
ಕಲಬುರಗಿ:ಆ.27: ರಾಜ್ಯದಲ್ಲಿ ಇತ್ತೀಚೆಗೆ ಜರುಗಿದ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಬಹುಮತದೊಂದಿಗೆ ಕಳೆದ ಮೇ 20ಕ್ಕೆ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು 100 ದಿನಗಳನ್ನು ಪೂರೈಸಿದೆ. ಚುನಾವಣಾ ಪೂರ್ವ ನೀಡಿದ ಭರವಸೆಯಂತೆ ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ಪ್ರಮುಖವಾಗಿ “ಶಕ್ತಿ”, “ಗೃಹ ಜ್ಯೋತಿ”, “ಅನ್ನ ಭಾಗ್ಯ” ಮೂರು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. 4ನೇ ಗ್ಯಾರಂಟಿ ರೂಪದಲ್ಲಿ “ಗೃಹ ಲಕ್ಷ್ಮೀ” ಯೋಜನೆಗೆ ಇದೇ ಆಗಸ್ಟ್ 30ಕ್ಕೆ ಚಾಲನೆ ನೀಡಲಾಗುತ್ತಿದೆ. ಉಳಿದಂತೆ “ಯುವ ನಿಧಿ” ಯೋಜನೆ ಇದೇ ವರ್ಷದ ಅಂತ್ಯಕ್ಕೆ ಜಾರಿಗೆ ತರಲಾಗುತ್ತಿದೆ. ಈ ಮೂಲಕ ಇದು “ನುಡಿದಂತೆ ನಡೆಯುವ ಸರ್ಕಾರ” ಎಂಬುದನ್ನು ಮತ್ತೊಮ್ಮೆ ಜನಮಾನಸದಲ್ಲಿ ಸಾಬೀತು ಪಡಿಸಿದೆ.
ಪೆಟ್ರೋಲ್, ಡೀಸೆಲ್, ಗ್ಯಾಸ್‍ಗಳ ಬೆಲೆ ಏರಿಕೆ, ತರಕಾರಿ-ದಿನಸಿ ತುಟ್ಟಿ, ಹಣದುಬ್ಬರ ಮಧ್ಯೆ ಈ ಜನಪರ ಯೋಜನೆಗಳು ಜನಸಾಮಾನ್ಯರ, ಮಹಿಳೆಯರ, ಲಿಂಗತ್ವ ಅಲ್ಪಸಂಖ್ಯಾತರ, ಯವಕ-ಯುವತೀಯರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಿದೆ. ದುರ್ಬಲರನ್ನು ಮೇಲೆತ್ತುವ ಮತ್ತು ಮಧ್ಯಮ ವರ್ಗಕ್ಕೆ ಬೂಸ್ಟ್ ನೀಡುವ ಈ ಯೋಜನೆಗಳಿಂದ ಒಂದು ಅಂದಾಜಿನ ಪ್ರಕಾರ ರಾಜ್ಯದ ಪ್ರತಿ ಕುಟುಂಬಕ್ಕೆ ವಾರ್ಷಿಕ ಸುಮಾರು 1 ಲಕ್ಷ ರೂ. ವರೆಗೆ ಲಾಭ ಸಿಗಲಿದೆ. ಇಡೀ ದೇಶದಲ್ಲಿಯೇ ಗ್ಯಾರಂಟಿ ಯೋಜನೆಗಳು ಸದ್ದು ಮಾಡುತ್ತಿದ್ದು, ಕರ್ನಾಟಕ ಮಾದರಿ ಆಡಳಿತಕ್ಕೆ ಮುನ್ನುಡಿ ಬರೆದಂತಾಗಿದೆ. ಈ ಯೋಜನೆಗಳ ಜಾರಿಯಿಂದ ಕಲಬುರಗಿ ಜಿಲ್ಲೆಯ ಜನಸಮಾನ್ಯರಿಗೆ ಸಿಗುತ್ತಿರುವ ಸೌಲಭ್ಯಗಳು ಮತ್ತು ಯೋಜನೆಗಳ ಪ್ರಗತಿಯ ಚಿತ್ರ ಇಲ್ಲಿ ತೆರೆದಿಡಲಾಗಿದೆ.
“ಶಕ್ತಿ”:
ರಾಜ್ಯದೊಳಗೆ ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರಿಗೆ, ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಪ್ರಯಾಣ ಒದಗಿಸುವ “ಶಕ್ತಿ” ಯೋಜನೆಯಡಿ ಕಲಬುರಗಿ ಜಿಲ್ಲೆಯಲ್ಲಿ ಇದೂವರೆಗೆ 1.24 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿದ್ದು, ಇದರ ವೆಚ್ಚ 38.17 ಕೋಟಿ ರೂ. ನಿಗಮಕ್ಕೆ ಸರ್ಕಾರ ಪಾವತಿಸಲಿದೆ. ಯೋಜನೆ ಪರಿಣಾಮ ಪ್ರಯಾಣಿಕರ ದಟ್ಟಣೆ ಹೆಚ್ಚಿದರಿಂದ ಚಾಲ್ತಿಯಲಿದ್ದ 225 ಅನುಸೂಚಿಗಳನ್ನು 310ಕ್ಕೆ ಪರಿಷ್ಕರಿಸಿ 12,500 ಕಿ.ಮೀ. ಸಾರಿಗೆ ಪ್ರಯಾಣ ವಿಸ್ತರಿಸಿದೆ.
