ಶನಿಮಹಾತ್ಮೆ ಪೌರಾಣಿಕ ನಾಟಕ ಶತಮಾನೋತ್ಸವ ಆಚರಣೆಗೆ ನಿರ್ಧಾರ

ಚಿಕ್ಕನಾಯಕನಹಳ್ಳಿ, ಜು. ೨೧- ಪಟ್ಟಣದ ಆದಿತ್ಯಾದಿ ಬಯಲು ರಂಗಮಂದಿರದಲ್ಲಿ ನಡೆಯುವ ಶನಿಮಹಾತ್ಮೆ ಪೌರಾಣಿಕ ನಾಟಕವು ೨೦೨೩ನೇ ವರ್ಷಕ್ಕೆ ನೂರು ವರ್ಷ ತುಂಬಲಿದ್ದು ಈ ಸಂಭ್ರಮದಲ್ಲಿ ಶತಮಾನೋತ್ಸವ ನೆನಪಿಗಾಗಿ ಅದ್ದೂರಿ ಕಾರ್ಯಕ್ರಮ ನಡೆಸಲು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಪಟ್ಟಣದ ಬನಶಂಕರಿ ದೇವಾಲಯದಲ್ಲಿ ನಡೆದ ಶನಿಮಹಾತ್ಮೆ ಬಯಲು ನಾಟಕದ ಪೂರ್ವಭಾವಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಪ್ರತಿ ಮಹಾಶಿವರಾತ್ರಿ ದಿನದಂದು ನಡೆಯುವ ಶನಿಮಹಾತ್ಮೆ ಅಥವಾ ರಾಜಾ ವಿಕ್ರಮ ಬಯಲು ನಾಟಕವು ೧೯೨೩ ರಲ್ಲಿ ಆರಂಭವಾದ ನಾಟಕವೂ ೯೯ ವರ್ಷಗಳ ಕಾಲ ನಡೆದಿದ್ದು ನೂರನೇ ವಸಂತದ ನಾಟಕದ ಸಂಭ್ರಮವನ್ನು ಅದ್ದೂರಿಯಾಗಿ ಹಾಗೂ ಶತಮಾನೋತ್ಸವ ಭವನ, ಸ್ಮರಣ ಸಂಚಿಕೆ ಹೊರತರುವುದು, ಕಲಾವಿದರನ್ನು ಗೌರವಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತರಲು ಸಭೆ ತೀರ್ಮಾನಿಸಿತು.
ಸಭೆಯಲ್ಲಿ ಪಾಲ್ಗೊಂಡಿದ್ದ ಕಲಾವಿದ ಕುಮಾರಸ್ವಾಮಿ, ಭಕ್ತಿಯ ನೆಲಗಟ್ಟಿನಲ್ಲಿ ನಡೆಯುವ ಪೌರಾಣಿಕ ನಾಟಕವು ಬನಶಂಕರಿ ಅಮ್ಮನವರ ಹಾಗೂ ಶನೇಶ್ವರ ಸ್ವಾಮಿಯವರ ಕೃಪೆಯಿಂದ ಶತಮಾನದ ಬಳಿ ಬಂದು ನಿಂತಿದೆ. ಇಂದಿನ ತಂತ್ರಜ್ಞಾನ ಯುಗದಲ್ಲೂ ಕಲ್ಪತರು ನಾಡಿನಲ್ಲಿ ನಡೆಯುವ ಬಯಲಾಟ ನಾಟಕವು ಮನೆ ಮಾತಾಗಿದೆ. ಭಕ್ತಾದಿಗಳ ನೆರವಿನಿಂದ ಸುವರ್ಣ ಮಹೋತ್ಸವ ಹಾಗೂ ವಜ್ರಮಹೋತ್ಸಗಳನ್ನು ಆಚರಿಸಿ ಶತಮಾನೋತ್ಸವಕ್ಕೆ ಸಿದ್ದವಾಗಿದೆ. ಈ ಕಾರ್ಯಕ್ರಮದಲ್ಲಿ ನಮ್ಮ ಹಿರಿಯರನ್ನು ಸ್ಮರಿಸುವುದು ನಮ್ಮಗಳ ಜವಾಬ್ದಾರಿ ಜತೆಗೆ ನಶಿಸಿ ಹೋಗುತ್ತಿರುವ ಬಯಲಾಟ ಕಲೆಯನ್ನು ಉಳಿಸಲು ನಮ್ಮ ಮಕ್ಕಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ತರಬೇತಿ ಕಾರ್ಯಗಾರಗಳನ್ನು ಹಮ್ಮಿಕೊಂಡು ಶತಮಾನದ ಈ ಹಬ್ಬವನ್ನು ಕಲ್ಪತರು ನಾಡಿನ ಮನೆ ಮನೆ ಹಬ್ಬವಾಗಿ ಮಾಡಬೇಕು ಎಂದರು.
ದೇವಾಂಗ ಸಂಘದ ಅಧ್ಯಕ್ಷ ಧನರಾಜ್ ಮಾತನಾಡಿ, ಅಮರರಾದ ಕಲಾವಿದರನ್ನು ಶತಮಾನದ ಸವಿನೆನಪಿಗಾಗಿ ಹಾಗೂ ಕಲಾ ಸೇವೆಗಾಗಿ ಶತಮಾನೋತ್ಸವ ಭವನ ನಿರ್ಮಿಸಲು ದೇವಾಂಗ ಸಂಘವು ಇಚ್ಛಿಸಿದ್ದು ಇದಕ್ಕೆ ಎಲ್ಲರ ಸಹಕಾರ ಅತ್ಯವಶ್ಯಕ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ರಂಗಯ್ಯ, ದೇವಾಂಗ ಸಂಘದ ನಿರ್ದೇಶಕರಾದ ಬನಶಂಕರಯ್ಯ, ಸಿ.ಟಿ.ಪಾಂಡುರಂಗ, ಸಿ.ವಿ.ಪ್ರಕಾಶ್, ಸಿ.ಎನ್.ಲೋಕೇಶ್, ಸತೀಶ್‌ಕುಮಾರ್, ಜಗದೀಶ್, ರಂಗನಾಥ್, ಸಿ.ಜಿ.ನಟರಾಜು, ಹೇಮಶ್ರೀ ಮತ್ತಿತರರು ಉಪಸ್ಥಿತರಿದ್ದರು.