ಶತಮಾನ ಕಂಡರಿಯದ ಲಾಕ್ ಡೌನ್ ಆರಂಭಕ್ಕೆ ಒಂದು ವರ್ಷ

 • ವರ್ಷದ ನಂತರ ಮತ್ತೇ ಕೊರೊನಾ ಅಲೆ – ಜನರಲ್ಲಿ ತಳಮಳ
  ರಾಯಚೂರು.ಮಾ.೨೪- ಶತಮಾನದಲ್ಲಿ ಕಂಡರಿಯದ ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ದೇಶದಲ್ಲಿಯೇ ಪ್ರಪ್ರಥಮ ಲಾಕ್ ಡೌನ್ ಜಾರಿಗೊಂಡು ಇಂದಿಗೆ ಒಂದು ವರ್ಷ ಗತಿಸಿದೆ.
  ಕೇಂದ್ರ ಮತ್ತು ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಣೆ ಹಿನ್ನೆಲೆಯಲ್ಲಿ ೨೦೨೦ ಮಾರ್ಚ್ ೨೪ ರಂದು ಜನರ ಓಡಾಟ ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು. ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಮತ್ತು ಪೊಲೀಸ್ ಸರ್ಪಗಾವಲು ಹೊರತು ಪಡಿಸಿದರೇ, ಜನರು ರಸ್ತೆಗಳಿಂದ ಕಣ್ಮೆರೆಯಾಗಿದ್ದರು. ಲಾಕ್ ಡೌನ್ ಹಿನ್ನೆಲೆಯಲ್ಲಿ ಯಾರೊಬ್ಬರು ಸಹ ರಸ್ತೆಗೆ ಬಾರದಿರುವ ಅಪರೂಪ ಇಂದೂ ನಂಬಲು ಅಸಾಧ್ಯವಾಗಿದೆ. ಮೊದಲ ಲಾಕ್ ಡೌನ್ ಜಾರಿಗೊಂಡ ನಂತರ ಒಟ್ಟು ೫೪ ದಿನಗಳ ಈ ಲಾಕ್ ಡೌನ್ ಮುಂದುವರೆದಿತ್ತು. ಭೀಕರ ಮಹಾಮಾರಿಯ ಭೀತಿಗೆ ಇಡೀ ವ್ಯವಸ್ಥೆಯೇ ಸ್ತಬ್ಧಗೊಂಡು ಮನೆ ಸೇರುವಂತಾಗಿತ್ತು. ಜನರ ಓಡಾಟ ಇಲ್ಲದಿರುವುದರಿಂದ ಸಾರಿಗೆ, ವ್ಯಾಪಾರ ವಹಿವಾಟು, ಚಿತ್ರಮಂದಿರ, ಶಾಲಾ, ಕಾಲೇಜು ಸೇರಿದಂತೆ ಯಾವೊಂದು ವ್ಯವಹಾರವೂ ನಡೆಯದೇ, ಸ್ಥಗಿತಗೊಂಡಿದ್ದವು.
  ಇಡೀ ನಗರ ಸೇರಿದಂತೆ ಜಿಲ್ಲೆಯ ಯಾವುದೇ ರಸ್ತೆಗೆ ಹೋದರೂ, ಪೊಲೀಸರು ಹೊರತು ಪಡಿಸಿದರೇ, ಅನ್ಯರ ಓಡಾಟ ವೀರಳಾತಿ ವೀರಳ ಎನ್ನುವಂತಿತ್ತು. ೫೪ ದಿನಗಳ ಈ ಸುಧೀರ್ಘ ಲಾಕ್ ಡೌನ್ ಜಿಲ್ಲೆಯ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿತ್ತು. ಲಾಕ್ ಡೌನ್ ಹಿನ್ನೆಲೆಯಲ್ಲಿ ಯಾವುದೇ ವ್ಯವಹಾರ ನಡೆಯದೇ ಮತ್ತು ಜನರ ಓಡಾಟವಿಲ್ಲದ ಕಾರಣ ನಿರ್ಗತಿಕರಿಗೆ ಒಂದು ಹೊತ್ತಿನ ಊಟಕ್ಕೂ ಸಮಸ್ಯೆಯಾಗಿತ್ತು. ಪ್ರಾಣಿಗಳಿಗೂ ಊಟವಿಲ್ಲದ ಪರಿಸ್ಥಿತಿ ಬಂದೋದಗಿತ್ತು. ಕೆಲಸವಿಲ್ಲದೇ, ಬಡವರಂತೂ ಬದುಕು ನಿರ್ವಹಿಸುವ ಸಮಸ್ಯೆಗೆ ಗುರಿಯಾಗಿದ್ದರು. ಅನೇಕ ಸಂಘ, ಸಂಸ್ಥೆಗಳು ನೆರವಿಗೆ ಮುಂದಾಗುವ ಮೂಲಕ ಬಡವರಿಗೆ, ಕೂಲಿ ಕಾರ್ಮಿಕರಿಗೆ, ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡಿದ್ದರು. ಅನೇಕ ಬಡಾವಣೆಗಳಲ್ಲಿ ದಿನಸು ಹಂಚುವ ಮೂಲಕ ಕೆಲವರು ಮಾನವೀಯತೆ ಮೆರೆದಿದ್ದರು.
