ಶರಣಬಸವೇಶ್ವರರ ದರ್ಶನ ಪಡೆದ ನಟ ಪುನೀತ್ ರಾಜಕುಮಾರ್

ಕಲಬುರಗಿ,ಮಾ.21-ಯುವರತ್ನ ಚಿತ್ರದ ಪ್ರಮೋಷನ್ ಸಲುವಾಗಿ ನಗರಕ್ಕೆ ಆಗಮಿಸಿದ ನಟ ಪುನಿತ್ ರಾಜ್ ಕುಮಾರ್ ಅವರು ಇಲ್ಲಿನ ಸುಪ್ರಸಿದ್ಧ ಶರಣಬಸವೇಶ್ವರ ದೇವಸ್ಥಾನದ ದರ್ಶನ ಪಡೆದರು.
ನಂತರ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರನ್ನು ಭೇಟಿಯಾದರು. ಡಾ.ಶರಣಬಸವಪ್ಪ ಅಪ್ಪ ಅವರು ಪುನಿತ್ ಗೆ ಶಾಲು ಹೊದಿಸಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಈ ವೇಳೆ ಮಾತನಾಡಿದ ಪುನೀತ್ ಅವರು, ಲಾಕ್ ಡೌನ್ ತೆರವಾದ ನಂತರ ಮೊದಲು ಬಂದಿದ್ದು ಕಲಬುರಗಿಗೆ ಇಲ್ಲಿಗೆ ಬಂದಿದ್ದು ತುಂಬಾ ಸಂತೋಷ ತಂದಿದೆ. ಶರಣಬಸವೇಶ್ವರರ ದರ್ಶನ ಪಡೆದಿದ್ದರಿಂದ ತುಂಬಾ ಆನಂದವಾಗಿದೆ. ಮುಂದಿನ ದಿನಗಳಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಒಂದು ಚಿತ್ರದ ಶೂಟಿಂಗ್ ಮಾಡುವೆ, ಮುಂದಿನ ಬಾರಿ ಬಂದಾಗ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದ ದರ್ಶನ ಮಾಡುವೆ ಎಂದರು.
ಯುವರತ್ನ ಚಿತ್ರದ ಪ್ರಚಾರಕ್ಕಾಗಿ ಪುನೀತ್ ಅವರು ಶರಣಬಸವೇಶ್ವರ ದೇವಸ್ಥಾನ ಆವರಣಕ್ಕೆ ಆಗಮಿಸುತ್ತಿದ್ದಂತೆಯೇ ಅಭಿಮಾನಿಗಳು ಜೆಸಿಬಿ ಮೂಲಕ ಪುಷ್ಪಾರ್ಚನೆ ಮಾಡಿದರು. ದೇವಸ್ಥಾನದ ಹೊರಗಡೆ ಪುನಿತ್ ಗಾಗಿ ಕಾದು ಕುಳಿತಿದ್ದ ಅಭಿಮಾನಿಗಳು ಅಪ್ಪು ಅಪ್ಪು ಎಂದು ಕೂಗಿ ಅಭಿಮಾನ ವ್ಯಕ್ತಪಡಿಸಿದರು.
ಶರಣಬಸವೇಶ್ವರ ಮಂದಿರಕ್ಕೆ ಆಗಮಿಸಿದ್ದ ನಟ ಪುನಿತ್ ರಾಜಕುಮಾರ ಅವರನ್ನು ಕಾಣಲು ಅಭಿಮಾನಿಗಳ ದಂಡೇ ಆಗಮಿಸಿತ್ತು. ಪರಿಸ್ಥಿತಿ ಅವಲೋಕಿಸಿದ ಪೊಲೀಸರು ಲಘುಲಾಠಿ ಪ್ರಹಾರ ಮಾಡುವುದರ ಮೂಲಕ ಜನರನ್ನು ಚದುರಿಸಿದರು.