ಶತಾಯುಷಿಗಳಿಂದ ಮತ ಹಕ್ಕು ಚಲಾವಣೆ, ಗಮನಸೆಳೆದ ಸಾಂಪ್ರದಾಯಿಕ ಮತಗಟ್ಟೆಗಳು


ಬಳ್ಳಾರಿ,ಮೇ 11- ಕರ್ನಾಟಕ ವಿಧಾನಸಭಾ ಚುನಾವಣೆ 2023 ರ ಅಂಗವಾಗಿ ಮತದಾನ ದಿನವಾದ ಮೇ 10 ದಿನದಂದು ಬುಧವಾರ ಬೆಳಗ್ಗೆ 06 ರಿಂದಲೇ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಸುಸೂತ್ರವಾಗಿ ಆರಂಭಗೊಂಡಿತು. ಮತದಾರರನ್ನು ಆಕರ್ಷಿಸಲು  ಜಿಲ್ಲಾಡಳಿತದಿಂದ ವಿವಿಧೆಡೆ ಸಾಂಪ್ರದಾಯಿಕ, ಪರಿಸರ ಸ್ನೇಹಿ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಮತಗಟ್ಟೆಗಳಲ್ಲಿ ಮತದಾರರು ಸಾಲುಗಟ್ಟಿ ನಿಂತು ಮತ ಚಲಾಯಿಸುವುದು ಕಂಡುಬಂದಿತು.
91-ಕಂಪ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಪ್ಪಗಲ್ಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಕೇಂದ್ರಗಳಲ್ಲಿ ಮಹಿಳಾ ಮತದಾರರು ಮತಗಟ್ಟೆಗಳಲ್ಲಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. 93-ಬಳ್ಳಾರಿ ಗ್ರಾಮೀಣ ವ್ಯಾಪ್ತಿಯ ಸಂಗನಕಲ್ಲು ಗ್ರಾಮ, ಸಿರಿವಾರ ಮತ್ತು ಮೋಕಾ ಹೋಬಳಿಯಲ್ಲಿ ವಯೋವೃದ್ಧರು, ವಿಶೇಷಚೇತನರು ಹಾಗೂ ವಯಸ್ಕ ಮತದಾರರು ಮತದಾನ ಮಾಡಿ ಸಂಭ್ರಮಿಸುವ ಮೂಲಕ ಮತದ ಶಾಹಿ ಹಾಕಿಸಿಕೊಂಡ ಎಡಗೈ ತೋರುಬೆರಳು ತೋರಿಸಿ ನಗೆ ಬೀರಿದರು.
 ಶತಾಯುಷಿಗಳಿಂದ ಮತದಾನ:
93-ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಮ್ಮರಚೇಡು ಗ್ರಾಮದ 108 ವರ್ಷದ ಸಂಜಮ್ಮ ಗಂಡ ವಂಡ್ರಪ್ಪ ಎನ್ನುವ ವೃದ್ಧೆ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು ಹಾಗೂ ಇದೇ ಗ್ರಾಮದ 103 ವರ್ಷದ ರತ್ನಮ್ಮ ಗಂಡ ತಿಪ್ಪಣ್ಣ ಎಂಬ ವೃದ್ಧೆ ಕಮ್ಮರಚೇಡು ಗ್ರಾಮದ ಮತಗಟ್ಟೆಗೆ ವೀಲ್ ಚೇರ್ ಸೌಲಭ್ಯ ಬಳಸಿ ಮತಗಟ್ಟೆಗೆ ಬಂದು ತಮ್ಮ ಮತ ಚಲಾಯಿಸಿದರು.
 ಮೊದಲ ಬಾರಿ ಮತ ಚಲಾಯಿಸಿದ ಯುವತಿಯರು:
ಮತದಾರರ ಪಟ್ಟಿಯಲ್ಲಿ ಪ್ರಥಮ ಬಾರಿಗೆ ನೊಂದಾಯಿಸಿಕೊಂಡಿದ್ದ 93-ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಂಗನಕಲ್ಲು ಗ್ರಾಮದ ಶ್ರಾವಣಿ, ಚೈತನ್ಯ ಎಂಬ ಯುವತಿಯರು ಮೊದಲ ಬಾರಿಗೆ ತಮ್ಮ ಮತದಾನ ಹಕ್ಕನ್ನು ಚಲಾಯಿಸಿದ್ದು, ಇದೇ ಮೊದಲ ಬಾರಿ ಮತ ಚಲಾಯಿಸಿದ್ದಕ್ಕಾಗಿ ಹರ್ಷ ವ್ಯಕ್ತಪಡಿಸಿದರು.
 ಗಮನಸೆಳೆದ ಸಾಂಪ್ರಾದಾಯಿಕ ಮತಗಟ್ಟೆ ಕೇಂದ್ರ:
ಮತದಾನ ಪ್ರಮಾಣ ಹೆಚ್ಚಳಕ್ಕೆ ಹಾಗೂ ಮತದಾರರ ಆಕರ್ಷಣೆಗೆ ಜಿಲ್ಲಾಡಳಿತವು 94-ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗಾಂಧಿನಗರದ 97-ಬಾಲ ಭಾರತಿ ಇಂಗ್ಲೀಷ್ ಮಾಧ್ಯಮ ಶಾಲೆಯನ್ನು ಸಾಂಪ್ರದಾಯಿಕ ಮತಗಟ್ಟೆ ಕೇಂದ್ರವನ್ನಾಗಿ ಅಲಂಕರಿಸಿತ್ತು.
ಶಾಲೆಯ ಆವರಣದಲ್ಲಿ ಬಯಲಾಟ ಪಾತ್ರದ ವೇಷಧಾರಿ ಚಿತ್ರ, ಕನಕದುರ್ಗಮ್ಮ ದೇವಸ್ಥಾನ ಬಳಿಯ ವಿಗ್ರಹ, ಬಳ್ಳಾರಿ ತೇರು, ರೈಲ್ವೇ ನಿಲ್ದಾಣ, ನಗರ ಕೋಟೆ, ಸಿಡಿಬಂಡಿ ರಥೋತ್ಸವ, ಕೋಟೆ ಮಲ್ಲೇಶ್ವರ ದೇವಸ್ಥಾನ, ಗಡಿಗಿ ಚೆನ್ನಪ್ಪ ವೃತ್ತದಲ್ಲಿ ನಿರ್ಮಿಸಲಾಗುತ್ತಿರುವ ಕ್ಲಾಕ್ ಟವರ್ ಪ್ರತಿಕೃತಿಗಳನ್ನು ಸ್ಥಾಪಿಸಲಾಗಿತ್ತು. ಮತದಾರರು ಮತ ಚಲಾಯಿಸಿ ನೋಡುಗರಿಗೆ ಆಕರ್ಷಣೆ ಕಂಡು ಅವುಗಳ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವುದು ಕಂಡುಬಂದಿತು.