ಶತಕ-ಪದಕ

ದೆಹಲಿ, ಅ.೭- ಈ ಬಾರಿ ಏಶ್ಯನ್ ಗೇಮ್ಸ್‌ನಲ್ಲಿ ನೂರು ಪದಕಗಳನ್ನು ಮೀರುವ ಗುರಿ ಸಾಧನೆಯೊಂದಿಗೆ ತೆರಳಿದ್ದ ಭಾರತ ಕೊನೆಗೂ ತನ್ನ ಮಹತ್ವಾಕಾಂಕ್ಷೆಯನ್ನು ಈಡೇರಿಸಿಕೊಂಡಿದೆ. ಚೀನಾದ ಹಾಂಗ್ಝೌನಲ್ಲಿ ನಡೆಯುತ್ತಿರುವ ೧೯ನೇ ಆವೃತ್ತಿಯ ಏಶ್ಯನ್ ಗೇಮ್ಸ್‌ನಲ್ಲಿ ಭಾರತ ನೂರು ಪದಕಗಳನ್ನು ಗೆದ್ದುಕೊಳ್ಳುವ ಮೂಲಕ ಐತಿಹಾಸಿಕ ಸಾಧನೆ ಪ್ರದರ್ಶಿಸಿದೆ. ಈ ಮೂಲಕ ಗೇಮ್ಸ್ ಇತಿಹಾಸದಲ್ಲಿ ಭಾರತ ಇದೇ ಮೊದಲ ಬಾರಿಗೆ ನೂರು ಪದಕಗಳ ಗುರಿ ಮೀರಿದೆ. ಕಬಡ್ಡಿಯಲ್ಲಿ ಮಹಿಳಾ ತಂಡ ಚಿನ್ನ ಗೆಲ್ಲುವ ಮೂಲಕ ಭಾರತ ನೂರನೇ ಪದಕಕ್ಕೆ ಸ್ವರ್ಣದ ಮುತ್ತಿಕ್ಕಿದೆ.
ಕಬ್ಬಡಿಯಲ್ಲಿ ಮಹಿಳಾ ತಂಡ ಚೈನೀಸ್ ತೈಪೆ ತಂಡವನ್ನು ೨೬-೨೫ ಅಂಕಗಳಿಂದ ಮಣಿಸಿ ಚಿನ್ನದಪದಕವನ್ನು ತೆಕ್ಕೆಗೆ ಹಾಕಿಕೊಂಡಿತು. ಈ ಬಾರಿ ಬಿಲ್ಲುಗಾರಿಕೆಯಲ್ಲಿ ದಾಖಲೆಯ ಅತ್ಯುತ್ತಮ ಸಾಧನೆ ಮಾಡಿ ಬೀಗಿದೆ.
ಇಸ್ ಬಾರ್ ಸೋ ಪಾರ್ (ಈ ಬಾರಿ ನೂರು ಮೀರಿ) ಎಂಬ ಕಠಿಣ ಗುರಿಯೊಂದಿಗೆ ಚೀನಾಗೆ ತೆರಳಿದ್ದ ಭಾರತೀಯ ಕ್ರೀಡಾ ನಿಯೋಗ ಆರಂಭದಿಂದಲೂ ಪದಕದ ನಿರೀಕ್ಷೆಯೊಂದಿಗೆ ಉತ್ತಮ ಪ್ರದರ್ಶನ ನೀಡುತ್ತಾ ಸಾಗಿತ್ತು. ೨೦೧೮ರಲ್ಲಿ ಜಕಾರ್ತಾದಲ್ಲಿ ನಡೆದ ೧೮ನೇ ಆವೃತ್ತಿಯ ಏಶ್ಯನ್ ಗೇಮ್ಸ್‌ನಲ್ಲೂ ಕೂಡ ಭಾರತ ಉತ್ತಮ ನಿರ್ವಹಣೆ ಪ್ರದರ್ಶಿಸಿ ೭೦ ಪದಕಗಳಿಗಳನ್ನು ಗೆದ್ದುಕೊಂಡಿತ್ತು. ಆದರೆ ಈ ಬಾರಿ ೧೦೦ರ ಗಡಿ ದಾಟುವ ಮೂಲಕ ಐತಿಹಾಸಿಕ ಸಾಧನೆ ಪ್ರದರ್ಶಿಸಿದೆ. ಈ ಮೂಲಕ ಒಲಿಂಪಿಕ್ಸ್, ಕಾಮನ್ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್ ಮುಂತಾದ ಮೂರು ಟೂರ್ನಿಯಲ್ಲಿ ಭಾರತ ನೂರರ ಗಡಿ ದಾಟಿದ ಇದು ಎರಡನೇ ಉದಾಹರಣೆಯಾಗಿದೆ. ಇದಕ್ಕೂ ಮುನ್ನ ೨೦೧೦ರಲ್ಲಿ ನವದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ೧೦೧ ಪದಕಗಳನ್ನು ಗೆದ್ದುಕೊಂಡಿತ್ತು. ಸದ್ಯ ಆ ದಾಖಲೆಯನ್ನು ಭಾರತ ಈಗಾಗಲೇ ಮುರಿದುಕೊಳ್ಳುವುದು ಖಚಿತವಾಗಿದೆ. ಯಾಕೆಂದರೆ ಹಲವಾರು ವಿಭಾಗಗಳಲ್ಲಿ ಭಾರತೀಯ ಕ್ರೀಡಾಳುಗಳು ಪದಕದ ಸ್ಪರ್ಧೆಗೆ ತೇರ್ಗಡೆ ಪಡೆದುಕೊಂಡಿದ್ದಾರೆ. ಅತ್ತ ಕುಸ್ತಿಪಟು ವಿಭಾಗವನ್ನು ಕೂಡ ಸೇರಿಸಿದರೆ ಇಂದಿನ ದಿನದಂತ್ಯಕ್ಕೆ ಭಾರತದ ಪದಕಗಳ ಸಂಖ್ಯೆ ೧೦೫ ದಾಟುವುದು ಬಹುತೇಕ ಖಚಿತವಾಗಿದೆ. ಇನ್ನು ಹಲವು ಕ್ರೀಡೆಗಳಲ್ಲಿ ಅದರಲ್ಲೂ ಶೂಟಿಂಗ್ ಹಾಗೂ ಅಥ್ಲೆಟಿಕ್ಸ್‌ನಲ್ಲಿ ಭಾರತ ಅತ್ಯಮೋಘ ಪ್ರದರ್ಶನ ನೀಡಿದ್ದು, ನೂರರರ ಸಂಖ್ಯೆ ದಾಟಲು ಪ್ರಮುಖ ಕಾರಣವಾಗಿದೆ. ಅದೂ ಅಲ್ಲದೆ ಚಿನ್ನ, ಬೆಳ್ಳಿ ಹಾಗೂ ಕಂಚಿನ ವಿಚಾರದಲ್ಲೂ ಭಾರತ ಇದೇ ಮೊದಲ ಬಾರಿ ಹೆಚ್ಚಿನ ಪದಕ ಗೆದ್ದುಕೊಂಡ ಸಾಧನೆ ಪ್ರದರ್ಶಿಸಿದೆ. ಏಳನೇ ದಿನದಂತ್ಯದ ವೇಳೆ ೯೫ ಪದಕಗಳನ್ನು ಗೆದ್ದುಕೊಂಡಿದ್ದ ಭಾರತ ಇಂದಿನ ಎಂಟನೇ ದಿನದಾರಂಭದಲ್ಲೇ ಕಬಡ್ಡಿಯಲ್ಲಿ ಚಿನ್ನದ ಪದಕ ಸೇರಿದಂತೆ ಐದು ಪದಕಗಳನ್ನು ಗ್ಯಾರಂಟಿ ಮಾಡಿಕೊಂಡಿತು. ಕಬಡ್ಡಿಯಲ್ಲಿ ಚೈನೀಸ್ ತೈಪೆ ವಿರುದ್ಧ ರೋಚಕ ೨೬-೨೫ರ ಅಂತರದಲ್ಲಿ ಗೆದ್ದುಕೊಳ್ಳುವ ಮೂಲಕ ಭಾರತೀಯ ಮಹಿಳಾ ತಂಡ ಚಿನ್ನದ ಪದಕಕ್ಕೆ ಕೊರಳೊಡ್ಡಿದೆ.

೨೫ ಚಿನ್ನ, ೩೫ ಬೆಳ್ಳಿ, ೪೦ ಕಂಚು ಏಷ್ಯನ್ ಗೇಮ್ಸ್‌ನಲ್ಲಿ ನಿರ್ವಹಣೆ ಹೇಗಿತ್ತು?
