ಶಕ್ತಿ ಯೋಜನೆಗೆ ಸಚಿವ ಡಾ.ಎಂ.ಸಿ ಸುಧಾಕರ್ ಚಾಲನೆ

ಚಿಕ್ಕಬಳ್ಳಾಪುರ,ಜೂ.೧೨-ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಂಕಣ ಬದ್ದರಾಗಿ ಎಲ್ಲರೂ ದುಡಿಯೋಣ, ಆಡಳಿತದಲ್ಲಿ ಉತ್ತಮ ಸುಧಾರಣೆ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ಉನ್ನತ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ. ಸಿ ಸುಧಾಕರ್ ಅವರು ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿಕ್ಕಬಳ್ಳಾಪುರ ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ “ಶಕ್ತಿ ಯೋಜನೆ” ಚಾಲನೆಯ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಜಿಲ್ಲೆಯ ಸರ್ಕಾರಿ ಆಡಳಿತದಲ್ಲಿ ವಿಳಂಬ ಮತ್ತು ಆಡಚಣೆ ಇದ್ದಲ್ಲಿ ಸರಿಪಡಿಸೋಣ ಆದ್ದರಿಂದ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಸರ್ಕಾರದ ಆಡಳಿತ ವರ್ಗಕ್ಕೆ, ಜನಪ್ರತಿನಿದಿನಗಳ ಗಮನಕ್ಕೆ ತರುವಂತೆ ಹಾಗೂ ಅಭಿವೃದ್ಧಿ ಮತ್ತು ಉತ್ತಮ ಆಡಳಿತಕ್ಕಾಗಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸುವಂತೆ ಸಚಿವರು ಮನವಿ ಮಾಡಿದರು.
ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಸರ್ಕಾರ ಹಲವಾರು ಮಹಿಳಾ ಸಬಲೀಕರಣ ಯೋಜನೆಗಳನ್ನು ಜಾರಿಗೆ ತಂದಿದೆ ಆ ನಿಟ್ಟಿನಲ್ಲಿ ನಮ್ಮ ನೂತನ ಸರ್ಕಾರ ಮಹಿಳೆಯರಿಗೆ ಸರ್ಕಾರಿ ಸಾರಿಗೆ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸುವ “ಶಕ್ತಿ ಯೋಜನೆ” ಯನ್ನು ಇಂದಿನಿಂದ ಜಾರಿಗೆ ತಂದಿದೆ. ಪ್ರತಿನಿತ್ಯ ರಾಜ್ಯದ
೪೧.೮೧ ಲಕ್ಷ ಪ್ರಯಾಣಿಕರು ಈ ಯೋಜನೆಯ ಸೌಲಭ್ಯ ಪಡೆಯಲಿದ್ದಾರೆ. ರಾಜ್ಯದ ಎಲ್ಲ ಮಹಿಳೆಯರಿಗೆ ರಾಜ್ಯದೊಳಗಿನ ಪ್ರಯಾಣಕ್ಕೆ ಮಾತ್ರ ಇದು ಅನ್ವಯ ಆಗಲಿದೆ. ರಾಜ್ಯದ ನಗರ ಸಾರಿಗೆ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಪ್ರಯಾಣಿಸಬಹುದು. ಐಷಾರಾಮಿ ಸಾರಿಗೆಗಳಲ್ಲಿ ಈ ಸೌಲಭ್ಯ ಇರುವುದಿಲ್ಲ.ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಿಸುವವರೆಗೆ ಸರ್ಕಾರಿ ಸ್ವಾಮ್ಯದ ಕಚೇರಿಗಳಿಂದ ವಿತರಿಸಿದ ಭಾವಚಿತ್ರ ಹಾಗೂ ವಾಸದ ವಿಳಾಸವಿರುವ ಗುರುತಿನ ಚೀಟಿಯನ್ನು ನಿರ್ವಾಹಕರು ಶೂನ್ಯ ಟಿಕೆಟ್ ವಿತರಣೆ ಸಂದರ್ಭದಲ್ಲಿ ಪರಿಗಣಿಸುವರು.ಶಕ್ತಿ ಸ್ಮಾರ್ಟ್ ಪಡೆಯಲು ಸೇವಾ ಸಿಂಧು ತಂತ್ರಾಂಶದ ಮೂಲಕ ಇದೆ ಜೂನ್ ೧೫ನೇ ತಾರೀಖಿನಿಂದ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಮುಂದಿನ ಮೂರು ತಿಂಚಿಗಳೊಳಗೆ ಶಕ್ತಿ ಸ್ಮಾರ್ಟ್ ಕಾರ್ಡ್ ಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುವುದು. ಈ ಯೋಜನೆಯ ಫಲಾನುಭವವನ್ನು ರಾಜ್ಯದ ಎಲ್ಲ ಮಹಿಳೆಯರು, ಹೆಣ್ಣು ಮಕ್ಕಳು ಸದುಪಯೋಗ ಪಡಿಸಿಕೊಂಡು ಬದಲಾವಣೆಯಾಗಬೇಕು ಎಂದರು. ಇನ್ನುಳಿದ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸುವ ಪ್ರಕ್ರಿಯೆಗಳನ್ನು ಈ ವೇಳೆ ಸಚಿವರು ತಿಳಿಸಿದರು.