾಗಿ ಮೇದಿನಿ ಟೆಕ್ನಾಲಜೀಸ್ ಲೂಮಿಯನ್, ಎನ್ಸ್ಕೇಪ್ ಹಾಗೂ ಇತರ ಕೆಲವು ಸಾಫ್ಟ್‍ವೇರ್‍ಗಳ ಸರಬರಾಜಿನಿಂದ ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ ಎಂದು ಡಾ. ಬಿಡವೆ ಹೇಳಿದರು.

ಮೇದಿನಿ ಟೆಕ್ನಾಲಜೀಸ್ ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ವಿಭಾಗದ ವಿದ್ಯಾರ್ಥಿಗಳಿಗೆ ಸ್ಟೈಫಂಡ್ ಆಧಾರಿತ ಆರು ತಿಂಗಳ ಇಂಟರ್ನ್‍ಶಿಪ್ ಕಾರ್ಯಕ್ರಮವನ್ನು ತಿಂಗಳಿಗೆ ಕನಿಷ್ಠ 5000 ರೂಪಾಯಿಯೊಂದಿಗೆ ಒದಗಿಸಲು ಒಪ್ಪಿಕೊಂಡಿದೆ ಮತ್ತು ಇಂಟರ್ನ್‍ಶಿಪ್ ಕಾರ್ಯಕ್ರಮಕ್ಕೆ ದಾಖಲಾದ ಶೇಕಡಾ 25 ರಷ್ಟು ವಿದ್ಯಾರ್ಥಿಗಳಿಗೆ ಕನಿಷ್ಠ ಉದ್ಯೋಗಾವಕಾಶವನ್ನು ನೀಡುತ್ತದೆ ಹಾಗೂ ಇದರ ವಾರ್ಷಿಕ ಪ್ಯಾಕೇಜ್ 3.5 ಲಕ್ಷ ರೂ. ಆಗಿರುತ್ತವೆ.

ಶರಣಬಸವ ವಿಶ್ವವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಅಧ್ಯಕ್ಷ ಪೆÇ್ರ.ರಾಜಶೇಖರ ಯರಗೋಳ್, ಸಿವಿಲ್ ಮಹಿಳಾ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಡಾ. ಶೀತಲ್ ಬಿರಾದಾರ್, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಪೆÇ್ರ.ಶಿವಕುಮಾರ್ ರಾಚೋಟಿ, ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥ ಪೆÇ್ರ. ಜಗದೀಶ್ ಪಾಟೀಲ್, ಎಲೆಕ್ಟ್ರಿಕಲ್ ಮಹಿಳಾ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಪೆÇ್ರ. ಸುಷ್ಮಾ ಪಾಟೀಲ್ ಮತ್ತು ಆರ್ಕಿಟೆಕ್ಚರ್ ವಿಭಾಗದ ಹಿರಿಯ ಉಪನ್ಯಾಸಕ ಡಾ. ಸುರೇಶ್ ಜಿ ಪಾಟೀಲ್ ಅವರು ಎಂ.ಒ.ಯು.ಗೆ ತಮ್ಮ ವಿಭಾಗಗಳ ಪರವಾಗಿ ಸಹಿ ಹಾಕಿದರು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಡೀನ್ ಡಾ.ಲಕ್ಷ್ಮೀ ಪಾಟೀಲ ಮಾಕಾ ಸೇರಿದಂತೆ ಇತರ ಪ್ರಮುಖರು ಭಾಗವಹಿಸಿದ್ದರು.