
ಕಲಬುರಗಿ,ಆ.9: ನೂತನ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಕಾರ್ಮಿಕರು ಶ್ರಮವಹಿಸಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಸಹ ಜುಲೈ ತಿಂಗಳಿನ ವೇತನವು ಇಲ್ಲಿಯವೆಗೆ ಪಾವತಿಯಾಗಿಲ್ಲ ಎಂದು ಅಖಿಲ ಕರ್ನಾಟಕ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ ಕಲ್ಯಾಣ ಕರ್ನಾಟಕ ನಿಗಮದ ಪ್ರಧಾನ ಕಾರ್ಯದರ್ಶಿ ಬಸವರಾಜ್ ಕಣ್ಣಿ ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೌಕರರಿಗೆ ಪ್ರತಿ ತಿಂಗಳು ಒಂದರಂದು ವೇತನ ಪಾವತಿಯಾಗುತ್ತಿತ್ತು. ಕಳೆದ ಜೂನ್ 11ರಿದ ಜೂನ್ 30ರವರೆಗಿನ ಶಕ್ತಿ ಯೋಜನೆ ಅಡಿಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ 47.80 ಕೋಟಿ ರೂ.ಗಳು ಸರ್ಕಾರಕ್ಕೆ ಮರುಪಾವತಿಗೆ ಕೋರಿದ್ದು, ಸರ್ಕಾರದಿಂದ ಇಲ್ಲಿಯವರೆಗೆ 37.33 ಕೋಟಿ ರೂ.ಗಳನ್ನು ಮರುಪಾವತಿಸಲು ಆರ್ಥಿಕ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಿದ್ದು, ಆದಾಗ್ಯೂ, ನಿಗಮಗಳಿಗೆ ಮೊತ್ತ ಜಮಾ ಆಗಿಲ್ಲ. ಇದರಿಂದಾಗಿ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ ಎಂದು ಆತಂಕ ಹೊರಹಾಕಿದರು.
ಪ್ರತಿ ತಿಂಗಳು ಒಂದರಂದು ವೇತನ ಪಾವತಿಯಾಗುವುದಕ್ಕೆ ಮುಂಗಡವಾಗಿ ಶಕ್ತಿ ಯೋಜನೆಯ ಮೊತ್ತವನ್ನು ಪ್ರತಿ ತಿಂಗಳು ನಿಯಮಿತವಾಗಿ ನಿಗಮಗಳಿಗೆ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ ಅವರು, ಸಾರಿಗೆ ನಿಗಮಗಳು ಕಳೆದ 2020ರ ಫೆಬ್ರವರಿಯಿಂದ ಪ್ರಯಾಣಿಕರ ಪ್ರಯಾಣದರವನ್ನು ಪರಿಷ್ಕರಿಸಿಲ್ಲ. ಆದಾಗ್ಯೂ, 2020ರ ಫೆಬ್ರವರಿಯಿಂದ ಇಂದಿನವರೆಗೆ ಇಂಧನ ದರದಲ್ಲಿ ಗಣನೀಯವಾಗಿ (ಪ್ರತಿ ಲೀಟರ್‍ಗೆ 20ರೂ.ಗಳು) ಏರಿಕೆಯಾಗಿದೆ. ಇದರಿಂದ ನೌಕರರಿಗೆ ನಿಗಮದ ವತಿಯಿಂದ ಆರ್ಥಿಕ ಸೌಲಭ್ಯಗಳನ್ನು ನೀಡಲು ವಿಳಂಬವಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಹಿಂದಿನ ಸರ್ಕಾರದ ವಿಳಂಬ ನೀತಿಯಿಂದ ಕಳೆದ 2020ರ ಜನವರಿ 1ರಿಂದ ಜಾರಿಗೆ ಬರಬೇಕಾಗಿದ್ದ ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆಯು 2023ರ ಮಾರ್ಚ್ 17ರ ಸರ್ಕಾರದ ಆದೇಶದ ರೀತ್ಯ ಮಾರ್ಚ್ 2023ರಿಂದ ಜಾರಿಗೆ ಬಂದಿದೆ. 2020ರ ಜನವರಿ 1ರಿಂದ 2023ರ ಫೆಬ್ರವರಿ 28ರವರೆಗಿನ 38 ತಿಂಗಳ ವೇತನ ಹಿಂಬಾಕಿಯನ್ನು ಕೂಡಲೇ ಸರ್ಕಾರವು ಪಾವತಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಮೊದಲು 2013-2018ರ ಅವಧಿಯಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಿಗೆ ನೇಮಕ ಮತ್ತು ವೃಂದ ನಿರ್ವಹಣೆ ಕುರಿತು ಅಧಿಕಾರ ನೀಡುವ ಕುರಿತು 2017ರ ಜುಲೈ 5ರಂದು ಜರುಗಿದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಿಸಿ ಆದೇಶ ಹೊರಡಿಸಲಾಗಿತ್ತು. ಆದಾಗ್ಯೂ, ಇಲ್ಲಿಯವರೆಗೆ ನಿಗಮಕ್ಕೆ ನೇಮಕಾತಿ ಮತ್ತು ವೃಂದ ನಿರ್ವಹಣೆ ಕುರಿತು ಸ್ವಾಯತ್ತತೆ ನೀಡಿಲ್ಲ. ಇದರಿಂದ 371(ಜೆ) ಅನುಚ್ಛೇದ ತಿದ್ದುಪಡಿ ರೀತ್ಯ ನೇಮಕಾತಿ ಮಾಡದ ಪ್ರಯುಕ್ತ ಈ ಭಾಗದ ನಿರುದ್ಯೋಗಿ ಯುವಕರಿಗೆ ಹಾಗೂ ಸಂಸ್ಥೆಯ ಅಭಿವೃದ್ಧಿಗೆ ತೊಡಕಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಸಾರಿಗೆ ಸಂಸ್ಥೆಗಳ ಸಿಬ್ಬಂದಿಗಳಿಗೆ ಆರ್ಥಿಕ ಸೌಲ್ಯಗಳನ್ನು ಪಾವತಿಸಬೇಕು ಎಂದು ಒತ್ತಾಯಿಸಿದ ಅವರು, ಸರ್ಕಾರದ ಆದೇಶದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 225 ಕೋಟಿ ರೂ.ಗಳು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 300 ಕೋಟಿ ರೂ.ಗಳು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 400 ಕೋಟಿ ರೂ.ಗಳನ್ನು ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಕೇವಲ 75 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ. ಸರ್ಕಾರವು ಈ ತಾರತಮ್ಯವನ್ನು ನಿವಾರಿಸಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ವ್ಯತ್ಯಾಸದ ಮೊತ್ತವನ್ನು ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಎಸ್.ಎಸ್. ಸಜ್ಜನ್, ಸಂಗಮನಾಥ್ ರಬಶೆಟ್ಟಿ, ಭೀಮರಾವ್ ಯರಗೋಳ್, ಸೈಯದ್ ಇಸ್ಮಾಯಿಲ್ ಪಟೇಲ್, ರಾಮಚಂದ್ರಪ್ಪ ಹೈಯ್ಯಾಳಕರ್, ಸೂರ್ಯಕಾಂತ್ ಸಿಂಘೆ ಮುಂತಾದವರು ಉಪಸ್ಥಿತರಿದ್ದರು.