
ಮೈಸೂರು,ಸೆ.೨-ಶತ್ರುವಿನ ಮೇಲಿನ ದ್ವೇಷದಿಂದ, ಆತನನ್ನು ಜೈಲಿಗೆ ಕಳಿಸಲೆಂದು ಸಂಚು ರೂಪಿಸಿ ಸ್ನೇಹಿತನನ್ನೇ ಕೊಲೆಗೈದ ಆರೋಪಿಯನ್ನು ಅಂತರ ಸಂತೆ ಪೊಲೀಸರು ಬಂಧಿಸಿದ್ದಾರೆ.
ಎಚ್.ಡಿ.ಕೋಟೆ ತಾಲೂಕಿನ ನೇರಳೆ ಹುಂಡಿ ಗ್ರಾಮದಲ್ಲಿ ನಡೆದ ನೇರಳೆ ಹುಂಡಿಯ ಭಾನುಪ್ರಕಾಶ್ ಎಂಬ ಯುವಕನ ಕೊಲೆಯಾಗಿತ್ತು. ವಿವಾಹಿತೆಯೊಬ್ಬರಿಗೆ ಮೆಸೇಜ್ ಹಾಗೂ ಫೋನ್ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಈ ಯುವಕನ ಮೇಲೆ ಆ ಗೃಹಿಣಿಯ ಕುಟುಂಬದವರು ಗಲಾಟೆ ಮಾಡಿದ್ದು ನಂತರ ರಾಜಿ ಪಂಚಾಯಿತಿಯಲ್ಲಿ ಪ್ರಕರಣ ಮುಗಿಸಲಾಗಿತ್ತು.
ಮರುದಿನ ಯುವಕನ ಶವ ನಾಲೆಯ ಬಳಿ ಪತ್ತೆಯಾಗಿದ್ದು, ಗೃಹಿಣಿಯ ಕಡೆಯವರು ಕೊಲೆ ಮಾಡಿರಬಹುದು ಎಂಬ ಶಂಕೆ ಮೂಡಿತ್ತು. ಈ ಪ್ರಕರಣ ಸಂಬಂಧ, ಗಲಾಟೆ ಮಾಡಿದ್ದ ೬ ಮಂದಿ ವಶಕ್ಕೆ ಪಡೆದು ವಿಚಾರಿಸಲಾಗಿತ್ತು.
ತನಿಖೆಯ ವೇಳೆ ಪ್ರಕರಣಕ್ಕೆ ಬೇರೆ ತಿರುವು ದೊರೆತು ಕೊಲೆ ಮಾಡಿದವನು ಭಾನುಪ್ರಕಾಶ್‌ನ ಸ್ನೇಹಿತನಾದ ದಿನೇಶ್ ಎಂಬಾತ ಎಂಬುದು ಗೊತ್ತಾಗಿದೆ. ದಿನೇಶ್‌ಗೂ ಗೃಹಿಣಿಯ ಪತಿ ಎನ್.ಪ್ರಕಾಶ್ ಎಂಬಾತನ ಮೇಲೆ ಹಳೆಯ ದ್ವೇಷವಿತ್ತು. ಹೀಗಾಗಿ ಈತ ತಾನೇ ಕೊಲೆ ಮಾಡಿ, ಎನ್.ಪ್ರಕಾಶ್ ಈ ಆರೋಪದಲ್ಲಿ ಜೈಲಿಗೆ ಹೋಗುತ್ತಾನೆ ಎಂದು ಊಹಿಸಿದ್ದ.
ಹೀಗಾಗಿ ಹಳೆ ದ್ವೇಷ ತೀರಿಸಿಕೊಳ್ಳಲು ದಿನೇಶ್ ಮತ್ತು ಆತನ ಗೆಳೆಯ ಭೀಮ ಜತೆ ಸೇರಿ ಭಾನುಪ್ರಕಾಶ್ ಕತ್ತು ಸೀಳಿ ಕೊಲೆ ಮಾಡಿ ಗ್ರಾಮದ ಹೊರ ವಲಯದಲ್ಲಿ ಶವ ಬಿಟ್ಟು ಡ್ಯಾಗರ್ ಕಬಿನಿ ನದಿಗೆ ಎಸೆದಿದ್ದರು.
ಕೊಲೆಯಾದ ಜಾಗದ ಮೊಬೈಲ್ ಟವರ್ ಲೊಕೇಶನ್ ಮೂಲಕ ಕೊಲೆ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಆರೋಪಿ ದಿನೇಶ್ ಹಾಗೂ ಎನ್.ಪ್ರಕಾಶ್ ನಡುವೆ ಇದ್ದು ಹಳೆ ದ್ವೇಷ ಕಾರಣವೆಂಬುದು ಸ್ಪಷ್ಟವಾಗಿದೆ. ಇಬ್ಬರ ದ್ವೇಷದಲ್ಲಿ ಭಾನುಪ್ರಕಾಶ್ ಜೀವ ಕಳೆದುಕೊಂಡಿದ್ದಾನೆ. ಅಂತರ ಸಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.