ಶರಣಬಸವ ವಿಶ್ವವಿದ್ಯಾಲಯದ ಘಟಿಕೋತ್ಸವ ನಾಳೆ

ಕಲಬುರಗಿ ಸೆ 6: ಶರಣಬಸವ ವಿಶ್ವವಿದ್ಯಾಲಯದ 3ನೇ ಮತ್ತು 4ನೇ ಘಟಿಕೋತ್ಸವ ನಗರದ ಬಸವರಾಜಪ್ಪ ಅಪ್ಪ ಸ್ಮರಣಾರ್ಥ ಭವನದಲ್ಲಿ ಸೆಪ್ಟೆಂಬರ್ 7 ರಂದು ಬೆಳಗ್ಗೆ 11.45 ಕ್ಕೆ ನಡೆಯಲಿದೆ ಎಂದು ಮಹಾದಾಸೋಹಿ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಗಳು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಶರಣಬಸವಪ್ಪ ಅಪ್ಪ ತಿಳಿಸಿದರು.
ಇಂದು ಸಂಸ್ಥಾನದ ದಾಸೋಹ ಮನೆಯ ಸಭಾಂಗಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಭಾರತೀಯ ಬಾಹ್ಯಾಕಾಶ ಆಯೋಗದ ಅಧ್ಯಕ್ಷ ಮತ್ತು ವಿಕ್ರಮ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ಡಾ.ಎ.ಎಸ್.ಕಿರಣ್ ಕುಮಾರ್ ಮತ್ತು ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‍ಡಿಒ) ಮಾಜಿ ಅಧ್ಯಕ್ಷ ಡಾ. ಜಿ. ಸತೀಶ್ ರೆಡ್ಡಿ ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ವಿವರಿಸಿದರು.
ಘಟಿಕೋತ್ಸವವು ಆಫ್‍ಲೈನ್ ಮತ್ತು ಆನ್‍ಲೈನ್ ಮೋಡ್ ಮೂಲಕ ನಡೆಯಲಿದೆ ಎಂದು ಡಾ. ಅಪ್ಪಾಜಿ ಹೇಳಿದರು.
ಘಟಿಕೋತ್ಸವದ ನೇರಪ್ರಸಾರವನ್ನು ಯೂಟ್ಯೂಬ್ ಚಾನೆಲ್ https://Youtu.br/f6HKepnXsW4 ಮೂಲಕವೂ ವೀಕ್ಷಿಸಬಹುದಾಗಿದ್ದು,ಡಾ. ಕಿರಣ್ ಕುಮಾರ್ ಅವರು ಘಟಿಕೋತ್ಸವದಲ್ಲಿ ಉಪಸ್ಥಿತರಿದ್ದು, ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಆದರೆ, ಡಾ ಸತೀಶ್ ರೆಡ್ಡಿ, ಪೂರ್ವ ನಿಗದಿಯಾಗಿ ಒಪ್ಪಿಕೊಂಡ ಕೆಲವು ತಮ್ಮ ಅಧಿಕೃತ ಕೆಲಸಗಳಿಂದಾಗಿ ಭೌತಿಕವಾಗಿ ಹಾಜರಾಗದ ಕಾರಣ ನಾಲ್ಕನೇ ಘಟಿಕೋತ್ಸವದ ಭಾಷಣವನ್ನು ಆನ್‍ಲೈನ್ ವೇದಿಕೆಯಲ್ಲಿ ಪ್ರಸ್ತುತಪಡಿಸಲಿದ್ದಾರೆ ಎಂದು ತಿಳಿಸಿದರು.
