ಶಬ್ದ ಸಂಗ್ರಹವಿಲ್ಲದ ಸಾಹಿತ್ಯ ಹಳಸಲು: ಮಹಿಪಾಲರೆಡ್ಡಿ ಮುನ್ನೂರ್

ಕಲಬುರಗಿ,ಜು.13: ಶಬ್ದ ಸಂಗ್ರಹವಿಲ್ಲದ ಸಾಹಿತ್ಯ ಹಳಸಲು ಎಂದು ಸೇಡಂನ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್ ಅವರು ಹೇಳಿದರು.
ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡ ಪತ್ರಕರ್ತ ಸಾಹಿತಿಗಳ ಸಮಾವೇಶದಲ್ಲಿ ಜರುಗಿದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಾಚಿಸಿದ ಕವಿಗಳ ಕಾವನಗಳ ಕುರಿತು ಎಳೆಎಳೆಯಾಗಿ ವಿಮರ್ಶೆ ಮಾಡಿದರು.
ಯಾವುದೇ ಒಂದು ಸಾಹಿತ್ಯ ರಚನೆಯಾಗಬೇಕಾದರೆ ಅವರಲ್ಲಿ ಶಬ್ದ ಸಂಗ್ರಹಗಳು ಇರಬೇಕು. ಹಾಗೆಂದಾಗ ಮಾತ್ರ ಉತ್ತಮ ಸಾಹಿತ್ಯವಾಗಿ ರೂಪುಗೊಳ್ಳಲಿದೆ. ಇಲ್ಲವಾದಲ್ಲಿ ಅಂತಹುದು ಹಳಸಲು ಸಾಹಿತ್ಯವಾಗುತ್ತದೆ ಎಂದರು.
ಮಡಿವಾಳಪ್ಪ ಹೇರೂರ್ ಅವರ ಪೆನ್ನುಗಳ ಪ್ರತಿಭಟನೆ ಕಾವ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಮುನ್ನೂರ್ ಅವರು, ಸತ್ಯ ಬರೆಯುವವರ ಸುತ್ತ ಬೆಳೆದು ನಿಂತಿದೆ. ಕತ್ತಿ- ಖಡ್ಗಗಳ ಹುತ್ತ ಕತ್ತೆತ್ತಿ ನಡೆದರೆ, ಕತ್ತರಿಸಿ ಬೀಸಾಡುವ ಬೆದರಿಕೆ, ಜೀವಕಂಜಿ- ಗಂಜಿಗಾಗಿ ಬರೆಯುವುದಾದರೆ ನನಗೆ ಇಂದೇ ಸಾವು ಬರಲಿ ಎಂಬ ಸಾಲನ್ನು ವಿಶ್ಲೇಷಿಸಿದರಲ್ಲದೇ ಕವಿಯು ಅಕ್ಷರದ ನನ್ನ ಅಂಕಣಕ್ಕೆ ಲೆಕ್ಕಣಿಕೆಯೇ ಖಡ್ಗ, ಭಂಡರ ವಿರುದ್ಧ ಭಯಮುಕ್ತವಾಗಿ ಬರೆಯುತ್ತೇನೆ, ಸಹಸ್ರ ಜನರನ್ನು ಎಚ್ಚರಿಸಿಯೇ ನಾನು ಸಾಯುತ್ತೇನೆ. ಬರಹವೊಂದು ಬದುಕೊಂದಾದರೆ ಇದು ಸಾಕ್ಷರದ ಆತ್ಮಹತ್ಯೆ! ಸತ್ಯಕ್ಕಾಗಿ ಸತ್ತವನೇ ಸಮಾಜಮುಖಿ ಸಾಹಿತಿ, ಪ್ರಶಸ್ತಿ- ಪುರಸ್ಕಾರಕ್ಕಾಗಿ ಬರೆದು ಭಿಕ್ಷುಕನಾಗುವಂತಾದರೆ ನನಗೆ ಇಂದೇ ಸಾವು ಬರಲಿ ಎಂಬ ಹರಿತವಾದ ಖಡ್ಗ ಕಾವ್ಯದ ಗತ್ತಿನ ಕುರಿತು ಮನಮೋಹಕವಾಗಿ ವಿಶ್ಲೇಷಿಸಿದರು.
