ಶಕ್ತಿ ಯೋಜನೆಯಿಂದ ಪ್ರಯಾಣ ಕಷ್ಟಕರವಾಗಿದೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.08: ಕರ್ನಾಟಕ ಸರ್ಕಾರ ಶಕ್ತಿ ಯೋಜನೆಯ ಹೆಸರಿನಲ್ಲಿ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ಕಲ್ಪಿಸಿದೆ. ಏಪ್ರಿಲ್ ತಿಂಗಳ ಅಂತ್ಯದವರೆಗೆ ರಾಜ್ಯದಾದ್ಯಂತ 200 ಕೋಟಿ ಮಹಿಳೆಯರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದು ಇದೊಂದು ಮಹತ್ವದ ಸಾಧನೆ ಎನ್ನುವಂತೆ ರಾಜ್ಯ ಸರ್ಕಾರ ಬಿಂಬಿಸಿಕೊಳ್ಳುತ್ತಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯದ ಸಾಧನೆಯ ಬಗ್ಗೆ ಮಾತ್ರ ಎದೆತಟ್ಟಿ ಹೇಳುತ್ತಿರುವ ರಾಜ್ಯ ಸರ್ಕಾರ ಈ ಯೋಜನೆಯ ಅನಾನುಕೂಲಗಳನ್ನು ಪರಿಹರಿಸುವತ್ತ ಗಂಭೀರ ಪ್ರಯತ್ನ ನಡೆಸಿಲ್ಲ.
ಉಚಿತ ಬಸ್ ಪ್ರಯಾಣದ ಪರಿಣಾಮ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಉಚಿತ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಆದರೆ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ಸುಗಳ ಸಂಖ್ಯೆಯನ್ನು ಮಾತ್ರ ಹೆಚ್ಚಿಸಿಲ್ಲ. ಇದರಿಂದಾಗಿ ಹಣಕೊಟ್ಟು ಪ್ರಯಾಣಿಸುವ ಪ್ರಯಾಣಿಕರಿಗೆ ನರಕ ಯಾತನೆಯಾಗುತ್ತಿದೆ. ಹಣಕೊಟ್ಟು ಪ್ರಯಾಣಿಸುವವರು ಬಸ್ ಹತ್ತಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್ ಹತ್ತುವ ವೇಳೆ ಉಂಟಾಗುವ ನೂಕು ನುಗ್ಗಲಿನಲ್ಲಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಈಗಾಗಲೇ ನೂರಾರು ಪ್ರಯಾಣಿಕರು ಪಿಕ್ ಪಾಕೆಟ್ ಕಳ್ಳರ ಕೈಚಳಕ್ಕಕೆ ಬಲಿಯಾಗಿದ್ದು ಹಲವಾರು ಜನ ಹಣ ಹಾಗೂ ತಮ್ಮ ಬೆಲೆ ಬಾಳುವ ಮೊಬೈಲ್ ಗಳನ್ನು ಕಳೆದುಕೊಂಡಿದ್ದಾರೆ. ಬಸ್ ನಿಲ್ದಾಣದಲ್ಲಿ ಹೆಸರಿಗೆ ಮಾತ್ರ ಸಿ.ಸಿ.ಟಿ.ವಿ ಗಳಿದ್ದು ಅವು ಕಾರ್ಯಾಚರಣೆ ಮಾಡುತ್ತಿಲ್ಲ. ಬಸ್ ನಿಲ್ದಾಣದಲ್ಲಿನ ಜನದಟ್ಟಣೆಗೆ ತಕ್ಕಂತೆ ಕುಳಿತು ಕೊಳ್ಳುವ ಆಸನ ವ್ಯವಸ್ಥೆಗಳಿಲ್ಲ. ಶಾಲಾ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಹಾಗೂ ವಯೋವೃದ್ದರು, ದೈನಂದಿನ ಕೆಲಸ ಕಾರ್ಯಗಳಿಗಾಗಿ ಪಟ್ಟಣಕ್ಕೆ ಆಗಮಿಸುವ ಸಾರ್ವಜನಿಕರು ಮತ್ತು ಪಟ್ಟಣದ ಆಸ್ಪತ್ರೆಗೆ ಬರುವ ರೋಗಿಗಳು ಬಸ್ ಹತ್ತಲು ಆಗುತ್ತಿಲ್ಲ. ಉಚಿತ ಬಸ್ ಪ್ರಯಾಣವನ್ನು ಸಾಧನೆ ಎನ್ನುವಂತೆ ಬಿಂಬಿಸಿಕೊಳ್ಳುತ್ತಿರುವ ರಾಜ್ಯ ಸರ್ಕಾರ ಪ್ರಯಾಣಿಕರ ಸುಲಲಿತ ಸಂಚಾರಕ್ಕೆ ಯಾವುದೇ ಕ್ರಮ ವಹಿಸಿಲ್ಲ. ಶಕ್ತಿ ಯೋಜನೆಯ ಪರಿಣಾಮ ಕೆ.ಆರ್.ಪೇಟೆ ಬಸ್ ನಿಲ್ದಾಣ ಸದಾ ತುಂಬಿ ತುಳುಕುತ್ತಿದೆ. ನೆರೆಯ ಮೈಸೂರು, ಚನ್ನರಾಯಪಟ್ಟಣ ಸೇರಿದಂತೆ ದೂರದ ಯಾವುದೇ ಸ್ಥಳಗಳಿಗೂ ಬಸ್ ಹತ್ತಲಾಗದ ಸ್ಥಿತಿ ನಿರ್ಮಾಣವಾಗಿದೆ.
