ಶತಾಯುಷಿ ಅಜ್ಜಿಯ ಆರೋಗ್ಯ ವಿಚಾರಿಸಿದ ಶಾಸಕ ಖಾಶೆಂಪುರ್

ಬೀದರ:ಎ.3: ತಾಲೂಕಿನ ರಾಜಗೀರಾ ಗ್ರಾಮದಲ್ಲಿ ವಾಸಿಸುವ 107 ವರ್ಷ ವಯಸ್ಸಿನ ವೃದ್ಧೆ ಶಂಕ್ರಮ್ಮ ಶೇರಿಕರ್ ಎಂಬುವವರ ಮನೆಗೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಭೇಟಿ ನೀಡಿ, ಹಣ್ಣು ನೀಡಿ ವೃದ್ಧೆಯ ಆರೋಗ್ಯ ವಿಚಾರಿಸಿದರು.
ಇದೇ ವೇಳೆ ಮಾತನಾಡಿದ ಅವರು, ಕಳೆದ ಐದು ವರ್ಷಗಳ ಹಿಂದೆ ಇದೇ ಮನೆಗೆ ನಾನು ಭೇಟಿ ನೀಡಿದ್ದೆ ಆಗ ಕೂಡ ಅಜ್ಜಿಯೊಂದಿಗೆ ಮಾತನಾಡಿದ್ದೆ. ಈಗ ಅಜ್ಜಿಯ ಆರೋಗ್ಯ ವಿಚಾರಿಸೋಣ ಅಂತ ಬಂದಿದ್ದೆ. ತಂದೆ, ತಾಯಂದಿರ ಸೇವೆ ಮಾಡುವ ಅವಕಾಶ ಸಿಕ್ಕಾಗ ಸೇವೆ ಮಾಡಲು ಯಾರು ಕೂಡ ಹಿಂದೆ ಮುಂದೆ ನೋಡಬಾರದು. ಎಷ್ಟೋ ಜನರಿಗೆ ತಂದೆ ತಾಯಂದಿರ ಸೇವೆ ಮಾಡುವ ಅವಕಾಶ ಸಿಗುವುದಿಲ್ಲ.
ಸಿಕ್ಕಿರುವ ಅವಕಾಶವನ್ನು ಸೌಭಾಗ್ಯವೆಂದು ಭಾವಿಸಿ ಹಿರಿಯರ ಸೇವೆ ಮಾಡಬೇಕು. ನಮಗೆ ತಂದೆ ತಾಯಂದಿರ ಸೇವೆ ಮಾಡುವ ಅವಕಾಶ ಸಿಗಲಿಲ್ಲ. ಕಿರಿಯರಾದವರು ಹಿರಿಯರ ಸೇವೆ ಮಾಡಬೇಕು. ನಮ್ಮನ್ನ ಸಾಕಿ ಸಲಹಿದ ಹೆತ್ತವರ ಸೇವೆ ಮಾಡುವುದು ಪುಣ್ಯದ ಕೆಲಸವೇ ಸರಿ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಇದೇ ವೇಳೆ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಗ್ರಾಮದ ಚರ್ಚ್ ಗೆ ಭೇಟಿ ನೀಡಿದರು. ಚರ್ಚ್ ನ ಮುಖಂಡರು ಶಾಸಕರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಸಿಂದಲ್ ಗ್ರಾಮ ಪಂಚಾಯ್ತಿ ಅಧ್ಯಕ್ಷ ನರೇಶ್, ಸದಸ್ಯರಾದ ಸುಧಾಕರ್ ವರ್ಮಾ, ಪರ್ಸುಬ್, ಮೋದಿನ್, ಪಿಕೆಪಿಎಸ್ ಅಧ್ಯಕ್ಷ ಜಗನ್ನಾಥ, ಮಲ್ಲಪ್ಪ ಮನ್ನಾಎಖೇಳ್ಳಿ, ಅನೀಲ್ ಶೇರಿ ಸೇರಿದಂತೆ ಕುಟುಂಬಸ್ಥರು ಮುಖಂಡರು ಇದ್ದರು.