  ಈ ಶತಮಾನದಲ್ಲಿಯೇ ಈ ರೀತಿ ಸಂಪೂರ್ಣ ದೇಶವೇ ಸ್ತಬ್ಧಗೊಳ್ಳುವ ಊಹೆಯೂ ಸಾಧ್ಯವಾದ್ದನ್ನು ಕಳೆದ ವರ್ಷ ಜನ ನೋಡುವಂತಹ ಪ್ರಸಂಗ ನಿರ್ಮಾಣವಾಗಿತ್ತು. ಈ ಲಾಕ್ ಡೌನ್ ಇಂದಿಗೂ ಜನರಿಗೆ ಮಾತ್ರ ವಿಸ್ಮಯವೇ.
  ಒಂದು ವರ್ಷದ ಹಿಂದೆ ಲಾಕ್ ಡೌನ್‌ನ ಜೀವನ ಮತ್ತು ಪರದಾಟ ಹಾಗೂ ಮಹಾಮಾರಿಯ ಕೊರೊನಾದ ಆತಂಕ ನೆನೆದು, ಜನ ಬೆಚ್ಚಿ ಬೀಳುವಂತೆ ಮಾಡಿದೆ. ಒಂದು ವರ್ಷದ ನಂತರ ಮತ್ತೇ ನಿಧಾನಕ್ಕೆ ಕೊರೊನಾ ವಿಸ್ತರಣೆಗೆ ಮತ್ತೊಮ್ಮೆ ಜನ ಆತಂಕಕ್ಕೆ ಗುರಿಯಾಗುವಂತೆ ಮಾಡಿದೆ. ಕಳೆದ ಒಂದು ತಿಂಗಳಿಂದ ಒಂದಂಕ್ಕೆಯಲ್ಲಿದ್ದ ಜಿಲ್ಲೆಯ ಕೊರೊನಾ ನಿನ್ನೆ ಎರಡಂಕ್ಕೆಗೇರುತ್ತಿರುವಂತೆ ಜನರು ಮತ್ತಷ್ಟು ಆತಂಕಕ್ಕೆ ಗುರಿಯಾಗುವಂತೆ ಮಾಡಿದೆ. ಈ ಕೊರೊನಾ ಮಹಾಮಾರಿ ಮತ್ತೇ ಎರಡನೇ ಅಲೆ ರೂಪದಲ್ಲಿ ಒಕ್ಕೊರಿಸಿರುವುದು ಮುಂದೆ ಯಾವ ಅನಾಹುತಕ್ಕೆ ದಾರಿ ಮಾಡಲಿದೆ ಎನ್ನುವ ಕಳವಳ ತೀವ್ರಗೊಂಡಿದೆ.
  ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚಳ ಜಿಲ್ಲೆಗೆ ಬಹುದೊಡ್ಡ ಆತಂಕವಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಆರಂಭಕ್ಕೆ ಮಹಾರಾಷ್ಟ್ರದ ಸಂಪರ್ಕವೇ ಪ್ರಮುಖ ಕಾರಣವಾಗಿತ್ತು. ಈಗ ಮತ್ತೆ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳ ಜಿಲ್ಲೆಯ ಜನರನ್ನು ಕಳೆದ ವರ್ಷದ ಲಾಕ್ ಡೌನ್‌ನ ಭಯ ಖಿನ್ನತೆಗೆ ಗುರಿಯಾಗುವಷ್ಟು ಒತ್ತಡಕ್ಕೆ ಕಾರಣವಾಗಿದೆ.