ಶಕ್ತಿ ಇರುವ ತನಕ ಜನರ ಸೇವೆ ಮಾಡ್ತೀನಿ, ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೊಗೆಯಲು ಸಿದ್ದು ಸಂಕಲ್ಪ

ದಾವಣಗೆರೆ, ಆ.3-ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ತಮಗೆ ಶಕ್ತಿ ಇರುವ ತನಕ ಜನ ಸೇವೆ ಮಾಡುತ್ತಲೇ ಇರುತ್ತೇನೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ದಾವಣಗೆರೆಯಲ್ಲಿ ತಮ್ಮ 75 ನೇ ಹುಟ್ಟುಹಬ್ಬ ಆಚರಣೆಯಲ್ಲಿ ಮಾತನಾಡಿದ ಅವರು, ಕೋಮುವಾದಿ, ಭ್ರಷ್ಟ ಸರ್ಕಾರವನ್ನು ನನ್ನ ಜೀವನದಲ್ಲೇ ನೋಡಿಲ್ಲ. ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಲು ನೀವು ಪಣ ತೊಡಬೇಕು ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮೋದಿ ಪ್ರಧಾನಿಯಾದ ಬಳಿಕ ದೇಶ ಸಂಕಷ್ಟದಲ್ಲಿದೆ. ಹಿಂದೂ ರಾಷ್ಟ್ರ ನಿರ್ಮಾಣ ಮಾಡುವುದೇ ಬಿಜೆಪಿಯ ಗುರಿ. ಪ್ರಧಾನಿ ಮೋದಿ, ಬಿಜೆಪಿ ನಾಯಕರಿಗೆ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಕಾಂಗ್ರೆಸ್‌ ಮುಗಿಸುವ ನಿಮ್ಮ ಕನಸು ನನಸಾಗಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶದ ಆಶಾಕಿರಣ ಎಂದು ಬಣ್ಣಿಸಿದ ಅವರು, ಬಡವರು, ದಲಿತರು ಏಳಿಗೆಗೆ ಶ್ರಮಿಸುವವರು ಚುಕ್ಕಾಣಿ ಹಿಡಿಯಲಿ. ಇದಕ್ಕೆ ರಾಹುಲ್ ಗಾಂಧಿರವರು ಅರ್ಹ ವ್ಯಕ್ತಿಯಾಗಿದ್ದಾರೆ ಎಂದರು.
ಡಿಕೆಶಿ, ನನ್ನ ಮಧ್ಯೆ ಬಿರುಕು ಇದೆ ಎಂಬುದಾಗಿ ಕೆಲವರು ಬಿಂಬಿಸುತ್ತಿದ್ದಾರೆ. ಹುಟ್ಟುಹಬ್ಬ ಆಚರಣೆಗೆ ವಿರೋಧವಿದೆ ಎಂದು ಬಿಂಬಿಸುತ್ತಿದ್ದಾರೆ. ಇದು ವಿರೋಧಿಗಳ ಪಿತೂರಿ. ನಾನು, ಡಿಕೆಶಿ ಒಗ್ಗಟ್ಟಾಗಿದ್ದೇವೆ, ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲೆ ಇರಲಿ ಎಂದು ಮನವಿ ಮಾಡಿದರು.
ಜನರ ಸೇವೆಯನ್ನು ನಾನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಶಕ್ತಿಯೇ ಪ್ರಮುಖವಾದುದು. ಜನರ ಆಶೀರ್ವಾದ ಇದ್ದಾಗ ಮಾತ್ರ, ಜನರ ಸೇವೆ ಮಾಡಲು ಆಗುವುದು. ಜನರ ಸೇವೆ ಮಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು. ಕರ್ನಾಟಕದ ಎಲ್ಲಾ ಜನತೆಗೆ ಧನ್ಯವಾದಗಳು. ನನಗೆ ಶಕ್ತಿ ಇರುವವರೆಗೂ ಜನರ ಸೇವೆಯನ್ನು ಮುಂದುವರೆಸುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ರಾಹುಲ್‌ ಗಾಂಧಿರವರಿಗೆ ಕೋಟಿ ಕೋಟಿ ನಮನ. ನನ್ನ ಮೇಲೆ ರಾಹುಲ್‌ ಅವರು ವಿಶೇಷ ಪ್ರೀತಿ ಇಟ್ಟುಕೊಂಡಿದ್ದಾರೆ. ನಾನು ಕಾಂಗ್ರೆಸ್‌ ಸೇರಿದಾಗಿನಿಂದಲೂ, ಬೇರೆ ಪಕ್ಷದಿಂದ ಕಾಂಗ್ರೆಸ್‌ಗೆ ಬಂದಿದ್ದರೂ ನನ್ನ ಬಗ್ಗೆ ವಿಶೇಷ ಪ್ರೀತಿ ಇದೆ ಎಂದರು.
ಇಡೀ ದೇಶದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸ್ತಿದ್ದೇವೆ. ನಿಮಗೆಲ್ಲರಿಗೂ ಸ್ವಾತಂತ್ರ್ಯ ಅಮೃತ ಮಹೋತ್ಸವದ ಶುಭಾಶಯ. ನನಗೆ ಇಂದಿಗೆ 75 ವರ್ಷ ತುಂಬಿದೆ. ನಾನು ಈ ಹಿಂದೆ ಎಂದೂ ಹುಟ್ಟುಹಬ್ಬ ಆಚರಿಸಿರಲಿಲ್ಲ. ಹಿತೈಷಿಗಳ ಒತ್ತಾಯದಂತೆ 75ನೇ ಹುಟ್ಟುಹಬ್ಬ ಆಚರಣೆಗೆ ಒಪ್ಪಿದೆ. ಸ್ನೇಹಿತರು, ಹಿತೈಷಿಗಳ ಒತ್ತಾಯಕ್ಕೆ ಮಣಿದು ಬರ್ತ್‌ಡೇ ಆಚರಣೆ ಮಾಡಿಕೊಳ್ಳುತ್ತಿದ್ದೇನೆ. ಕಾರ್ಯಕ್ರಮ ಯಶಸ್ವಿಯಾಗಿ ಮಾಡಿದ್ದಕ್ಕೆ ಎಲ್ಲರಿಗೂ ಧನ್ಯವಾದ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವ ಕುಮಾರ್ ಮಾತನಾಡಿ. ಸಿದ್ದರಾಮಯ್ಯ ಕೇವಲ ಹಿಂದುಳಿದ ವರ್ಗಗಳ ನಾಯಕರಲ್ಲ, ಅವರು ಸರ್ವ ಜನಾಂಗ, ಧರ್ಮದ ನಾಯಕ. ಅವರ ಮುಂದಾಳತ್ವದಲ್ಲಿ ಕೆಲಸ ಮಾಡೋಣ ಎಂದು ಹೇಳಿದರು
ರಾಜ್ಯದಲ್ಲಿರುವ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು. ಈ ನಿಟ್ಟಿನಲ್ಲಿ ಒಗಟ್ಟಿನಿಂದ ದುಡಿಯೋಣ ಎಂದು ಜನರಿಗೆ ಕರೆ ನೀಡಿದರು.