ಸಿರವಾರ,ಜೂ.೧೨-
ಸರ್ಕಾರದ ಮೊದಲ ಗ್ಯಾರಂಟಿ ಮಹಿಳೆಯರ ಉಚಿತ ಪ್ರಯಾಣ ಸೇವೆ ಶಕ್ತಿ ಯೋಜನೆಯ ಪರಿಣಾಮ ಸೋಮವಾರ ನೂರಾರು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಿಸಿ ತಟ್ಟಿದೆ. ಬಸ್‌ನಲ್ಲಿ ನಿಲ್ಲಲೂ ಜಾಗವಿಲ್ಲದೇ ಕಿಕ್ಕಿರಿದು ಸೇರಿದ್ದ ಮಹಿಳೆಯರಿಂದಾಗಿ ಶಾಲಾ ಕಾಲೇಜುಗಳಿಗೆ ಹೋಗಬೇಕಾದ ವಿದ್ಯಾರ್ಥಿಗಳು ಮನೆಗೆ ವಾಪಾಸಾದ ಘಟನೆ ಜರುಗಿದೆ.
ಪಟ್ಟಣದ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆ ೬ ಗಂಟೆಯಿಂದಲೇ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಬಸ್‌ಗಾಗಿ ಕಾದುನಿಂತಿದ್ದು, ಅಷ್ಟೊತ್ತಿಗಾಗಲೇ ಮಹಿಳೆಯರು ಕೂಡಾ ಉಚಿತ ಪ್ರಯಾಣಕ್ಕೆ ಸೇರಿದ್ದರಿಂದ ಬಸ್‌ಗಳು ತುಂಬಿ ಹೋಗುತ್ತಿವೆ. ಬಸ್‌ಗಳಲ್ಲಿ ಕನಿಷ್ಟಪಕ್ಷ ನಿಲ್ಲಲೂ ಅವಕಾಶ ಇಲ್ಲದಷ್ಟು ಭರ್ತಿಯಾಗುತ್ತಿವೆ.
ವಿಧಿಯಿಲ್ಲದೆ ವಿದ್ಯಾರ್ಥಿಗಳು ತಮ್ಮ ಮನೆಗಳಿಗೆ ವಾಪಾಸು ಹೊರಟಿದ್ದಾರೆ.
ಈ ತರಹ ಒಂದು ದಿನವಾದರೆ ಪರವಾಗಿಲ್ಲ. ಸರ್ಕಾರದ ಈ ಯೋಜನೆ ನಿರಂತರವಾಗಿರುವುದರಿಂದ ಪ್ರತಿ ದಿನ ಬಸ್‌ನ ತೊಂದರೆಯಾದರೆ ನಮ್ಮ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವುದು ನಿಶ್ಚಿತ. ಸರ್ಕಾರ ಕೂಡಲೇ ಈ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಲು ಮುಂದಾಗಬೇಕು ಎಂದು ಕಾಲೇಜು ಓದುತ್ತಿರುವ ವಿದ್ಯಾರ್ಥಿಗಳು ಒತ್ತಾಯಿಸಿದರು. ಹಾಗು ಸರ್ಕಾರದ ಈ ಉಚಿತ ಪ್ರಯಾಣದ ಯೋಜನೆಗೆ ಹಿಡಿಶಾಪ ಹಾಕಿದರು.