“ಅನ್ನ ಭಾಗ್ಯ”:
ಹಸಿವು ಮುಕ್ತ ಕರ್ನಾಟಕ್ಕಾಗಿ ಪ್ರತಿ ಸದಸ್ಯನಿಗೆ 10 ಕೆ.ಜಿ. ಆಹಾರ ಧಾನ್ಯ ನೀಡುವ “ಅನ್ನ ಭಾಗ್ಯ” ಯೋಜನೆ ಜಾರಿಗೊಳಿಸಿದೆ. 10 ಕೆ.ಜಿ. ಪೈಕಿ 5 ಕೆ.ಜಿ. ಅಕ್ಕಿ ನೀಡಲು ತಾಂತ್ರಿಕವಾಗಿ ಸಾಧ್ಯವಾಗದ ಕಾರಣ, ಜುಲೈ-2023 ಮಾಹೆಯಿಂದಲೆ ಪ್ರತಿ ಕೆ.ಜಿ.ಗೆ 34 ರೂ.ಗಳಂತೆ ತಲಾ ಸದಸ್ಯರಿಗೆ 170 ರೂ. ಗಳನ್ನು ಡಿ.ಬಿ.ಟಿ. ಮೂಲಕ ಪಾವತಿಸುತ್ತಿದೆ. ಕಲಬುರಗಿ ಜಿಲ್ಲೆಯಲ್ಲಿ ಜುಲೈ-2023 ಮಾಹೆಗೆ 14,79,702 ಫಲಾನುಭವಿಗಳನ್ನು ಒಳಗೊಂಡ 4,24,635 ಪಡಿತರ ಚೀಟಿಯ ಮುಖ್ಯಸ್ಥರ ಬ್ಯಾಂಕ್ ಖಾತೆಗೆ 25.16 ಕೋಟಿ ರೂ. ಜಮೆ ಮಾಡಿದೆ. ಇನ್ನೂ ಆಗಸ್ಟ್-2023ರ ಮಾಹೆಗೂ 16,42,290 ಫಲಾನುಭವಿಗಳನ್ನು ಒಳಗೊಂಡ 4,49,900 ಪಡಿತರ ಚೀಟಿಯ ಮುಖ್ಯಸ್ಥರ ಖಾತೆಗೆ 26.78 ಕೋಟಿ ರೂ. ಬಿಡುಗಡೆಗೆ ತಯ್ಯಾರಿ ಮಾಡಿಕೊಂಡಿದೆ.
ಗೃಹ ಜ್ಯೋತಿ:
200 ಯೂನಿಟ್ ವರೆಗೆ ಉಚಿತ ವಿದ್ಯುತ್ ಒದಗಿಸುವ “ಗೃಹ ಜ್ಯೋತಿ” ಯೋಜನೆಯಡಿ ಕಲಬುರಗಿ ಜಿಲ್ಲೆಯಲ್ಲಿ ಇದೂವರೆಗೆ 4,96,491 ವಿದ್ಯುತ್ ಗ್ರಾಹಕರು ನೋಂದಾಯಿಸಿಕೊಂಡಿದ್ದು, ಈ ಪೈಕಿ 3,34,783 ಗ್ರಾಹಕರು ಜುಲೈ ಮಾಹೆಯಲ್ಲಿ ಶೂನ್ಯ ದರದ ಬಿಲ್ ಪಡೆದಿದ್ದಾರೆ.
“ಗೃಹ ಲಕ್ಷ್ಮೀ”:
ಮಹಿಳಾ ಸಬಲೀಕರಣ ನಿಟ್ಟಿನಲ್ಲಿ ಕುಟುಂಬದ ಯಜಮಾನಿಗೆ ಮಾಸಿಕ 2,000 ರೂ. ಒದಗಿಸುವ “ಗೃಹ ಲಕ್ಷ್ಮೀ” ಯೋಜನೆಗೆ ಇದೇ ಆಗಸ್ಟ್ 30ಕ್ಕೆ ಚಾಲನೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಗುರುತಿಸಲಾದ 5,89,105 ಫಲಾನುಭವಿಗಳಲ್ಲಿ ಇದೂವರೆಗೆ 4,75,619 ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ.