ಮಾನ್ಯ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳೇ ಶಕ್ತಿ ಯೋಜನೆಯ ಅನುಷ್ಠಾನಕ್ಕೆಂದು ನೀವು ಉಚಿತ ಬಸ್ಸಿನ ವ್ಯವಸ್ಥೆ ಮಾಡಿದ್ದೀರಿ, ಆದರೆ ಆ ಅವ್ಯವಸ್ಥೆ ಯಾವ ಮಟ್ಟಿಗಾಗಿದೆ ಎಂಬುದನ್ನು ಒಮ್ಮೆ ನೀವು ಬಸ್‍ನಲ್ಲಿ ಪ್ರಯಾಣಿಸಿ ಖಾತ್ರಿಪಡಿಸಿಕೊಳ್ಳಿ ಎಂದು ಕೆ.ಎಸ್.ಆರ್.ಟಿ.ಸಿ ಬಸ್‍ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಆಗ್ರಹಿಸಿದ್ದಾರೆ.
ಈ ಕುರಿತು ತಾಲ್ಲೂಕು ಹೆಚ್.ಡಿ.ದೇವೇಗೌಡ ಅಭಿಮಾನಿ ಬಳಗದ ಅಧ್ಯಕ್ಷ ಗೌರೀಶ್ ಮಾತನಾಡಿ ಸರ್ಕಾರ ಜನರಿಗೆ ಕಲ್ಪಿಸಿರುವ ಗ್ಯಾರಂಟಿಗಳನ್ನು ನಾವು ಸ್ವಾಗತಿಸುತ್ತೇವೆ. ಆದರೆ ಗ್ಯಾರಂಟಿಗಳ ಹೆಸರಿನಲ್ಲಿ ಮೋಸ, ವಂಚನೆ, ದೋಖಾ ಮಾಡುವುದನ್ನು ನಾಗರೀಕರು ಎಂದಿಗೂ ಸಹಿಸುವುದಿಲ್ಲ. ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಪ್ರತಿದಿನ ಬಸ್ ಮೂಲಕ ಸಂಚರಿಸುವ ಸರ್ಕಾರಿ ನೌಕರರಿಗೆ, ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ, ಶಾಲಾ ಕಾಲೇಜುಗಳಿಗೆ ಹೋಗಲು ತುಂಬಾ ತೊಂದರೆಯಾಗುತ್ತಿದೆ. ಉಚಿತ ಬಸ್‍ನಲ್ಲಿ ಅನಾವಶ್ಯಕವಾಗಿ ಓಡಾಡುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಪ್ರಯಾಣಿಕರಿಗೆ ಅನುಗುಣವಾಗಿ ನೀವು ಬಿಟ್ಟಿರುವ ಬಸ್ಸುಗಳ ಸಂಖ್ಯೆ ಕಡಿಮೆ ಇದೆ. ಯಾವುದೇ ಗ್ಯಾರಂಟಿಗಳನ್ನ ಕೊಡಬೇಕಾದರೆ ಮೊದಲು ಅದರ ಸಾಧಕ ಬಾಧಕಗಳನ್ನು ನೋಡಿಕೊಡಬೇಕು. ಅನಂತರ ತಜ್ಞರ ವರದಿ ಆಧರಿಸಿ ಅನುಷ್ಟಾನಗೊಳಿಸಬೇಕು. ಆದರೆ ನೀವು ಹಾಗೆ ಮಾಡಲಿಲ್ಲ. ಮತಬ್ಯಾಂಕ್ ರಾಜಕಾರಣದ ಉದ್ದೇಶದಿಂದ ಶಕ್ತಿ ಯೋಜನೆ ಜಾರಿಗೊಂಡಿದ್ದು ಇದರಿಂದ ಹಣಕೊಟ್ಟು ಪ್ರಯಾಣಿಸುತ್ತಿರುವ ಸಾರ್ವಜನಿಕರಿಗೆ ನಿತ್ಯ ಕಿರುಕುಳವಾಗಿದೆ ಎಂದಿದ್ದಾರೆ.
ಬಸ್ಸುಗಳ ಕೊರತೆಯಿಂದಾಗಿ ಹಲವಾರು ಮಾರ್ಗಗಳಲ್ಲಿ ಸಂಚರಿಸುವ ಬಸ್ಸುಗಳನ್ನು ನಿಲ್ಲಿಸಲಾಗಿದೆ. ಪ್ರತಿದಿನ ಗಂಡಸರು ಬಸ್ಸುಗಳಲ್ಲಿ ಗಂಟೆಗಟ್ಟಲೆ ನಿಂತು ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಕೂಡಲೇ ಹೆಚ್ಚುವರಿ ಬಸ್ಸುಗಳನ್ನು ವ್ಯವಸ್ಥೆ ಮಾಡಿ. ನಿಮ್ಮಿಂದ ಅದು ಸಾಧ್ಯವಾಗದಿದ್ದರೆ ಶಕ್ತಿ ಯೋಜನೆಯನ್ನು ನಿಲ್ಲಿಸಿ ಅದರ ಬದಲು ವಯಸ್ಸಾದವರಿಗೆ ಮತ್ತು ಶಾಲಾ-ಕಾಲೇಜಿಗೆ ಹೋಗುವ ಮಕ್ಕಳಿಗೆ ಉಚಿತ ಬಸ್ ಪ್ರಯಾಣದ ಯೋಜನೆ ರೂಪಿಸಿ ಹಣಕೊಟ್ಟು ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಿ ಎಂದು ಗೌರೀಶ್ ಆಗ್ರಹಿಸಿದ್ದಾರೆ