ಹಿಂದಿನಿಂದಲೂ ಭಾರತದಲ್ಲಿ ಕ್ರಿಕೆಟ್ ಹೊರತುಪಡಿಸಿ ಇತರೆ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವುದು ತುಂಬಾ ಕಡಿಮೆ ಎಂದರೆ ತಪ್ಪಾಗಲಾರದು. ಆದರೆ ಇತ್ತೀಚಿಗಿನ ವರ್ಷಗಳಲ್ಲಿ ಕೇಂದ್ರ ಹಾಗೂ ವಿವಿಧ ರಾಜ್ಯಗಳು ಕ್ರೀಡೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದೆ. ಅದರಲ್ಲೂ ಕೇಂದ್ರದ ಖೇಲೋ ಇಂಡಿಯಾದ ಮೂಲಕ ಪ್ರತಿಭಾವಂತ ಕ್ರೀಡಾಳುಗಳು ಭಾರತಕ್ಕೆ ಲಭಿಸುತ್ತಿದ್ದಾರೆ. ಇನ್ನು ನಾವು ಏಶ್ಯನ್ ಗೇಮ್ಸ್‌ನ ಇತಿಹಾಸದ ಪದಕಗಳ ಪಟ್ಟಿ ವೀಕ್ಷಿಸಿದರೆ ಭಾರತದ ಸಾಧನೆಯ ಅರಿವಾಗುತ್ತದೆ. ೨೦೦೨ರ ಬುಸಾನ್ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಕೇವಲ ೩೬ ಪದಕಗಳನ್ನು ಮಾತ್ರ ಗೆದ್ದುಕೊಂಡಿದ್ದರೆ ೨೦೦೬ರಲ್ಲಿ ದೊಹಾದಲ್ಲಿ ನಡೆದ ಟೂರ್ನಿಯಲ್ಲಿ ಈ ಸಂಖ್ಯೆ ೫೩ಕ್ಕೆ ಏರಿಕೆಯಾಗಿತ್ತು. ೨೦೧೦ರಲ್ಲಿ ಗುವಾಂಗ್‌ಝೌನ ಆವೃತ್ತಿಯಲ್ಲಿ ೬೫ ಪದಕಗಳನ್ನು ಭಾರತ ಗೆದ್ದುಕೊಂಡಿದ್ದರೆ ೨೦೧೪ರ ಇಂಚಿಯಾನ್ ಗೇಮ್ಸ್‌ನಲ್ಲಿ ೫೭ಕ್ಕೆ ಕುಸಿತವಾಗಿತ್ತು. ಈ ಬಳಿಕ ಹಿಂದೆ ನೋಡದ ಭಾರತ ಉತ್ತಮ ಪ್ರದರ್ಶನ ನೀಡುತ್ತಲೇ ಸಾಗಿದೆ. ಅದರಂತೆ ೨೦೧೮ರಲ್ಲಿ ಜಕಾರ್ತಾದಲ್ಲಿ ನಡೆದ ಟೂರ್ನಿಯಲ್ಲಿ ಭಾರತ ೭೦ ಪದಕ ಗೆದ್ದು ಇತಿಹಾಸ ನಿರ್ಮಿಸಿತ್ತು. ಆದರೆ ಈ ಬಾರಿ ಈ ಎಲ್ಲಾ ದಾಖಲೆಗಳನ್ನು ಭಾರತ ಅಳಿಸಿ ಹಾಕಿ, ಹೊಸ ಇತಿಹಾಸ ಬರೆದಿದೆ. ಟೂರ್ನಿ ಮುಕ್ತಾಯಕ್ಕೆ ಇನ್ನೇನು ಮತ್ತೊಂದು ದಿನ (ಅ.೮) ಬಾಕಿ ಉಳಿದಿದ್ದು, ಹಾಗಾಗಿ ಭಾರತದ ಪದಕಗಳು ೧೧೦ರ ಸನಿಹ ಸಾಗುವ ಎಲ್ಲಾ ಸಾಧ್ಯತೆಗಳಿವೆ.

ದಿನದಾರಂಭ ಹೇಗಿತ್ತು?