ಇಬ್ಬರು ಹಿರಿಯ ವಿಜ್ಞಾನಿಗಳಾದ ಡಾ.ಕಿರಣ್ ಕುಮಾರ್ ಮತ್ತು ಡಾ.ಸತೀಶ್ ರೆಡ್ಡಿ ಸೇರಿದಂತೆ ಐವರು ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಲು ವಿಶ್ವವಿದ್ಯಾಲಯ ನಿರ್ಧರಿಸಿದೆ. ಸಾಮಾಜಿಕ ಕಾರ್ಯಕರ್ತೆ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಪದ್ಮಶ್ರೀ ಡಾ.ಮಂಜಮ್ಮ ಜೋಗತಿ ಹಾಗೂ ಮಹಾರಾಷ್ಟ್ರದ ಸೋಲಾಪುರ ಹಾಗೂ ಕರ್ನಾಟಕದ ಹರಿಹರದ ಶಿವಯೋಗಾಶ್ರಮದ ಶರಣಬಸವಲಿಂಗ ಶಿವಯೋಗಿಗಳು ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು. ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಾಜಿ ಅಧ್ಯಕ್ಷ ದಿ. ಬಸವರಾಜಪ್ಪ ಅಪ್ಪ ಅವರಿಗೆ ಮರಣೋತ್ತರವಾಗಿ ಗೌರವ ಡಾಕ್ಟರೇಟ್ ನೀಡಲು ವಿಶ್ವವಿದ್ಯಾಲಯ ನಿರ್ಧರಿಸಿದೆ. ಇದಲ್ಲದೆ ಭಾಷಾ ನಿಕಾಯದ ಮುಖ್ಯಸ್ಥರು ಹಾಗೂ ಹಿರಿಯ ಪ್ರಾಧ್ಯಾಪಕರಾದ ಡಾ.ಎಸ್.ಜಿ.ಡೊಳ್ಳೇಗೌಡರಿಗೆ ಘಟಿಕೋತ್ಸವದಲ್ಲಿ ಡಿ.ಲಿಟ್ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.
3ನೇ ಘಟಿಕೋತ್ಸವದಲ್ಲಿ ಡಾ.ಕಿರಣ್ ಕುಮಾರ್, ಪದ್ಮಶ್ರೀ ಮಂಜಮ್ಮ ಜೋಗತಿ ಹಾಗೂ ಬಸವರಾಜಪ್ಪ ಅಪ್ಪ ಅವರಿಗೆ ಗೌರವ ಡಾಕ್ಟರೇಟ್ ನೀಡಿದರೆ, 4ನೇ ಘಟಿಕೋತ್ಸವದಲ್ಲಿ ಡಾ.ಸತೀಶ್ ರೆಡ್ಡಿ ಮತ್ತು ಶರಣಬಸವಲಿಂಗ ಶಿವಯೋಗಿಗಳು ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದರು.
ಡಾ.ಅಪ್ಪಾಜಿ ಅವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದು, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ನಗದು ಬಹುಮಾನ ಹಾಗೂ ಪದವಿ ಪ್ರಮಾಣ ಪತ್ರವನ್ನು ಪ್ರದಾನ ಮಾಡಲಿದ್ದಾರೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ, ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಸಂಸ್ಥಾನದ 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪಾ, ವಿಶ್ವವಿದ್ಯಾಲಯದ ಉಪಕುಲಪತಿ ಡಾ.ನಿರಂಜನ ನಿಷ್ಠೆ ಹಾಗೂ ವಿವಿಯ ಆಡಳಿತ ಮಂಡಳಿ ಸದಸ್ಯರು ಹಾಗೂ ಅಕಾಡೆಮಿಕ್ ಕೌನ್ಸಿಲ್ ಸದಸ್ಯರು ಉಪಸ್ಥಿತರಿರುತ್ತಾರೆ ಎಂದು ತಿಳಿಸಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ, ವಿಶ್ವವಿದ್ಯಾಲಯದ ಉಪಕುಲಪತಿ ಡಾ.ನಿರಂಜನ ನಿಷ್ಠಿ, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನಿಲ್ ಕುಮಾರ್ ಬಿಡವೆ, ಸಮ ಕುಲಪತಿ ಡಾ.ವಿ.ಡಿ.ಮೈತ್ರಿ, ಡಾ.ಲಕ್ಷ್ಮಿ ಮಾಕಾ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಟಿ.ವಿ.ಶಿವಾನಂದನ್ ಉಪಸ್ಥಿತರಿದ್ದರು.


2382 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಶರಣ ಬಸವ ವಿಶ್ವವಿದ್ಯಾಲಯದ ಉಭಯ ಘಟಿಕೋತ್ಸವಗಳಲ್ಲಿ ಒಟ್ಟು 2382 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ಡಾ.ಶರಣಬಸವಪ್ಪ ಅಪ್ಪ ತಿಳಿಸಿದರು.
ಈ ಪೈಕಿ ಮೂರನೇ ಘಟಿಕೋತ್ಸವದಲ್ಕಿ 96 ಹಾಗೂ ನಾಲ್ಕನೇ ಘಟಿಕೋತ್ಸವದಲ್ಲಿ 170 ವಿದ್ಯಾರ್ಥಿಗಳಿಗೆ ಮತ್ತು 71 ವಿದ್ತಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಗುವುದು ಎಂದರು.