ಶಕ್ತಿ ಯೋಜನೆಗೆ ರೂ.6600 ಕೋಟಿ ನೀಡಲು ಬೇಡಿಕೆ

ಕಲಬುರಗಿ,ಫೆ 9: ರಾಜ್ಯ ಸಾರಿಗೆ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸುವ ಶಕ್ತಿ ಯೋಜನೆಗೆ ಪ್ರಸಕ್ತ ಮುಂಗಡ ಪತ್ರದಲ್ಲಿ ರೂ.6600 ಕೋಟಿ ಅನುದಾನ ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಇಲ್ಲಿನ ಐವಾನ್-ಇ-ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಸಾಲಿನ ಬಾಕಿ ಹಣ ಬಿಟ್ಟು ಈ ಬಾರಿ ಇಷ್ಟು ಪ್ರಮಾಣದ ಅನುದಾನಕ್ಕಾಗಿ ಬೇಡಿಕೆ ಇಡಲಾಗಿದೆ ಎಂದರು.
ರಾಜ್ಯ ಸರಕಾರದಲ್ಲಿ 40 ಪಸೆರ್ಂಟ್ ಕಮಿಷನ್ ವಸೂಲಿ ಮಾಡುವ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಕಂಟ್ರಾಕ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆಂಪಣ್ಣ ಅವರ ಹೇಳಿಕೆ ಪ್ರಸ್ತಾಪಿಸಿದ ಅವರು, ನಮ್ಮಲ್ಲಿ ಅಂತಹ ಯಾವುದೇ ಭ್ರಷ್ಟಾಚಾರ ನಡೆಯುತ್ತಿಲ್ಲ ಎಂದು ಸಮಜಾಯಿಷಿ ನೀಡಿದರು.
ಬಿಜೆಪಿಯವರಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಈ ಹಿಂದಿನ ಬಸವರಾಜ ಬೊಮ್ಮಾಯಿ ಸರಕಾರ ನನ್ನ ರಾಜಕೀಯ ಜೀವನದಲ್ಲಿ ಎಂದೂ ನೋಡದಂತಹ ಭ್ರಷ್ಟ ಸರಕಾರ ಆಗಿತ್ತು ಎಂದು ವ್ಯಾಖ್ಯಾನಿಸಿದರು.
ಕೇವಲ ಮೂರು ವರ್ಷದಲ್ಲಿ ಬೊಮ್ಮಾಯಿ, ಹಾಗೂ ಬಿ.ಎಸ್.ಯಡಿಯೂರಪ್ಪ ಸೇರಿ ಮೂರು ಲಕ್ಷ ಕೋಟಿ ಸಾಲ ಮಾಡಿದ್ದಾರೆ.ನಾವು ರಾಜ್ಯದ ಜನರಿಗೆ ಅನುಕೂಲ ಆಗಲು ಐದು ಗ್ಯಾರಂಟಿಗಳನ್ನು ನೀಡಿದ್ದರೆ, ಬೊಮ್ಮಾಯಿ ಹಾಗೂ ಯಡಿಯೂರಪ್ಪ ಜನರಿಗೆ ಸಾಲದ ಗ್ಯಾರಂಟಿ ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.
60 ವರ್ಷದಲ್ಲಿ ದೇಶದ ಸಾಲ ಕೇವಲ ರೂ.54 ಕೋಟಿ ಇತ್ತು. ಪ್ರಧಾನಿ ಮೋದಿ ಸರಕಾರ ಕಳೆದ ಹತ್ತು ವರ್ಷಗಳಲ್ಲಿ ರೂ. 180 ಲಕ್ಷ ಕೋಟಿ ಸಾಲ ಮಾಡಿದೆ. ಆ ಮೂಲಕ ಪ್ರಧಾನಿ ಮೋದಿ ದೇಶದ ಜನರಿಗೆ ಸಾಲದ ಗ್ಯಾರಂಟಿ ನೀಡಿದ್ದಾರೆ ಎಂದು ರಾಮಲಿಂಗಾರೆಡ್ಡಿ ಟೀಕಿಸಿದರು.ಬಿಜೆಪಿಯವರಿಗೆ ದೇಶ ಮತ್ತು ಸಂವಿಧಾನದ ಕಲ್ಪನೆಯಿಲ್ಲ ಎಂದರಲ್ಲದೆ, ಆರ್.ಎಸ್.ಎಸ್ ಯಾವತ್ತೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ ಎಂದರು.
ಸಂಸದ ಡಿ.ಕೆ ಸುರೇಶ್ ಉತ್ತರ ಮತ್ತು ದಕ್ಷಿಣ ಭಾರತವನ್ನು ಪ್ರತ್ಯೇಕ ದೇಶಗಳನ್ನಾಗಿ ಮಾಡಬೇಕೆಂಬ ಹೇಳಿಕೆ ವಿರೋಧಿಸಿ ದೇಶದಲ್ಲಿ ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಗೆ ತರಬೇಕು ಎಂಬ ಈಶ್ವರಪ್ಪ ಹೇಳಿಕೆಗೆ ಅವರು ಖಾರವಾಗಿ ಪ್ರತಿಕ್ರಿಯಿಸಿದರು.ಈ ಹಿಂದೆ ಕಂಟ್ರಾಕ್ಟರ್ ಸಾವಿಗೆ ಕಾರಣರಾದರಲ್ಲ ಅವರಿಗೆ ಏನು ಮಾಡಬೇಕು ಎಂಬುದನ್ನು ಈಶ್ವರಪ್ಪ ಹೇಳಲಿ ನೋಡೋಣ ಎಂದು ಟಾಂಗ್ ನೀಡಿದರು.