ಭಾರತ ಇಂದಿನ (ಅ.೭) ದಿನವನ್ನು ಕಂಚು ಗೆಲ್ಲುವ ಮೂಲಕ ಆರಂಭಿಸಿತ್ತು. ಮಹಿಳೆಯರ ಬಿಲ್ಲುಗಾರಿಕೆಯ ಕಾಂಪೌಂಡ್ ವಿಭಾಗದಲ್ಲಿ ಅದಿತಿ ಸ್ವಾಮಿ ಗೋಪಿಚಂದ್ ಅವರು ಕಂಚು ಗೆಲ್ಲುವ ಮೂಲಕ ಇಂದಿನ ಪದಕದ ಬೇಟೆಯನ್ನು ಆರಂಭಿಸಿದ್ದರು. ಅದೇ ವಿಭಾಗದಲ್ಲಿ ಜ್ಯೋತಿ ಸುರೇಖಾ ವೆನ್ನಮ್ ಅವರು ಚಿನ್ನ ಗೆಲ್ಲುವ ಮೂಲಕ ಪದಕ ಬೇಟೆಯನ್ನು ಮುಂದುವರೆಸಿದರು. ಅಲ್ಲದೆ ಪುರುಷರ ವೈಯುಕ್ತಿಕ ವಿಭಾಗದ ಬಿಲ್ಲುಗಾರಿಕೆಯ ಕಾಂಪೌಂಡ್ ಸ್ಪರ್ಧೆಯಲ್ಲಿ ಭಾರತದ ಉದಯೋನ್ಮುಖ ಓಜಸ್ ಪ್ರವೀಣ್ ದೇವ್ತಲೆ ಅವರು ಚಿನ್ನ ಗೆದ್ದುಕೊಂಡಿದ್ದು, ದೇಶದ ಮತ್ತೊಬ್ಬ ಆರ್ಚರ್ ಅಭಿಷೇಕ್ ವರ್ಮಾ ಬೆಳ್ಳಿಗೆ ತೃಪ್ತಿಪಟ್ಟುಕೊಂಡರು. ಅಲ್ಲದೆ ಕಬಡ್ಡಿಯಲ್ಲಿ ಭಾರತದವು ಚೈನೀಸ್ ತೈಪೆ ವಿರುದ್ಧ ೨೬-೨೫ರ ರೋಚಕ ಅಂತರದಲ್ಲಿ ಗೆದ್ದುಕೊಂಡು ಚಿನ್ನ ಪಡೆದುಕೊಂಡಿದ್ದು, ಭಾರತದ ನೂರನೇ ಪದಕವಾಗಿತ್ತು. ಅಲ್ಲದೆ ಬಿಲ್ಲುಗಾರಿಕೆಯಲ್ಲಿ ಭಾರತ ಮತ್ತೊಂದು ಬೆಳ್ಳಿಯ ಪದಕ ಗೆದ್ದುಕೊಂಡಿದೆ.

ಪ್ರಧಾನಿ ಅಭಿನಂದನೆ
ಚೀನಾದಲ್ಲಿ ನಡೆಯುತ್ತಿರುವ ೧೯ನೇ ಏಷ್ಯನ್ ಕ್ರೀಡಾಕೂಟದಲ್ಲಿ ೧೦೦ ಪದಕಗಳನ್ನು ಗೆದ್ದಿರುವ ಭಾರತೀಯ ಕ್ರೀಡಾಪಟುಗಳ ಸಾಧನೆಯನ್ನು ಪ್ರಧಾನಿ ನರೇಂದ್ರಮೋದಿ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಅದರಲ್ಲೂ ವನಿತೆಯರ ಕಬ್ಬಡಿ ವಿಭಾಗದಲ್ಲಿ ಜಯಭೇರಿ ಬಾರಿಸಿದ್ದು, ಇದೊಂದು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ್ದಾರೆ. ಇದು ಭಾರತೀಯ ಅಥ್ಲೀಟ್‌ಗಳ
ಸ್ಫೂರ್ತಿದಾಯಕ ಕ್ಷಣವಾಗಿದೆ. ಭವಿಷ್ಯದ ಕ್ರೀಡಾಕೂಟಗಳಲ್ಲೂ ಭಾರತದ ಅಥ್ಲೀಟ್‌ಗಳು ಉತ್ತಮ ಪ್ರದರ್ಶನ ನೀಡಲಿ ಎಂದು ಹಾರೈಸಿದ್ದಾರೆ.