ಶಬರಿಮಲೆ : ಭಕ್ತರ ವಿರುದ್ಧ ಕ್ರಮ, ಪ್ರಧಾನಿ ವಾಗ್ದಾಳಿ

ತಿರುವನಂತಪುರಂ, ಏ.೩- ಶಬರಿಮಲೆ ಪ್ರತಿಭಟನೆಯ ಸಂದರ್ಭದಲ್ಲಿ ಅಯ್ಯಪ್ಪ ಸ್ವಾಮಿ ಭಕ್ತರ ವಿರುದ್ಧ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಡಪಕ್ಷಗಳ ಸರ್ಕಾರ, ಕೈಗೊಂಡಿರುವ ಕ್ರಮದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಸರ್ಕಾರ ಪವಿತ್ರ ಸ್ಥಳಗಳನ್ನು ಅಸ್ಥಿರಗೊಳಿಸಲು ಪ್ರಯತ್ನ ನಡೆಸುತ್ತಿದೆ. ಭಕ್ತರು ಅಪರಾಧಿಗಳಲ್ಲ ಎಂದು ಅವರು ಹೇಳಿದ್ದಾರೆ.
ಕೇರಳ ವಿಧಾನಸಭೆ ಚುನಾವಣೆಗೆ ಇನ್ನೂ ಮೂರು ದಿನ ಬಾಕಿ ಉಳಿದಿರುವಂತೆ ಆರೋಪ ಪ್ರತ್ಯಾರೋಪ ತಾರಕಕ್ಕೇರಿದೆ.
ಕೇರಳದ ಪಟ್ಟಣಮ್ ತಿಟ್ಟ ಪ್ರದೇಶದ ಕೊನ್ನಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಹೂವುಗಳಿಂದ ಸ್ವಾಗತಿಸಬೇಕಾಗಿದೆ ಅಯ್ಯಪ್ಪ ಭಕ್ತರ ಮೇಲೆ ಲಾಠಿ ಪ್ರಹಾರ ನಡೆಸಲಾಗಿದೆ ಎಂದು ಅವರು ಹರಿಹಾಯ್ದಿದ್ದಾರೆ.
ಶಬರಿಮಲೆಯ ವಿಷಯ ಭಾವನಾತ್ಮಕವಾದದ್ದು ಎಂದು ಹೇಳಿದ ಅವರು ಅಯ್ಯಪ್ಪ ಸ್ವಾಮಿ ಭಕ್ತರ ಮೇಲೆ ಲಾಠಿ ಪ್ರಹಾರ ನಡೆಸಿದ ಕೇರಳ ಸರ್ಕಾರದ ಕ್ರಮ ಖಂಡನೀಯ ಎಂದು ಅವರು ಹೇಳಿದರು.
ಕೇರಳದಲ್ಲಿ ಎನ್‌ಡಿಎ ಸರಕಾರ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಜೊತೆಗೆ ಬಾಕಿ ಇರುವ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಅವರು ತಿಳಿಸಿದ್ದಾರೆ.
೨೦೧೮ ರಲ್ಲಿ ಸುಪ್ರೀಂಕೋರ್ಟ್ ಎಲ್ಲ ವಯೋಮಾನದ ಮಹಿಳೆಯರಿಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶ ಮಾಡಲು ಅವಕಾಶ ಮಾಡಿಕೊಟ್ಟ ನಂತರ ಈ ಕ್ರಮವನ್ನು ಖಂಡಿಸಿ ಕೇರಳದಲ್ಲಿ ಪ್ರತಿಭಟನೆ ನಡೆದಿತ್ತು. ಈ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದ ಹಲವು ಭಕ್ತಾದಿಗಳ ಮೇಲೆ ದೂರು ದಾಖಲಾಗುವ ಜೊತೆಗೆ ಲಾಠಿಚಾರ್ಜ್ ನಡೆಸಲಾಗಿತ್ತು

ತಿರುಗೇಟು
ಚುನಾವಣಾ ಪ್ರಚಾರ ಸಭೆಯಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ವಿಷಯವನ್ನು ಪ್ರಸ್ತಾಪ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನು ಸಿಪಿಎಂ ಪಾಲಿಕೆ ಸದಸ್ಯ ಎಂ.ಎ ಬೇಬಿ ಅವರು ತಿರುಗೇಟು ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯ ಕಾರಣಕ್ಕಾಗಿ ಅಯ್ಯಪ್ಪಸ್ವಾಮಿ ವಿಷಯವನ್ನು ತಂದಿದ್ದಾರೆ ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅವರು ತಿಳಿಸಿದರು.