ಶರಣಬಸವೇಶ್ವರರ ದಾಸೋಹ ತತ್ವದಿಂದ ಸದೃಢ ರಾಷ್ಟ್ರ ನಿರ್ಮಾಣ

ಕಲಬುರಗಿ:ಮಾ.11: ಪ್ರತಿಯೊಬ್ಬರು ಎಲ್ಲವೂ ತನಗಾಗಲಿಯೆಂಬ ಸ್ವಾರ್ಥ ಮನೋಭಾವನೆ ಮತ್ತು ಅವಶ್ಯಕತೆಗಿಂತ ಅಧಿಕ ಸಂಪತ್ತು ಸಂಗ್ರಹಿಸುವ ಮನೋಭಾವನೆ ತೊಡೆದು, ಇರುವದರಲ್ಲಿಯೇ ತೃಪ್ತಿಪಟ್ಟು, ಅದನ್ನು ಎಲ್ಲರೊಂದಿಗೆ ವಿನಿಯೋಗಿಸಿ ಸಹ ಜೀವನ ಸಾಗಿಸಬೇಕೆಂಬ ಮಹಾದಾಸೋಹಿ ಶರಣಬಸವೇಶ್ವರರ ದಾಸೋಹ ತತ್ವವನ್ನು ಅಳವಡಿಸಿಕೊಂಡರೆ, ಜಗತ್ತಿನಲ್ಲಿರುವ ಆರ್ಥಿಕ ಅಸಮಾನತೆ ದೂರವಾಗಿ, ಸಮಾನತೆ ಉಂಟಾಗುವುದರ ಜೊತೆಗೆ ಸದೃಢ ರಾಷ್ಟ್ರ ನಿರ್ಮಾಣವಾಗಲು ಸಾಧ್ಯವಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ ಅಭಿಮತಪಟ್ಟರು.
ನಗರದ ಆಳಂದ ರಸ್ತೆಯ ಶಿವ ನಗರದಲ್ಲಿರುವ ‘ಜ್ಞಾನ ಚಿಗುರು ಟ್ಯುಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶರಣಬಸವೇಶ್ವರರ 201ನೇ ಜಾತ್ರಾ ಮಹೋತ್ಸವ ಪ್ರಯುಕ್ತ ಶನಿವಾರ ಏರ್ಪಡಿಸಿದ್ದ ‘ಶರಣಬಸವೇಶ್ವರರ ಜೀವನ ಮತ್ತು ಕೊಡುಗೆಗಳು’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಶರಣಬಸವೇಶ್ವರರು ರಾಜ ಮನೆತನದಲ್ಲಿ ಜನಿಸಿದವರಲ್ಲ. ಪ್ರಭುತ್ವ ವ್ಯವಸ್ಥೆಯನ್ನು, ಶ್ರೇಷ್ಠ ಅಧಿಕಾರವನ್ನು ಹೊಂದಿದವರಲ್ಲ. ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿ, ಅಸಾಧಾರಣವಾದ ಸಾಧನೆ ಮಾಡಿರುವುದು ಸಾಮಾನ್ಯವಾದ ಸಂಗತಿಯಲ್ಲ. ಕೃಷಿಯ ಬಗ್ಗೆ ಪ್ರಸ್ತುತ ದಿನಗಳಲ್ಲಿ ಅಸಡ್ಡೆ ತೋರುತ್ತಿರುವ ಜನತೆಗೆ ಶರಣರು ಸದಾ ಮಾದರಿಯಾಗಿದ್ದಾರೆ. ಅವರು ದೈವತ್ವವನ್ನು ಪಡೆಯಲು ಮನೆ, ಸಂಸಾರ ಎಲ್ಲವನ್ನು ತ್ಯಜಿಸಿ, ಬೆಟ್ಟ-ಗುಡ್ಡ, ಏಕಾಂತದಲ್ಲಿ ಧ್ಯಾನವನ್ನು ಮಾಡಿದವರಲ್ಲ. ಬದಲಿಗೆ ಸದಾ ಜನತೆಯ ಜೊತೆಯಲ್ಲಿಯೇ ಇದ್ದು ‘ಜನಸೇವೆಯೇ ಜನಾರ್ಧನ ಸೇವೆ’ಯೆಂದು ಭಾವಿಸಿ, ಪರಹಿತದಲ್ಲಿ ಪರಶಿವನನ್ನು ಕಂಡಿದ್ದಾರೆ ಎಂದರು.
ಕ.ರಾ.ಪ್ರಾ.ಶಿ.ಸಂಘದ ಜಿಲ್ಲಾ ಉಪಾಧ್ಯಕ್ಷ ವೇದಮೂರ್ತಿ ನೀಲಕಂಠಯ್ಯ ಹಿರೇಮಠ ಮಾತನಾಡಿ, ಶರಣಬಸವೇಶ್ವರರು ದಾಸೋಹ, ಕಾಯಕ, ಭಕ್ತಿಯನ್ನು ಗೈಯುತ್ತ, ಸಮಾಜದಲ್ಲಿರುವ ಅನೇಕ ಸಮಸ್ಯೆಗಳನ್ನು ಹೋಗಲಾಡಿಸಲು ಇಡೀ ತಮ್ಮ ಜೀವನದುದ್ದಕ್ಕೂ ನಿರಂತರವಾಗಿ ಶ್ರಮಿಸಿ, ಅಸಂಖ್ಯಾತ ಭಕ್ತರ ಆರಾಧ್ಯ ದೈವರೆನಿಸಿಕೊಂಡಿದ್ದಾರೆ. ಸಕಲ ಜೀವರಾಶಿಗಳಲ್ಲಿ ದೇವರ ಅಸ್ಥಿತ್ವವನ್ನು ಕಂಡು, ನಿರಂತರವಾಗಿ ದಾಸೋಹಗೈಯುವ ಮೂಲಕ ದಾಸೋಹ ಭಾಂಡಾರಿಯಾಗಿ ‘ದಾಸೋಹ’ ಎಂಬ ಶಬ್ದಕ್ಕೆ ಹೊಸ ಭಾಷ್ಯವನ್ನು ಬರೆದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ನರಸಪ್ಪ ಬಿರಾದಾರ ದೇಗಾಂವ, ಶಿವಯೋಗಪ್ಪ ಬಿರಾದಾರ, ರೇವಣಸಿದ್ದಪ್ಪ ಪವಾಡಶೆಟ್ಟಿ, ನಾಗಬಸಯ್ಯ ಮಠಪತಿ, ಅಂಗದ್, ಅರುಣಕುಮಾರ, ಸೋಹನ್, ನಿಕಿಲ್, ಅಭಿಶೇಕ್, ಅಭಿಲಾಷ್, ಲೋಕೇಶ್, ಶ್ರೀಮಂತ, ಪ್ರಜ್ವಲ್ ಸೇರಿದಂತೆ ಮತ್ತಿತರರಿದ್ದರು.