ಶರಣಬಸವೇಶ್ವರರು ಕಾಮಧೇನು ಕಲ್ಪವೃಕ್ಷ

ಕಲಬುರಗಿ:ಆ.3:ಮಹಾದಾಸೋಹಿ ಶರಣಬಸವರು ಜಾತಿಭೇದ ಮಾಡದೆ ಎಲ್ಲರನ್ನೂ ತಮ್ಮವರೆಂದೆ ತಿಳಿದು ಅವರಿಗೆ ಬೇಡಿದ್ದನ್ನು ದಯಪಾಲಿಸಿ ಕಾಮಧೇನು ಕಲ್ಪವೃಕ್ಷವಾಗಿದ್ದರು ಎಂದು ಶರಣಬಸವೇಶ್ವರ ವಿಜ್ಞಾನ ಪದವಿ ಮಹಾವಿದ್ಯಾಲಯದ ಆಂಗ್ಲ ಪ್ರಾಧ್ಯಾಪಕ ಡಾ.ಎಸ್.ಎಸ್.ಪಾಟೀಲ ಹೇಳಿದರು.

ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ 40 ದಿನಗಳ ಶರಣಬಸವೇಶ್ವರ ಲೀಲೆಗಳು ಎಂಬ ಉಪನ್ಯಾಸ ಮಾಲಿಕೆಯಲ್ಲಿ ಮಂಗಳವಾರ ಉಪನ್ಯಾಸ ನೀಡಿದರು.

ಶರಣಬಸವೇಶ್ವರರ ಕೃಪೆಯಿಂದ ತಮಗೆ ಎಲ್ಲವೂ ಸಾಧ್ಯವಾಗಿದೆ. ತಮಗೆ ಇನ್ನೇನು ನೌಕರಿ ಖಾಯಂ ಆಗಲ್ಲ ಎನ್ನುವ ಸ್ಥಿತಿ ಇದ್ದಾಗ, ನಿತ್ಯವೂ ಶರಣರಿಗೆ ಪ್ರಾರ್ಥಿಸಿ ಬೇಡಿಕೊಂಡೆ ಕೆಲದಿನಗಳ ನಂತರ ಸರಕಾರದಿಂದ ಖಾಯಂ ಎಂದು ಆದೇಶ ಬಂತು. ಇದು ತಮ್ಮ ಜೀವನದಲ್ಲಿ ಶರಣರು ತೋರಿದ ಪವಾಡ ಎಂದು ಹೇಳುವಾಗ ಗದ್ಗಿತರಾದರು. ಇಷ್ಟೇ ಅಲ್ಲದೆ ಪ್ರತಿ ಸಮಯದಲ್ಲೂ ಶರಣಬಸವರು ತಮ್ಮನ್ನು ತಮ್ಮ ಕುಟುಂಬವನ್ನು ಕಾಪಾಡಿಕೊಂಡು ಬರುತ್ತಿದ್ದಾರೆ ಎಂದರು ಹಾಗೇ ಶರಣಬಸವರ ಅನೇಕ ಲೀಲೆಗಳನ್ನು ತಿಳಿಸಿದರು.

ಇನ್ನೋರ್ವ ಉಪನ್ಯಾಸಕರಾದ ಉದ್ಯಮಿ ಶರಣಗೌಡ ಪಾಟೀಲ ಪಾಳಾ ಅವರು ಮಾತನಾಡಿ, ತಮ್ಮ ಜೀವನದಲ್ಲಿ ಮಹಾದಾಸೋಹಿ ಶರಣಬಸವೇಶ್ವರರು ಬಹಳ ಮುಖ್ಯವಾಗಿದ್ದಾರೆ. ಕುಂತರೂ ಶರಣಬಸವ, ನಿಂತರೂ ಶರಣಬಸವ ಎಂದು ಪ್ರಾರ್ಥಿಸುತ್ತೇವೆ. ಅದರಂತೆ ತಮಗೆ ಶರಣಬಸವರು ಯಾವುದಕ್ಕೂ ಕಡಿಮೆ ಮಾಡಿಲ್ಲ. ಅವರಿಂದಲೇ ತಾವು ಅಂದುಕೊಂಡಿದ್ದು ಈಡೇರಿವೆ ಎಂದು ಹಲವು ಸಂಗತಿಗಳನ್ನು ಹೇಳಿದರು.