ಶಕ್ತಿ ಯೋಜನೆಗೆ ಕಂಡಕ್ಟರ್ ಧ್ವನಿ

ರಾಯಚೂರು,ಜೂ.೨೫-ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಗೆ ಸಂಬಂಧಿಸಿದಂತೆ ಹಲವು ವಿಚಿತ್ರ, ವಿಶೇಷ ಮತ್ತು ವಿಭಿನ್ನ ಪ್ರಸಂಗಗಳು ದಿನವೂ ನಡೆಯುತ್ತಲೇ ಇರುತ್ತವೆ, ಅದಕ್ಕೆ ಸೇರ್ಪಡೆಯಾದ ಮತ್ತೊಂದು ಘಟನೆ ಎಂದರೆ ರಾಯಚೂರು ನಗರದಲ್ಲಿ ಬಸ್ ಕಂಡಕ್ಟರ್ ಒಬ್ಬರು ಶಕ್ತಿ ಯೋಜನೆ ಕುರಿತು ಹಾಡು ಹಾಡಿ ಟಿಕೆಟ್ ನೀಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸರ್ಕಾರದ ಶಕ್ತಿ ಯೋಜನೆ ಪರಿಣಾಮದಿಂದ ಕಂಡಕ್ಟರ್ ಒಬ್ಬರು ಹಾಡುಗಾರರಾಗಿದ್ದಾರೆ. ಬಸ್ ನಿರ್ವಾಹಕ ಗುರು ದೇವರಮನಿ ಅವರು ಯಾರಿಗುಂಟು ಯಾರಿಗಿಲ್ಲ, ಇದು ಸಿದ್ದರಾಮಯ್ಯ ಸರ್ಕಾರದ ಶಕ್ತಿ ಯೋಜನೆ, ಎಲ್ಲಾದರೂ ಇರು.. ಎಂತಾದರೂ ಇರು.. ಎಂದೆಂದಿಗೂ ಬಸ್ಸಿನಲ್ಲಿ ಫ್ರೀ ಆಗಿ ಪ್ರಯಾಣಿಸ್ತಿರು.., ಅಕ್ಕಾ ನೀ, ತಂಗೀ.. ನೀ ಆಧಾರ್ ತೋರಿಸಿದ್ರೆ ಮಾತ್ರ ಉಚಿತ ಟಿಕೆಟ್ ಕೊಡ್ತೀನಿ ನಾನು, ಇದು ಪಕ್ಕಾ ಅಕ್ಕಾ, ಎಂದು ಪ್ರಯಾಣಿಕರಿಗೆ ಮನರಂಜನೆ ನೀಡುತ್ತಾ ಟಿಕೆಟ್ ಕೊಡುತ್ತಿದ್ದಾರೆ. ಡಾ.ರಾಜ್ ಅಪ್ಪಟ ಅಭಿಮಾನಿಯಾಗಿರುವ ಗುರುಲಿಂಗಪ್ಪ ಜನರ ನೂಕುನುಗ್ಗಲು, ಒತ್ತಡದಿಂದ ಹೊರಬರಲು ಅಣ್ಣಾವ್ರ ಹಾಡುಗಳ ಮೊರೆ ಹೋಗಿದ್ದಾರೆ.ಹಾಡುಗಳನ್ನು ಹಾಡುವ ಮೂಲಕ ಗೊಂದಲ ಗಡಿಬಿಡಿ ನಿವಾರಿಸಿ ಪ್ರಯಾಣಿಕರಿಗೆ ಟಿಕೆಟ್ ನೀಡುತ್ತಿದ್ದಾರೆ.ರಾಯಚೂರು ಡಿಪೋ ಬಸ್ ಕಂಡಕ್ಟರ್ ಗುರುಲಿಂಗಪ್ಪ ಅವರಿಂದಲೂ ಪ್ರಯಾಣಿಕರಿಗೆ ಮನರಂಜನೆ ಸಿಗುತ್ತಿದೆ. . ಜತೆಗೆ ಶಕ್ತಿ ಯೋಜನೆ ಕುರಿತು ಗೀತೆಯನ್ನು ಹಾಡುವ ಮೂಲಕ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಜ್ಯೂ.ರಾಜಕುಮಾರ್ ಅವರು ಮಹಿಳೆಯರಿಗೆ ಉಚಿತ ಯೋಜನೆ, ಅವಸರ ಬೇಡ’ ಮುಂತಾದ ತಮ್ಮದೇ ಸಾಹಿತ್ಯವನ್ನು ಬರೆದು ಸಿನಿಮಾ ಹಾಡುಗಳ ಶೈಲಿಯಲ್ಲಿ ಹಾಡುವ ಮೂಲಕ ತಮ್ಮ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಕಂಡಕ್ಟರ್‌ನ ತಾಳ್ಮೆ ಮತ್ತು ಕಲಾತ್ಮಕತೆಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.