“ಯುವ ನಿಧಿ”:
2022-23ನೇ ಶೈಕ್ಷಣಿಕ ಸಾಲಿನಲ್ಲಿ ಡಿಪೆÇ್ಲೀಮಾ, ಪದವಿ ಉತ್ತೀರ್ಣರಾಗಿ ಮುಂದಿನ 6 ತಿಂಗಳ ಉದ್ಯೋಗ ಸಿಗದ ನಿರುದ್ಯೋಗಿಗಳಿಗೆ ಕ್ರಮವಾಗಿ ಮಾಸಿಕ, 1,500 ಮತ್ತು 3,000 ರೂ. ಭತ್ಯೆ ನೀಡುವ “ಯುವ ನಿಧಿ” ಯೋಜನೆ ಈ ವರ್ಷದ ಅಂತ್ಯದೊಳಗೆ ಜಾರಿಗೆ ತರಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ನುಡಿದಂತೆ ನಡೆದಿದ್ದೇವೆ:
ಜಾತಿ-ಧರ್ಮವಿಲ್ಲದೆ ಸರ್ವ ಜನಾಂಗದ ಅಭಿವೃದ್ಧಿಯೇ ನಮ್ಮ ಸರ್ಕಾರದ ಧ್ಯೇಯವಾಗಿದೆ. ಧ್ವನಿ ಇಲ್ಲದವರಿಗೆ ಧ್ವನಿಯಾಗಲು, ದುರ್ಬಲರಿಗೆ ಶಕ್ತಿ ತುಂಬುವುದೆ ನಮ್ಮ ಗ್ಯಾರೆಂಟಿಗಳ ಉದ್ದೇಶವಾಗಿದೆ
-ಪ್ರಿಯಾಂಕ್ ಖರ್ಗೆ
*ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ
ಫಲಾನುಭವಿಗಳ ಅನಿಸಿಕೆಗಳು:
ಮಾಸಿಕ 1,000 ರೂ. ಆಸುಪಾಸು ವಿದ್ಯುತ್ ಬಿಲ್ಲು ಬರುತ್ತಿತ್ತು. ಜುಲೈ ತಿಂಗಳ ಬಿಲ್ಲು ಶೂನ್ಯ ಬಂದಿದೆ. ಅವಿಭಕ್ತ ಕುಟುಂಬವಾಗಿರುವ ನಮಗೆ ಉಚಿತ ವಿದ್ಯುತ್ ತುಂಬಾ ಅನುಕೂಲವಾಗಿದೆ
-ತುಳಸಿರಾಮ
ಕಲ್ಲು ಕುಟಿಕ ವೃತ್ತಿ, ಶರಣಸಿರಸಗಿ
10 ಕೆ.ಜಿ. ಅಕ್ಕಿಯಲ್ಲಿ 5 ಕೆ.ಜಿ. ಅಕ್ಕಿ ಬದಲು ಜುಲೈ ಮಾಹೆಗೆ 850 ರೂ. ಹಣ ಜಮೆಯಾಗಿದೆ. ಹಣ ಬದಲಿಗೆ ಅಕ್ಕಿ ನೀಡಿದರೆ ಹೊಟ್ಟೆ ತುಂಬಾ ಊಟ ಮಾಡಬಹುದು
-ಶಿವಲೀಲಾ ಮಂಜುನಾಥ
ಟೇಲರಿಂಗ್ ವೃತ್ತಿ, ಕಪನೂರ
ದಿನನಿತ್ಯ ಕೆಲಸಕ್ಕೆ ಚಿತ್ತಾಪುರದಿಂದ-ಕಲಬುರಗಿಗೆ ಬಸ್ಸಿಗೆ ಹೋಗಿ ಬರಬೇಕೆಂದರೆ ಮಾಸಿಕ ಕನಿಷ್ಠ 3,000 ರೂ. ಖರ್ಚಾಗುತ್ತಿತ್ತು. ಉಚಿತ ಪ್ರಯಾಣದಿಂದ ಅಷ್ಟು ಹಣ ಉಳಿತಾಯವಾಗುತ್ತಿದೆ
-ಸೋನಿಯಾ ಶಿವರಾಯ
ಚಿತ್ತಾಪೂರ
“ಗೃಹ ಲಕ್ಷ್ಮೀ” ಯೋಜನೆಯಡಿ ಮಾಸಿಕ 2,000 ರೂ. ದೊರೆತಲ್ಲಿ ಮಕ್ಕಳ ಉನ್ನತ ಶಿಕ್ಷಣ, ಕೌಟುಂಬಿಕ ಖರ್ಚಿಗೆ ಸಹಾಯವಾಗಲಿದೆ
-ಸುಜಾತಾ ಶ್ರೀಕಾಂತ
ಭೀಮಳ್ಳಿ
ವರದಿ:-ರವಿ ಮಿರಸ್ಕರ್,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ,ಕಲಬುರಗಿ