ಸತ್ಯದ ಹತ್ಯೆ ವಿರುದ್ಧ ಹೊರಟಿದೆ ಚಿಂತಕರ ಮೆರವಣಿಗೆ ಸಾಲಿನ ಕುರಿತು ತೀವ್ರ ಕೊಂಡಾಡಿದ ಮುನ್ನೂರ್ ಅವರು, ಗನ್ನುಗಳ ವಿರುದ್ಧ ಪೆನ್ನುಗಳ ಪ್ರತಿಭಟನೆ, ಗೌರಿ ಗೋರಿ ಸೇರಿಲ್ಲ ಸತ್ಯಕ್ಕೆ ಸಾವಿಲ್ಲ ಮೊಳಗಿದ ಘೋಷಣೆ, ರಕ್ತದ ಕಣಗಳು ಸಿಡಿಸಿಡಿದು ಏಳುತ್ತಿವೆ. ಅಕ್ಷರದ ಸಾಲುಗಳು ಎತ್ತೆತ್ತಲೂ ಆರ್ಭಟಿಸುತ್ತಿವೆ. ಹರಿಯಿತು ಬರೆದವರ ನೆತ್ತರ, ಚಿಗಿಯಿತು ಬಿತ್ತಿದ ಅಕ್ಷರ ಎಂಬ ಸಾಲುಗಳ ಶಬ್ದ ಸಾಹಿತ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಧರ್ಮಣ್ಣ ಧನ್ನಿ, ಜಗನ್ನಾಥ್ ತರನಳ್ಳಿ, ಗೋಪಾಲ್ ಕುಲಕರ್ಣಿ, ಡಾ. ಸಂಗಣ್ಣ ಸಿಂಗೆ, ಶೇಖ್ ಭಕ್ತಿಯಾರ್ ಜಹಾಗೀರದಾರ್, ರಮೇಶ್ ಭಟ್, ಹಣಮಂತ್ ಶೇರಿ, ವಿಕ್ರಮ್ ತೇಜಸ್ ಮುಂತಾದವರ ಕವನಗಳ ಕುರಿತು ಶ್ಲಾಘಿಸಿದ ಅವರು, ಸರೋಜಾ ಪಾಟೀಲ್ ಅವರು ಡಿಜೆಟಲ್ ಕಾವ್ಯದ ಮೂಲಕ ಪೇಜರ್ ನುಂಗಿತು ಎನ್ನುವ ಸಾಲಿನ ಮೂಲಕ ನೂತನ ಆವಿಷ್ಕಾರಗಳ ಮಧ್ಯೆ ಹಳೆಯ ಆವಿಷ್ಕಾರಗಳು ತಮ್ಮ ಅಸ್ತಿತ್ವ ಕಳೆದುಕೊಂಡಿದ್ದನ್ನು ಸೊಗಸಾಗಿ ಶಬ್ದಗಳ ಮೂಲಕ ಹಿಡಿದಿಟ್ಟಿದ್ದರ ಕುರಿತು ಗುಣಗಾನ ಮಾಡಿದರು. ಆಶು ಕವಿ ಸಂಗಮನಾಥ್ ರೇವತಗಾಂವ್ ಹಾಗೂ ಕಳೆದು ಹೋದ ಆ ದಿನಗಳು ಮತ್ತೆ ಬರುವವೇ ಎಂಬ ಪತ್ರಕರ್ತ ಹಣಮಂತರಾವ್ ಭೈರಾಮಡಗಿ ಅವರ ಕವನಗಳ ಕುರಿತು ಅವರು ಹೇಳಿದರು.
ಗೌರವ ಅತಿಥಿಗಳಾಗಿ ಪತ್ರಕರ್ತರಾದ ರಾಹುಲ್ ಬೆಳಗಲಿ, ಡಿ. ಶಿವಲಿಂಗಪ್ಪ, ಜಯತೀರ್ಥ ಪಾಟೀಲ್, ಹಣಮಂತರಾವ್ ಭೈರಾಮಡಗಿ, ಸಂಜಯ್ ಚಿಕ್ಕಮಠ್, ಪ್ರವೀಣರೆಡ್ಡಿ, ಗಣೇಶಕುಮಾರ್ ಅವರು ಆಗಮಿಸಿದ್ದರು.