ಕಲಬುರಗಿ.ಜೂ.03: ರಾಜ್ಯದ ಜವಳಿ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಗತಿಯಾಗಿಲ್ಲ. ಅಲ್ಲದೇ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾಯ್ದೆ ಮರು ಪ್ರಸ್ತಾವನೆಗೆ ಒತ್ತಡ ಬರುತ್ತಿದ್ದು, ಆ ಕುರಿತು ಪರಿಶೀಲನೆ ಮಾಡುವುದಾಗಿ ರಾಜ್ಯದ ನೂತನ ಜವಳಿ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ್ ಪಾಟೀಲ್ ಅವರು ಹೇಳಿದರು.
ಶನಿವಾರದಂದು ತಮ್ಮ ಪತ್ನಿಯೊಂದಿಗೆ ಪ್ರಸಿದ್ಧ ಶ್ರೀ ಶರಣಬಸವೇಶ್ವರರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಎರಡು ಉದ್ದೇಶಗಳನ್ನು ಇಟ್ಟುಕೊಂಡು ಇಲ್ಲಿಗೆ ಭೇಟಿ ನೀಡಿರುವೆ ಎಂದರು.
ಮೊದಲನೇಯದು ನಮ್ಮ ಮನೆದೇವರು ಬೀದರ್ ಜಿಲ್ಲೆಯ ಹುಮ್ನಾಬಾದ್‍ನಲ್ಲಿರುವ ವೀರಭದ್ರೇಶ್ವರ್ ದೇವಸ್ಥಾನ. ಅಲ್ಲಿಗೆ ಭೇಟಿ ಕೊಟ್ಟು ಬಂದಿದ್ದೇವೆ. ಈಗ ಸಹಜವಾಗಿಯೇ ಪ್ರಸಿದ್ಧ ಶ್ರೀ ಶರಣಬಸವೇಶ್ವರರ ದೇವಸ್ಥಾನಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದ್ದೇವೆ ಎಂದು ಅವರು ತಿಳಿಸಿದರು.
ನಗರಕ್ಕೆ ಜವಳಿ ಪಾರ್ಕ್ ಮಂಜೂರಾಗಿದೆ. ರಾಜ್ಯದಲ್ಲಿ ಒಟ್ಟು ಏಳು ಜವಳಿ ಪಾರ್ಕ್‍ಗಳಿಗೆ ಮಂಜೂರಾತಿ ಸಿಕ್ಕಿದ್ದು, ಅದರಲ್ಲಿ ಕಲಬುರ್ಗಿಯೂ ಒಂದಾಗಿದೆ. ಆ ಕುರಿತು ಮಾಹಿತಿಯನ್ನು ಪಡೆಯುವುದರ ಜೊತೆಗೆ ಕೃಷಿ ಉತ್ಪನ್ನ ಮಾರುಕಟ್ಟೆಯ ಕುರಿತೂ ಮಾಹಿತಿಯನ್ನು ಪಡೆಯಲು ಬಂದಿರುವೆ ಎಂದು ಅವರು ಹೇಳಿದರು.
ಜವಳಿ ಕ್ಷೇತ್ರವು ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯಾಗಿಲ್ಲ. ಸಾಕಷ್ಟು ಸುಧಾರಣೆ ಕೈಗೊಳ್ಳಬೇಕಾಗಿದೆ. ಹಿಂದಿನ ಸರ್ಕಾರವು ಆ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ. ಅದಕ್ಕಾಗಿಯೇ ಕೆಎಸ್‍ಡಿಸಿ ವ್ಯವಸ್ಥಾಪಕ ನಿರ್ದೇಶಕರನ್ನು ನಿನ್ನೆಯಷ್ಟೇ ಅಮಾನತ್ತು ಮಾಡಿದ್ದೇನೆ. ಹಿಂದಿನ ಸರ್ಕಾರವೇ ಅವರಿಗೆ ಅಮಾನತ್ತು ಮಾಡಬೇಕಿತ್ತು, ಮಾಡಿರಲಿಲ್ಲ. ಹಾಗಾಗಿ ನಾನು ಕ್ರಮ ಕೈಗೊಂಡಿರುವೆ ಎಂದು ಅವರು ತಿಳಿಸಿದರು.
ಜವಳಿ ಕ್ಷೇತ್ರದಲ್ಲಿ ನೇಕಾರರಿಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಕೈಗೊಳ್ಳುತ್ತೇವೆ. ನನಗೆ ಸಂಬಂಧಿಸಿದ ಇಲಾಖೆಗಳಲ್ಲಿ ಸದ್ಯಕ್ಕೆ ಹೊಸ ಯೋಜನೆಗಳು ಇಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಐದು ಗ್ಯಾರಂಟಿ ಯೋಜನೆಗಳು ಇವೆ. ಅವುಗಳನ್ನು ಜಾರಿಗೊಳಿಸುತ್ತೇವೆ. ಅದಕ್ಕೆ ಈಗಾಗಲೇ ಪ್ರಕ್ರಿಯೆಗಳು ಆರಂಭಗೊಂಡಿವೆ. ಮೊದಲು ಆ ಐದು ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜಾರಿಯಾಗಲಿ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಶ್ರೀ ಶರಣಬಸವೇಶ್ವರ್ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳೂ ಆದ ಕಾಂಗ್ರೆಸ್ ಮುಖಂಡ ಬಸವರಾಜ್ ದೇಶಮುಖ್, ಅಖಿಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಮೇಯರ್ ಡಾ. ಶರಣಕುಮಾರ್ ಮೋದಿ, ಸಂಜಯ್ ಮಾಕಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಚಿವರು ಪತ್ನಿಯೊಂದಿಗೆ ಶ್ರೀ ಶರಣಬಸವೇಶ್ವರ್ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ ವಿಶೇಷ ಪೂಜೆ ಸಲ್ಲಿಸಿದರು. ಮಹಾದಾಸೋಹ ಮನೆಗೂ ಭೇಟಿ ನೀಡಿದರು. ಅಪಾರ ಸಂಖ್ಯೆಯ ಕಾರ್ಯಕರ್ತರು ಸಚಿವರಿಗೆ ಸ್ವಾಗತಿಸಿದರು.
ಹುಮ್ನಾಬಾದ್‍ಕ್ಕೆ ಭೇಟಿ: ತಮ್ಮ ಮನೆದೇವರಾದ ಹುಮ್ನಾಬಾದ್‍ನ ಶ್ರೀ ವೀರಭದ್ರೇಶ್ವರ್ ದೇವಸ್ಥಾನಕ್ಕೆ ನೂತನ ಸಚಿವ ಶಿವಾನಂದ್ ಪಾಟೀಲ್ ದಂಪತಿಗಳು ಭೇಟಿ ನೀಡಿ ವಿಶೇಷ ಪೂಜೆ ಮಾಡಿದರು. ಈ ಸಂದರ್ಭದಲ್ಲಿ ಶಾಸಕ ಸಿದ್ದು ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.